ಮೈಸೂರು, ಜುಲೈ 30: ಪ್ರಧಾನಿ ನರೇಂದ್ರ ಮೋದಿ ಅವರ ಆಗಸ್ಟ್ 1ರ ಮೈಸೂರು ಭೇಟಿಗೆ ವಿಶೇಷ ಉಡುಗೊರೆಯೊಂದು ಸಿದ್ಧವಾಗಿದೆ. ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ವಿಯೆಟ್ನಾಂ ಮಾರ್ಬಲ್‌ನಲ್ಲಿ ಕೆತ್ತಿರುವ ಸ್ವಾಮಿ ವಿವೇಕಾನಂದರ ಏಕಶಿಲಾ ಮೂರ್ತಿಯನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಲು ಸಿದ್ಧತೆ ಮಾಡಲಾಗಿದೆ. ಆಗಸ್ಟ್ 1ರಂದು ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದ ಸ್ಮಾರಕ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಇದೇ ವೇಳೆ ಅರುಣ್ ಯೋಗಿರಾಜ್ ಕೆತ್ತಿರುವ ವಿವೇಕಾನಂದರ ಮೂರ್ತಿಯನ್ನು ಪ್ರಧಾನಿಗೆ ನೀಡಲಾಗುತ್ತದೆ.
ಈ ವಿಶೇಷ ಮೂರ್ತಿಯು 8.5 ಕೆ.ಜಿ. ತೂಕ ಮತ್ತು 1.5 ಅಡಿ ಎತ್ತರ ಹೊಂದಿದೆ. ವಿಯೆಟ್ನಾಂ ಮಾರ್ಬಲ್‌ನಲ್ಲಿ ಮೂರ್ತಿಯನ್ನು ನಿರ್ಮಿಸಲಾಗಿದ್ದು, ಕೇವಲ 15 ದಿನಗಳಲ್ಲಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಪೂರ್ಣಗೊಳಿಸಿದ್ದಾರೆ. ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಮೆಮೋರಿಯಲ್‌ನ ಮಾದರಿಯನ್ನು ಆಧರಿಸಿ ಮೂರ್ತಿಯ ವಿನ್ಯಾಸ ರೂಪಿಸಲಾಗಿದೆ. ಪ್ರಧಾನಿ ಮೋದಿ ಅವರು ಸುಲಭವಾಗಿ ಕೈಯಲ್ಲಿ ಹಿಡಿದುಕೊಳ್ಳುವಂತೆ ಮೂರ್ತಿಯ ತೂಕವನ್ನು 10 ಕೆ.ಜಿಗಿಂತ ಕಡಿಮೆ ಇರುವಂತೆ ವಿನ್ಯಾಸಗೊಳಿಸಲಾಗಿದೆ.
ಈ ಹಿಂದೆಯೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವು ಶಿಲ್ಪಗಳನ್ನು ಉಡುಗೊರೆಯಾಗಿ ನೀಡಿರುವುದಾಗಿ ಅರುಣ್ ಯೋಗಿರಾಜ್ ತಿಳಿಸಿದ್ದಾರೆ. ಇದೀಗ ಸ್ವಾಮಿ ವಿವೇಕಾನಂದರ ಮೂರ್ತಿಯನ್ನು ಪ್ರಧಾನಿಗೆ ನೀಡುವ ಅವಕಾಶ ಕಲ್ಪಿಸಿರುವ ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
