ನವದೆಹಲಿ, ಜುಲೈ 30: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿದ್ದ ವೀಡಿಯೊ ಒಂದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಮೆಟಾ’ (Meta) ಸಂಸ್ಥೆಯು ಕೇಂದ್ರ ಸರ್ಕಾರಕ್ಕೆ ಖುದ್ದಾಗಿ ಪತ್ರ ಬರೆದಿದ್ದು, ಉನ್ನತ ಮಟ್ಟದ ಸುರಕ್ಷತಾ ಕ್ರಮಗಳ ಭರವಸೆ ನೀಡಿದೆ. ಜುಲೈ 23 ರಂದು ಪರೀಕ್ಷಾ ಪತ್ರಿಕೆ ಸೋರಿಕೆ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯ ನಡುವೆ, ಪ್ರಧಾನಿ ಮೋದಿ ಅವರು ‘ಜೆನ್ ಝಿ’ ಉದ್ದೇಶಿಸಿ ಪರೀಕ್ಷಾ ಅಕ್ರಮಗಳ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು.
ಪ್ರಧಾನಿ ಮೋದಿ ಸೇರಿದಂತೆ ದೇಶದ ಪ್ರಮುಖ ವಿವಿಐಪಿ ಖಾತೆಗಳ ಪೋಸ್ಟ್‌ಗಳಿಗೆ ಹೆಚ್ಚುವರಿ ಭದ್ರತೆ ಮತ್ತು ಪ್ರತ್ಯೇಕ ಮೇಲ್ವಿಚಾರಣೆ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.ಇನ್ಮುಂದೆ ಪ್ರಮುಖ ಖಾತೆಗಳ ಯಾವುದೇ ವಿಷಯ ಅಥವಾ ಪೋಸ್ಟ್ ಅನ್ನು ಬ್ಲಾಕ್ ಮಾಡುವ ಮೊದಲು ಮೆಟಾ ಸಂಸ್ಥೆಯ ಕನಿಷ್ಠ ಇಬ್ಬರು ಅತ್ಯುನ್ನತ ಅಧಿಕಾರಿಗಳು ಸಮಗ್ರ ತನಿಖೆ ನಡೆಸಲಿದ್ದಾರೆ. ಕೃತಕ ಬುದ್ಧಿಮತ್ತೆ ಆಧಾರಿತ ‘ಎಐ ಮಾಡರೇಶನ್ ವ್ಯವಸ್ಥೆಯಲ್ಲಾದ’ತಾಂತ್ರಿಕ ದೋಷದಿಂದ ಈ ವಿಡಿಯೋ ಬ್ಲಾಕ್ ಆಗಿತ್ತು ಎಂದು ಮೆಟಾ ಸಮಜಾಯಿಷಿ ನೀಡಿದೆ.
ಮೆಟಾ ವಿವರಣೆಗೆ ತೃಪ್ತಿಯಾಗದ ಸಚಿವಾಲಯ: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಮೆಟಾ ನೀಡಿದ ಕ್ಷಮೆಯಾಚನೆ ಮತ್ತು ತಾಂತ್ರಿಕ ದೋಷದ ವಿವರಣೆಯನ್ನು ತಿರಸ್ಕರಿಸಿದೆ.
ಮತ್ತಷ್ಟು ಓದಿ: ಪ್ರಧಾನಿ ಮೋದಿ ಪೋಸ್ಟ್ ತಡೆಹಿಡಿದ ಫೇಸ್‌ಬುಕ್: ಇದು ಭಾರತದ ಪ್ರಜಾಪ್ರಭುತ್ವದ ಮೇಲಿನ ಹಸ್ತಕ್ಷೇಪ, ತಜಿಂದರ್ ಬಗ್ಗಾ ಆಕ್ರೋಶ
ಐಟಿ ಕಾರ್ಯದರ್ಶಿ ಹೇಳಿಕೆ: “ಮೆಟಾ ಸಂಸ್ಥೆಯು ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದೆ. ಆದರೆ ಅವರು ನೀಡಿದ ಕಾರಣ ನಮಗೆ ತೃಪ್ತಿ ತಂದಿಲ್ಲ. ದೇಶದ ಪ್ರಧಾನಿಯವರ ಅಧಿಕೃತ ಖಾತೆಯ ಪೋಸ್ಟ್‌ಗೇ ಈ ರೀತಿ ಆದರೆ, ಎಐ (AI) ವ್ಯವಸ್ಥೆಯ ವಿಶ್ವಾಸಾರ್ಹತೆ ಎಲ್ಲಿದೆ?” ಎಂದು ಐಟಿ ಕಾರ್ಯದರ್ಶಿ ಎಸ್. ಕೃಷ್ಣನ್ ಪ್ರಶ್ನಿಸಿದ್ದಾರೆ.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಮೆಟಾ ಹಾಗೂ ಇನ್‌ಸ್ಟಾಗ್ರಾಮ್‌ನ ಜಾಗತಿಕ ಮುಖ್ಯಸ್ಥರಿಗೆ ಮುಖಾಮುಖಿ ವಿಚಾರಣೆಗೆ ಸಮನ್ಸ್ ಜಾರಿ ಮಾಡಿದ್ದು, ಈ ವಾರದ ಕೊನೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ.
ಭಾರತದ ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳ ಪ್ರಕಾರ, ದೇಶದ ಸಾಂವಿಧಾನಿಕ ಹುದ್ದೆಯಲ್ಲಿರುವವರ ಖಾತೆಗಳನ್ನು ಅಥವಾ ಸರ್ಕಾರದ ಅಧಿಕೃತ ಮಾಹಿತಿಯನ್ನು ಯಾವುದೇ ಆಧಾರವಿಲ್ಲದೆ ನಿರ್ಬಂಧಿಸುವುದು ಕಾನೂನುಬಾಹಿರ.
ಸೋಶಿಯಲ್ ಮೀಡಿಯಾ ಸಂಸ್ಥೆಗಳು ಕಂಟೆಂಟ್ ಮಾಡರೇಶನ್‌ಗೆ ಸಂಪೂರ್ಣವಾಗಿ ‘ಎಐ’ಮೇಲೆ ಅವಲಂಬಿತವಾಗಿರುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
