ನಮ್ಮ ಕಾರ್ಯನಿರತ ಮತ್ತು ಒತ್ತಡದ ಜೀವನದಲ್ಲಿ ನಮಗಾಗಿ ಸಮಯ ಕಂಡುಕೊಳ್ಳುವುದು, ನಮ್ಮನ್ನು ನಾವು ಫಿಟ್ ಆಗಿ ಇಟ್ಟುಕೊಳ್ಳುವುದೇ ಕಷ್ಟಸಾಧ್ಯವಾಗಿದೆ. ಹೆಚ್ಚಿನ ಜನರು ಜಿಮ್‌ಗೆ ಹೋಗುವುದರಿಂದ ಮತ್ತು ವ್ಯಾಯಾಮ ಮಾಡುವುದರಿಂದ ಮಾತ್ರ ದೇಹವು ಆರೋಗ್ಯವಾಗಿ ಮತ್ತು ಫಿಟ್ ಆಗಿರುತ್ತೆ ಎಂದು ನಂಬುತ್ತಾರೆ, ಆದರೆ ಪ್ರತಿದಿನ 30 ರಿಂದ 1 ಗಂಟೆಗಳ ಕಾಲ ನಡೆಯುವುದರಿಂದಲೂ (walking) ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬಹುದು. ಹೌದು ವ್ಯಾಯಾಮ ಮಾಡಲು ಸಾಧ್ಯವಾಗೋಲ್ಲ ಎನ್ನುವವರು ಪ್ರತಿದಿನ 1 ಗಂಟೆಗಳ ಕಾಲ ವಾಕಿಂಗ್ ಮಾಡಿ, ಈ ಅಭ್ಯಾಸ ಖಂಡಿತವಾಗಿಯೂ ದೇಹದಲ್ಲಿ ಅದ್ಭುತ ಬದಲಾವಣೆಗಳನ್ನು ತರುತ್ತದೆ. ಹಾಗಿದ್ರೆ ವಾಕಿಂಗ್ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ತಿಳಿಯಿರಿ.
ಪ್ರತಿನಿತ್ಯ ವಾಕಿಂಗ್ ಮಾಡುವುದರಿಂದ ಲಭಿಸುವ ಪ್ರಯೋಜನಗಳು:
ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಹೃದಯವನ್ನು ಬಲಪಡಿಸುತ್ತದೆ: ಪ್ರತಿದಿನ ನಡೆಯುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ರಕ್ತದೊತ್ತಡವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಮತ್ತು ಹೃದಯವನ್ನು ಬಲಪಡಿಸುತ್ತದೆ. ಒಂದು ವರದಿಯ ಪ್ರಕಾರ, ಒಬ್ಬ ವ್ಯಕ್ತಿಯು ಪ್ರತಿದಿನ ಅರ್ಧ ಗಂಟೆ ನಡೆದರೆ, ಪಾರ್ಶ್ವವಾಯು ಅಪಾಯವನ್ನು ಶೇಕಡಾ 20 ರಿಂದ 40 ರಷ್ಟು ಕಡಿಮೆಯಾಗುತ್ತದೆ.
ತೂಕ ಇಳಿಸಿಕೊಳ್ಳಲು ಸಹಕಾರಿ: ಜಿಮ್‌ಗೆ ಹೋಗದೆ ಸುಲಭವಾಗಿ ತೂಕ ಇಳಿಸಿಕೊಳ್ಳಬೇಕು ಎನ್ನುವವರು ಪ್ರತಿನಿತ್ಯ ವಾಕಿಂಗ್ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಪ್ರತಿದಿನ ಒಂದು ಗಂಟೆ ಚುರುಕಾದ ನಡಿಗೆ ಕ್ಯಾಲೊರಿಗಳನ್ನು ಸುಡಲು ಉತ್ತಮ ಮಾರ್ಗವಾಗಿದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಕೊಬ್ಬನ್ನು ವೇಗವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸ್ನಾಯುಗಳು ಮತ್ತು ಮೂಳೆಗಳು ಬಲಗೊಳ್ಳುತ್ತವೆ: ಪ್ರತಿದಿನ ನಡೆಯುವುದರಿಂದ ಕಾಲುಗಳು, ಸೊಂಟ ಮತ್ತು ಹೊಟ್ಟೆಯ ಸ್ನಾಯುಗಳು ಬಲಗೊಳ್ಳುತ್ತವೆ. ಅಲ್ಲದೆ ಇದು ಮೂಳೆಯ ಸಾಂದ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಕೀಲು ನೋವನ್ನು ನಿವಾರಿಸುತ್ತದೆ.
ಉಸಿರಾಟದ ಸಮಸ್ಯೆಗಳಿಂದ ಪರಿಹಾರ: ನಾವು ವೇಗವಾಗಿ ನಡೆಯುವಾಗ, ನಮ್ಮ ಉಸಿರಾಟದ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದಾಗಿ, ಆಮ್ಲಜನಕವು ರಕ್ತವನ್ನು ವೇಗವಾಗಿ ತಲುಪುತ್ತದೆ, ಇದು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಈ ಪ್ರಕ್ರಿಯೆಯು ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ಮಾನಸಿಕ ಶಾಂತಿ ಮತ್ತು ಉತ್ತಮ ನಿದ್ರೆ: ನಡಿಗೆ ನಮ್ಮ ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಪ್ರತಿದಿನ ನಡೆಯುವವರಲ್ಲಿ ನಿದ್ರಾಹೀನತೆಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ನಡಿಗೆ ಮನಸ್ಸನ್ನು ಶಾಂತವಾಗಿರಿಸುತ್ತದೆ ಮತ್ತು ರಾತ್ರಿಯಲ್ಲಿ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಧೂಮಪಾನ ಮಾಡುವುದರಿಂದ ನಿಜಕ್ಕೂ ಒತ್ತಡ ಕಡಿಮೆಯಾಗುತ್ತದೆಯೇ? ತಜ್ಞರು ಈ ಬಗ್ಗೆ ಏನೆನ್ನುತ್ತಾರೆ
ಒತ್ತಡವನ್ನು ಕಡಿಮೆ ಮಾಡುತ್ತದೆ: ನಡಿಗೆಯು ಎಂಡಾರ್ಫಿನ್‌ಗಳನ್ನು ಸಕ್ರಿಯಗೊಳಿಸುತ್ತದೆ, ಇದು ಒತ್ತಡವನ್ನು ನಿವಾರಿಸುತ್ತದೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ. ವಿಶೇಷವಾಗಿ ಬೆಳಗಿನ ನಡಿಗೆಯು ಮಾನಸಿಕ ಶಾಂತಿಯನ್ನು ಹೆಚ್ಚಿಸುತ್ತದೆ.
ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ: ನಿಯಮಿತ ನಡಿಗೆಯು ಟೈಪ್ 2 ಮಧುಮೇಹ, ಕೆಲವು ರೀತಿಯ ಕ್ಯಾನ್ಸರ್ ಮತ್ತು ಆಲ್ಝೈಮರ್ ಕಾಯಿಲೆಯಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ: ನಡಿಗೆಯು ದೇಹದಾದ್ಯಂತ ರಕ್ತ ಪರಿಚಲನೆ ಮತ್ತು ಆಮ್ಲಜನಕದ ಹರಿವನ್ನು ಹೆಚ್ಚಿಸುವ ಮೂಲಕ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
