ಪ್ರಧಾನಿ ಮೋದಿಗೆ ಝಲ್ಮುರಿ ಮಾರಿದ್ದ ಬಂಗಾಳದ ವ್ಯಕ್ತಿಗೆ ಪಾಕ್, ಬಾಂಗ್ಲಾದೇಶದಿಂದ ಕೊಲೆ ಬೆದರಿಕೆ – Kannada News | West Bengal man who sold jhalmuri to PM Modi gets death threats from Pakistan and Bangladesh

ನವದೆಹಲಿ, ಮೇ 22: ಚುನಾವಣಾ ಪ್ರಚಾರದ ಸಮಯದಲ್ಲಿ ಪಶ್ಚಿಮ ಬಂಗಾಳದ (West Bengal) ಜಾರ್ಗ್ರಾಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಂಗಾಳದ ಜನಪ್ರಿಯ ತಿಂಡಿಯಾದ ಝಲ್ಮುರಿಯನ್ನು ಮಾರಾಟ ಮಾಡಿದ್ದ ವ್ಯಾಪಾರಿ ವಿಕ್ರಮ್ ಸಾವೊ ಅವರಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಕೊಲೆ ಬೆದರಿಕೆ ಬರುತ್ತಿದೆ ಎಂದು ಹೇಳಿಕೊಂಡಿದ್ದಾರೆ. ವ್ಯಾಪಾರಿ ವಿಕ್ರಮ್ ಪ್ರಕಾರ, ಕಳೆದ ಕೆಲವು ದಿನಗಳಿಂದ ಪ್ರತಿದಿನ ಅಪರಿಚಿತ ಅಂತಾರಾಷ್ಟ್ರೀಯ ನಂಬರ್​ಗಳಿಂದ ಅವರಿಗೆ ಜೀವ ಬೆದರಿಕೆ ಬರುತ್ತಿದೆ.

“ನನಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ವೀಡಿಯೊ ಮತ್ತು ಫೋನ್ ಕರೆಗಳ ಮೂಲಕ ಪದೇ ಪದೇ ಬೆದರಿಕೆ ಕರೆಗಳು ಬರುತ್ತಿವೆ. ಅವರು ನನ್ನನ್ನು ಬಾಂಬ್‌ಗಳಿಂದ ಸ್ಫೋಟಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನನಗೆ ವೀಡಿಯೊ ಕರೆಗಳನ್ನು ಮಾಡುವವರು ನನ್ನನ್ನು ಹೆದರಿಸಲು ಭಯಾನಕ ಸನ್ನೆಗಳನ್ನು ಮಾಡುತ್ತಿದ್ದಾರೆ ಮತ್ತು ಶಸ್ತ್ರಾಸ್ತ್ರಗಳನ್ನು ಸಹ ತೋರಿಸುತ್ತಿದ್ದಾರೆ” ಎಂದು ಅವರು ಸುದ್ದಿ ಸಂಸ್ಥೆ IANSಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಝಲ್ಮುರಿ ಇಲ್ಲಿಗೂ ತಲುಪಿತೇ? ಪ್ರಧಾನಿ ಮೋದಿ ಪ್ರಶ್ನೆಗೆ ನೆದರ್ಲ್ಯಾಂಡ್​​​ನ ಭಾರತೀಯ ವಲಸಿಗರ ಕರತಾಡನ

ಪ್ರಧಾನಿ ಮೋದಿಯವರೊಂದಿಗಿನ ಇವರ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ವಿಕ್ರಮ್ ಅವರಿಗೆ ಅಂತಾರಾಷ್ಟ್ರೀಯ ಕರೆಗಳು ಬರಲಾರಂಭಿಸಿವೆ. ವಿಕ್ರಮ್ ಅವರ ಮೊಬೈಲ್ ಸಂಖ್ಯೆಗೆ +92 (ಪಾಕಿಸ್ತಾನದ ಕೋಡ್) ಮತ್ತು +880 (ಬಾಂಗ್ಲಾದೇಶದ ಕೋಡ್) ಐಡಿಗಳಿಂದ ವಾಟ್ಸಾಪ್ ಕರೆಗಳು ಮತ್ತು ಮೆಸೇಜ್​ಗಳು ಬಂದಿವೆ.

ಕರೆ ಮಾಡಿದ ಅಪರಿಚಿತ ವ್ಯಕ್ತಿಗಳು, “ನೀನು ಮೋದಿಗೆ ಝಲ್ಮುರಿ ತಿನ್ನಿಸಿ ದೊಡ್ಡ ದೇಶಭಕ್ತನಾಗಲು ಹೊರಟಿದ್ದೀಯಾ? ನಿನ್ನನ್ನು ಮತ್ತು ನಿನ್ನ ಇಡೀ ಕುಟುಂಬವನ್ನು ಬಾಂಬ್ ಇಟ್ಟು ಉಡಾಯಿಸುತ್ತೇವೆ” ಎಂದು ಉರ್ದು ಹಾಗೂ ಬೆಂಗಾಲಿ ಭಾಷೆಯಲ್ಲಿ ಬೆದರಿಕೆ ಹಾಕಿದ್ದಾರೆ. ಈ ಬೆದರಿಕೆ ಕರೆಗಳಿಂದ ವಿಕ್ರಮ್ ಮತ್ತು ಅವರ ಕುಟುಂಬಸ್ಥರು ತೀವ್ರ ಭೀತಿಗೊಳಗಾಗಿದ್ದಾರೆ. ಅವರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ, ತಮಗೆ ಬಂದಿರುವ ಬೆದರಿಕೆ ಕರೆಗಳ ನಂಬರ್ ಹಾಗೂ ಆಡಿಯೋ ರೆಕಾರ್ಡಿಂಗ್‌ಗಳನ್ನು ಸಲ್ಲಿಸಿ ಲಿಖಿತ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಚಿಕನ್ ನೆಕ್ ಕಾರಿಡಾರ್​​ನ 120 ಎಕರೆ ಭೂಮಿಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದ ಪಶ್ಚಿಮ ಬಂಗಾಳದ ಸಿಎಂ

ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಪಶ್ಚಿಮ ಬಂಗಾಳ ಪೊಲೀಸರು ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ಸೈಬರ್ ವಿಭಾಗವು ತನಿಖೆಯನ್ನು ಕೈಗೆತ್ತಿಕೊಂಡಿದೆ. ವಿಕ್ರಮ್ ಅವರ ಮನೆ ಮತ್ತು ಅವರು ವ್ಯಾಪಾರ ಮಾಡುವ ಜಾಗಕ್ಕೆ ಸದ್ಯಕ್ಕೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *