ಚಾಮರಾಜನಗರ, ಫೆಬ್ರವರಿ 22: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಡೆಸಿಕೊಡುವ ಜನಪ್ರಿಯ ಮನ್ ಕಿ ಬಾತ್ ಕಾರ್ಯಕ್ರಮ ದೇಶಾದ್ಯಂತ ಪ್ರಸಿದ್ಧಿ ಪಡೆದುಕೊಂಡಿದೆ. ಇಂದಿನ (ಫೆ.22) ಮನ್ ಕಿ ಬಾತ್ (Mann Ki Baat)ನಲ್ಲಿ ಕರ್ನಾಟಕದ ರೈತರನ್ನು ಪ್ರಧಾನಿ ಮೋದಿ ಪ್ರಶಂಸಿದ್ದಾರೆ. ರಾಜ್ಯದ ಸಾಕಷ್ಟು ಜನರು ಒಳ್ಳೆಯ ಕೆಲಸ, ಕಾರ್ಯಗಳನ್ನು ಮಾಡಲು ಮನ್ ಕಿ ಬಾತ್ ಪ್ರೇರಣೆ ಆಗಿದೆ. ಅದರಂತೆ ಚಾಮರಾಜನಗರದಲ್ಲಿ ಓರ್ವ ಗೃಹಿಣಿ ಮೋದಿ ಮಾತು ಕೇಳಿ ಸಿರಿಧಾನ್ಯದ ಹೋಟೆಲ್ ತೆರೆದು ಸ್ವಾವಲಂಬಿ ಬದಕು ಕಟ್ಟಿಕೊಂಡಿದ್ದಾರೆ.
ಆಕಾಶವಾಣಿಯಲ್ಲಿ ಬಿತ್ತರಗೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಮನ್ ಕಿ ಬಾತ್ ಕಾರ್ಯಕ್ರಮದಿಂದ ಪ್ರೇರಣೆಗೊಂಡ ಚಾಮರಾಜನಗರ ತಾಲೂಕಿನ ಮೂಡ್ಲುಪುರ ಗ್ರಾಮದ ಶ್ವೇತಾ ಶಿವಶಂಕರ ಆರಾಧ್ಯ ಅವರು ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಸಿರಿಧಾನ್ಯದ ಆಹಾರದ ಹೋಟೆಲ್ ಅನ್ನು ಆರಂಭಿಸಿ ಯಶಸ್ವಿ ಆಗಿದ್ದಾರೆ.
ಇದನ್ನೂ ಓದಿ: ಬೇಸಿಗೆ ಅಂತ ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಬಿ ಕೇರ್ಫುಲ್ ಎಂದ ಆರೋಗ್ಯ ಇಲಾಖೆ: ಏಕೆ?
ಹೃದಯ ಸ್ನೇಹಿ ಕಡ್ಲೆಹುಳಿ ಹೋಟೆಲ್ ಆರಂಭಿಸಿ ಐದಾರು ಮಂದಿ ಮಹಿಳೆಯರಿಗೆ ಉದ್ಯೋಗ ನೀಡುವ ಜೊತೆಗೆ ಆರೋಗ್ಯಕರ ಆಹಾರ ಉಣ ಬಡಿಸುತ್ತಿದ್ದಾರೆ. ಸಿರಿಧಾನ್ಯದ ಉಪ್ಪಿಟ್ಟು, ಬಾತ್, ವಿವಿಧ ಬಗೆಯ ಪೇಯಗಳನ್ನು ಸವಿಯಲು ನಿತ್ಯ ನೂರಾರು ಜನರು ಇವರ ಹೋಟೆಲ್ಗೆ ಆಗಮಿಸುತ್ತಿದ್ದು, ಆರ್ಥಿಕ ಸ್ವಾವಲಂಬನೆ ಹೊಂದುತ್ತಿದ್ದಾರೆ.
ಪ್ರಧಾನಿ ಮೋದಿ ಮಾತೇ ಸ್ಪೂರ್ತಿ: ಶ್ವೇತಾ
ಇನ್ನು ಈ ಬಗ್ಗೆ ಶ್ವೇತಾ ಅವರು ಮಾತನಾಡಿದ್ದು, ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ವಾವಲಂಬಿಗಳಾಗಬೇಕೆಂದು ನೀಡಿದ ಕರೆ ನನಗೆ ದೊಡ್ಡ ಪ್ರೇರಣೆಯಾಯಿತು. ಅವರ ಮಾತುಗಳಿಂದ ಸ್ಪೂರ್ತಿ ಪಡೆದು ಈ ಹೋಟೆಲ್ ಆರಂಭಿಸಿದ್ದು, ಐದು ತಿಂಗಳುಗಳು ಕಳೆದಿದೆ ಎಂದು ಹೇಳಿದರು.
ಇಂದಿನ ಯುವ ಪೀಳಿಗೆಗೆ ಸಿರಿಧಾನ್ಯಗಳ ಮಹತ್ವವೇ ತಿಳಿದಿಲ್ಲ. ಅವು ನಮ್ಮ ಆಹಾರ ಪದ್ಧತಿಯಿಂದ ದೂರವಾಗಿವೆ. ಆ ಕಾರಣಕ್ಕೆ ಜನರಿಗೆ ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸಿ, ಅವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿದಿನ ಒಂದು ಸಿರಿಧಾನ್ಯವನ್ನು ಬಳಸಿಕೊಂಡು ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಹಾಗೂ ವಿವಿಧ ಕಾಳು ಪದಾರ್ಥಗಳನ್ನು ನೀಡುತ್ತಿದ್ದೇವೆ. ಮನೆಯಲ್ಲಿ ಹೇಗೆ ಅಡುಗೆ ಮಾಡುತ್ತೇವೆಯೋ ಅದೇ ರೀತಿ ಇಲ್ಲಿ ಸಹ ಸಿದ್ಧಪಡಿಸುತ್ತೇವೆ. ಟೇಸ್ಟಿಂಗ್ ಪೌಡರ್ ಅಥವಾ ಯಾವುದೇ ರಾಸಾಯನಿಕಗಳನ್ನು ಬಳಸುವುದಿಲ್ಲ. ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಮತ್ತು ಅವರ ಆರೋಗ್ಯದಲ್ಲಿಯೂ ಉತ್ತಮ ಬದಲಾವಣೆ ಕಂಡುಬಂದಿದೆ ಎಂದು ಶ್ವೇತಾ ಹೇಳಿದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಈ ಬಾರಿ ಬೇಸಿಗೆಯಲ್ಲಿ ಭಾರೀ ಬಿಸಿಲು: ಹವಾಮಾನ ಇಲಾಖೆ ಎಚ್ಚರಿಕೆ ಏನು?
ಒಟ್ಟಿನಲ್ಲಿ ಮನ್ ಕಿ ಬಾತ್ ಪ್ರೇರಣೆ ಪಡೆದು ಹೋಟೆಲ್ ಆರಂಭಿಸುವ ಮೂಲಕ ಶ್ವೇತಾ ಶಿವಶಂಕರ ಯಶಸ್ವಿಯಾಗಿದ್ದಾರೆ. ಜನರಿಗೆ ಉತ್ತಮ ಪೌಷ್ಠಿಕಾಂಶದ ಆಹಾರ ನೀಡುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
