ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ ಪ್ರಕರಣ
ಬೆಂಗಳೂರು, ಆಗಸ್ಟ್ 14: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಅಕ್ರಮವಾಗಿ ಮೊಬೈಲ್ ಹಾಗೂ ಸಿಮ್ ಕಾರ್ಡ್‌ಗಳನ್ನು ಪೂರೈಸುವ ಬೃಹತ್ ಮತ್ತು ವ್ಯವಸ್ಥಿತ ಜಾಲವೊಂದು ಸಕ್ರಿಯವಾಗಿರುವುದು ಮತ್ತೊಮ್ಮೆ ಬೆಳಕಿಗೆ ಬಂದಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇರುವ ಜೈಲಿನ ಬ್ಯಾರಕ್ ಮೇಲೆ ಇತ್ತೀಚೆಗೆ ಸಿಸಿಬಿ ಮತ್ತು ಜೈಲಾಧಿಕಾರಿಗಳು ಜಂಟಿ ದಾಳಿ ನಡೆಸಿದಾಗ ಮೊಬೈಲ್‌ಗಳು ಪತ್ತೆಯಾಗಿದ್ದ ಪ್ರಕರಣದ ತನಿಖೆ ವೇಳೆ ಈಗ ಆಘಾತಕಾರಿ ಮುಖ್ಯಾಂಶಗಳು ಲಭ್ಯವಾಗಿವೆ.
ಆಂಧ್ರಪ್ರದೇಶ ಮೂಲದ ಸಿಮ್ ಕಾರ್ಡ್ ಲಿಂಕ್
ಜೈಲಾಧಿಕಾರಿಗಳ ಜಂಟಿ ಕಾರ್ಯಾಚರಣೆ ವೇಳೆ ಪ್ರಜ್ವಲ್ ರೇವಣ್ಣ ಅವರ ಬಳಿ ಪತ್ತೆಯಾಗಿದ್ದ ಸಿಮ್ ಕಾರ್ಡ್ ನೆರೆರಾಜ್ಯ ಆಂಧ್ರಪ್ರದೇಶ ಮೂಲದ್ದು ಎನ್ನುವುದು ತನಿಖೆಯಲ್ಲಿ ದೃಢಪಟ್ಟಿದೆ. ಕೇವಲ ಪ್ರಜ್ವಲ್ ರೇವಣ್ಣ ಮಾತ್ರವಲ್ಲದೆ, ಈ ಹಿಂದೆ ಜೈಲಿನೊಳಗೆ ಸಿಕ್ಕಿಬಿದ್ದಿದ್ದ ಬಹುತೇಕ ಮೊಬೈಲ್‌ಗಳಲ್ಲಿದ್ದ ಸಿಮ್ ಕಾರ್ಡ್‌ಗಳು ಕೂಡ ಆಂಧ್ರಪ್ರದೇಶ ಮೂಲದ್ದೇ ಆಗಿದ್ದವು. ಹೀಗಾಗಿ ಜೈಲಿನೊಳಗೆ ಈ ನಿಷೇಧಿತ ವಸ್ತುಗಳನ್ನು ಸಾಗಿಸಲು ಆಂಧ್ರಪ್ರದೇಶದ ಲಿಂಕ್ ಇರುವ ನಿರ್ದಿಷ್ಟ ಜಾಲವೊಂದು ಕೆಲಸ ಮಾಡುತ್ತಿದ್ದು, ಪೊಲೀಸರು ಮತ್ತು ಜೈಲಾಧಿಕಾರಿಗಳು ಈಗ ಆ ಜಾಲದ ಬೆನ್ನುಬಿದ್ದಿದ್ದಾರೆ.
ದಾಳಿಯಲ್ಲಿ ಸಿಕ್ಕಿದ್ದೆಲ್ಲಾ ಒಂದೇ ಕಂಪನಿಯ ಮೊಬೈಲ್‌ಗಳು!
ಸಿಸಿಬಿ ಪೊಲೀಸರು ಮತ್ತು ಕಾರಾಗೃಹದ ಸಿಬ್ಬಂದಿ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಒಟ್ಟು 3 ಮೊಬೈಲ್‌ಗಳು ಜಪ್ತಿಯಾಗಿದ್ದವು. ವಿಚಿತ್ರವೆಂದರೆ, ಸೀಜ್ ಮಾಡಲಾದ ಮೂರೂ ಮೊಬೈಲ್‌ಗಳು ಒಂದೇ ಕಂಪನಿಗೆ ಸೇರಿವೆ. ಜೈಲಿನೊಳಗೆ ಬೇರೆ ಬೇರೆ ಮೂಲಗಳಿಂದ ಮೊಬೈಲ್ ಫೋನ್‌ಗಳು ಬಂದಿದ್ದರೆ ಅವು ಬೇರೆ ಬೇರೆ ಬ್ರ್ಯಾಂಡ್‌ಗಳದ್ದಾಗಿರುತ್ತಿದ್ದವು. ಆದರೆ ಎಲ್ಲವೂ ಒಂದೇ ಕಂಪನಿಯದ್ದಾಗಿರುವುದರಿಂದ, ಇವೆಲ್ಲವನ್ನೂ ಒಬ್ಬನೇ ವ್ಯಕ್ತಿ ಅಥವಾ ಒಂದೇ ಗ್ಯಾಂಗ್ ಜೈಲಿನೊಳಗೆ ವ್ಯವಸ್ಥಿತವಾಗಿ ರವಾನಿಸಿದೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ಹಳೇ ಪ್ರಕರಣಗಳಿಗೂ ಇದೆ ಒಂದೇ ಕಂಪನಿಯ ಕನೆಕ್ಷನ್
ಜೈಲಿನಲ್ಲಿ ಒಂದೇ ಕಂಪನಿಯ ಮೊಬೈಲ್‌ಗಳು ಸಿಗುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಮಾರ್ಚ್ ತಿಂಗಳಿನಲ್ಲೂ ಜೈಲಾಧಿಕಾರಿಗಳು ತಪಾಸಣೆ ನಡೆಸಿದಾಗ ಒಟ್ಟು 9 ಮೊಬೈಲ್‌ಗಳು ಪತ್ತೆಯಾಗಿದ್ದವು. ಅದರಲ್ಲಿ 7 ಮೊಬೈಲ್‌ಗಳು ಒಂದೇ ನಿರ್ದಿಷ್ಟ ಕಂಪನಿಯದ್ದಾಗಿದ್ದವು. ಇದೇ ಜಾಲವನ್ನು ಬಳಸಿ ಈ ಹಿಂದೆ ಜೈಲಿನ ಒಳಗಿದ್ದ ಕೆಲವು ದುಷ್ಕರ್ಮಿಗಳು ಡಿಜಿಪಿ ಅಲೋಕ್ ಕುಮಾರ್ ವಿರುದ್ಧ ವಿಡಿಯೋ ಮಾಡಿ ಜೈಲಿನಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಸದ್ಯ ಹಳೇ ಪ್ರಕರಣ ಹಾಗೂ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆಯಾದ ಪ್ರಕರಣ ಎರಡಕ್ಕೂ ಸಾಮ್ಯತೆ ಇರುವುದರಿಂದ ಪರಪ್ಪನ ಅಗ್ರಹಾರ ಪೊಲೀಸರು ಹಾಗೂ ಜೈಲಾಧಿಕಾರಿಗಳು ಜಂಟಿಯಾಗಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
