Headlines

ಪ್ರಧಾನಿ ಮೋದಿಗೆ ಇಂಡೋನೇಷ್ಯಾದ ಅತ್ಯುನ್ನತ ನಾಗರಿಕ ಗೌರವ ‘ಬಿಂಟಾಂಗ್ ಆದಿಪೂರ್ಣ’ ಪ್ರದಾನ – Kannada News | PM Modi Honored with Indonesia’s Top Civilian Award ‘Bintang Adipurna’ for Global Leadership

ಜಕಾರ್ತಾ, ಜುಲೈ 07: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ಇಂಡೋನೇಷ್ಯಾ ದೇಶದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾದ ‘ಬಿಂಟಾಂಗ್ ಆದಿಪೂರ್ಣ’ (Bintang Adipurna) ಪದಕವನ್ನು ನೀಡಿ ಗೌರವಿಸಲಾಗಿದೆ. ಮಂಗಳವಾರ ಜಕಾರ್ತಾದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ಪ್ರಧಾನಿ ಮೋದಿ ಅವರಿಗೆ ಈ ಅತ್ಯುನ್ನತ ‘ಮೆಡಲ್ ಆಫ್ ಆನರ್’ ಪ್ರದಾನ ಮಾಡಿದರು.

ಇಂಡೋನೇಷ್ಯಾ ಗಣರಾಜ್ಯದ ಏಕತೆ, ನಿರಂತರತೆ ಮತ್ತು ಸಮೃದ್ಧಿಗೆ ಅಸಾಧಾರಣ ಸೇವೆ ಸಲ್ಲಿಸಿದ ಜಾಗತಿಕ ನಾಯಕರಿಗೆ ಮಾತ್ರ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಇಸ್ತಾನಾ ಮೆರ್ಡೆಕಾದಲ್ಲಿ ಭವ್ಯ ಸ್ವಾಗತ
ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಹಂತವಾಗಿ ಇಂಡೋನೇಷ್ಯಾಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಜಕಾರ್ತಾದ ಅಧ್ಯಕ್ಷೀಯ ಭವನವಾದ ‘ಇಸ್ತಾನಾ ಮೆರ್ಡೆಕಾ’ದಲ್ಲಿ ಸಾಂಪ್ರದಾಯಿಕ ಹಾಗೂ ಅತ್ಯಂತ ಭವ್ಯವಾದ ಸ್ವಾಗತವನ್ನು ನೀಡಲಾಯಿತು. ಈ ವೇಳೆ ಪ್ರಧಾನಿಯವರು ಅಲ್ಲಿನ ಅತಿಥಿ ಪುಸ್ತಕದಲ್ಲಿ ಸಹಿ ಹಾಕಿದರು.

2025ರ ಜನವರಿಯಲ್ಲಿ ಭಾರತದ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಅಧ್ಯಕ್ಷ ಸುಬಿಯಾಂಟೊ ಅವರು ಭಾರತಕ್ಕೆ ಭೇಟಿ ನೀಡಿದ್ದರು. ಅದಾದ ಬಳಿಕ ಉಭಯ ದೇಶಗಳ ನಡುವೆ ನಡೆಯುತ್ತಿರುವ ಮೊದಲ ಪ್ರಮುಖ ದ್ವಿಪಕ್ಷೀಯ ಭೇಟಿ ಇದಾಗಿದೆ. ಭಾರತದ ‘ಆಕ್ಟ್ ಈಸ್ಟ್’ ನೀತಿ ಮತ್ತು ಮಹಾಸಾಗರ್ ದೃಷ್ಟಿಕೋನವನ್ನು ಬಲಪಡಿಸಲು ಈ ಪ್ರವಾಸ ಸಹಕಾರಿಯಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಪ್ರಧಾನಿ ಮೋದಿ ಹೇಳಿದ್ದೇನು? ಇದು ಎರಡೂ ದೇಶಗಳ ಸುವರ್ಣ ಯುಗ
ಪ್ರಶಸ್ತಿ ಸ್ವೀಕರಿಸಿದ ಬಳಿಕ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಉಭಯ ದೇಶಗಳ ಸ್ನೇಹವನ್ನು ಕೊಂಡಾಡಿದರು.

ಮತ್ತಷ್ಟು ಓದಿ: ಇಂಡೋನೇಷ್ಯಾ ತಲುಪಿದ ಪ್ರಧಾನಿ ನರೇಂದ್ರ ಮೋದಿ; ಸರ್ಕಾರಿ ಗೌರವದ ಸ್ವಾಗತ

ಸುವರ್ಣ ಭವಿಷ್ಯ: ಭಾರತ ಮತ್ತು ಇಂಡೋನೇಷ್ಯಾ ದೇಶಗಳು ಇತಿಹಾಸದಲ್ಲಿ ಸಮಾನ ಸಂಸ್ಕೃತಿಯನ್ನು ಹಂಚಿಕೊಂಡಿವೆ, ವರ್ತಮಾನದಲ್ಲಿ ಪರಸ್ಪರ ನಂಬಿಕೆ ಹೊಂದಿವೆ ಮತ್ತು ಭವಿಷ್ಯದಲ್ಲಿ ಸಮೃದ್ಧಿಯನ್ನು ಹಂಚಿಕೊಳ್ಳಲಿವೆ. ಒಟ್ಟಾಗಿ ನಾವು ಇಂಡೋನೇಷ್ಯಾ ಎಮಾಸ್ (ಸುವರ್ಣ ಇಂಡೋನೇಷ್ಯಾ) ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸು ಮಾಡುತ್ತೇವೆ.

ಪ್ರಜಾಪ್ರಭುತ್ವದ ಶಕ್ತಿ: ವೈವಿಧ್ಯತೆಯಲ್ಲಿ ಏಕತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಎರಡೂ ದೇಶಗಳ ಜಂಟಿ ಶಕ್ತಿಯಾಗಿದೆ. ಇವಿಎಂ ಒಪ್ಪಂದ ಸೇರಿದಂತೆ ಎರಡೂ ರಾಷ್ಟ್ರಗಳ ಚುನಾವಣಾ ಆಯೋಗಗಳ ನಡುವಿನ ಒಪ್ಪಂದದ ಮೂಲಕ ನಮ್ಮ ಪ್ರಜಾಪ್ರಭುತ್ವ ಸಹಕಾರ ಮತ್ತಷ್ಟು ಬಲಗೊಳ್ಳಲಿದೆ.

ಜಾಗತಿಕ ಶಾಂತಿಗೆ ಕರೆ: ಜಾಗತಿಕ ಪ್ರಕ್ಷುಬ್ಧತೆಯ ಈ ಸಮಯದಲ್ಲಿ ಸಂವಾದ ಮತ್ತು ರಾಜತಾಂತ್ರಿಕತೆ ಮುಖ್ಯವಾಗಿದೆ. ಪ್ಯಾಲೆಸ್ಟೈನ್ ವಿಷಯಕ್ಕೆ ಸಂಬಂಧಿಸಿದಂತೆ ಭಾರತವು ಎರಡು ರಾಷ್ಟ್ರಗಳ ಪರಿಹಾರ ಮತ್ತು ದೀರ್ಘಕಾಲೀನ ಶಾಂತಿಯನ್ನು ಬೆಂಬಲಿಸುತ್ತದೆ.

ಹಿಂದೂ ಮಹಾಸಾಗರ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮುಕ್ತ, ಸುರಕ್ಷಿತ ಹಾಗೂ ಎಲ್ಲರನ್ನೂ ಒಳಗೊಂಡ ವಾತಾವರಣ ನಿರ್ಮಿಸಲು ಭಾರತ ಮತ್ತು ಇಂಡೋನೇಷ್ಯಾ ಜಂಟಿಯಾಗಿ ಶ್ರಮಿಸಲಿವೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:54 am, Tue, 7 July 26

Source link

Leave a Reply

Your email address will not be published. Required fields are marked *