ಪೂಜಾ ಹೆಗ್ಡೆ (Pooja Hegde), ಪ್ಯಾನ್ ಇಂಡಿಯಾ ನಟಿ. ಕೆಲ ವರ್ಷಗಳ ಹಿಂದಿನ ವರೆಗೆ ತೆಲುಗು ಚಿತ್ರರಂಗದ ಟಾಪ್ ನಟಿಯಾಗಿದ್ದ ಪೂಜಾ ಹೆಗ್ಡೆ ಅಲ್ಲು ಅರ್ಜುನ್, ಪ್ರಭಾಸ್, ರಾಮ್ ಚರಣ್, ಜೂ ಎನ್ಟಿಆರ್ ಇನ್ನೂ ಕೆಲವು ಸೂಪರ್ ಸ್ಟಾರ್ ನಟರುಗಳೊಟ್ಟಿಗೆ ನಟಿಸಿದರು. ಆದರೆ ಅಚಾನಕ್ಕಾಗಿ ತೆಲುಗು ಚಿತ್ರರಂಗದಿಂದ ಕಾಣೆ ಆಗಿಬಿಟ್ಟರು. ಆದರೆ ಸತತ ನಾಲ್ಕು ವರ್ಷಗಳ ಗ್ಯಾಪ್ ಬಳಿಕ ಇದೀಗ ಮತ್ತೆ ತೆಲುಗು ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ ನಟಿ ಪೂಜಾ ಹೆಗ್ಡೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ತೆಲುಗು ಚಿತ್ರರಂಗದ ಬಗ್ಗೆ ಸಹ ನಟರುಗಳ ಬಗ್ಗೆ ಸಾಕಷ್ಟು ವಿಷಯ ಮಾತನಾಡಿದ್ದು, ಪ್ರಭಾಸ್ ಬಗ್ಗೆಯೂ ಮಾತನಾಡಿದ್ದಾರೆ. ಈ ವೇಳೆ ಪ್ರಭಾಸ್ ಬಳಿ ಇರುವ ಒಂದು ವಸ್ತುವನ್ನು ಕದಿಯುವ ಆಸೆ ತಮಗಿದೆ ಎಂದು ಪೂಜಾ ಹೇಳಿಕೊಂಡಿದ್ದಾರೆ.
ಪ್ರಭಾಸ್ ಬಳಿ ಭಾರತದಲ್ಲೇ ಅಪರೂಪವಾದ, ಐಶಾರಾಮಿ ಆದ ಕಾರುಗಳಿವೆ, ದೊಡ್ಡ ಮನೆಗಳಿವೆ, ಅದ್ಭುತವಾದ ಫಾರಂ ಹೌಸ್ಗಳು ಇವೆ, ಲಕ್ಷುರಿ ವಾಚುಗಳಿವೆ, ಉಡುಗೆಗಳಿವೆ, ಗ್ಯಾಜೆಟ್ಗಳು ಇವೆ. ಆದರೆ ಇವುಗಳನ್ನೆಲ್ಲ ಬಿಟ್ಟು ಪೂಜಾ ಹೆಗ್ಡೆಗೆ, ಪ್ರಭಾಸ್ ಬಳಿ ಇರುವ ಅವರ ಅಡುಗೆಯವನನ್ನು ಕದಿಯುವ ಆಸೆಯಂತೆ. ಅಷ್ಟು ಅದ್ಭುತವಾಗಿ ಆ ಅಡುಗೆಯವ ಅಡುಗೆ ಮಾಡುತ್ತಾರಂತೆ. ಈ ಬಗ್ಗೆ ಪೂಜಾ ಹೆಗ್ಡೆ ಒಂದು ಸಂಗತಿಯನ್ನು ಸಹ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಪೂಜಾ ಹೆಗ್ಡೆ ಹಾಗೂ ಪ್ರಭಾಸ್ ‘ರಾಧೆ-ಶ್ಯಾಮ್’ ಸಿನಿಮಾನಲ್ಲಿ ಒಟ್ಟಿಗೆ ನಟಿಸಿದ್ದರು. ಸಿನಿಮಾ ಚೆನ್ನಾಗಿತ್ತಾದರೂ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಪ್ರದರ್ಶನ ಕಾಣಲಿಲ್ಲ. ಕೋವಿಡ್ ಇಂದಾಗಿ ಯೋಜಿಸಿದಂತೆ ಶೂಟಿಂಗ್ ಸಹ ಚಿತ್ರತಂಡಕ್ಕೆ ಮಾಡಲಾಗಿರಲಿಲ್ಲ. ಈ ಸಿನಿಮಾದ ಶೂಟಿಂಗ್ ಸಮಯದಲ್ಲಿ ನಡೆದ ಸಂಗತಿ ಹಂಚಿಕೊಂಡಿರುವ ಪೂಜಾ, ಸಿನಿಮಾದ ಶೂಟಿಂಗ್ಗಾಗಿ ಪೂಜಾ ಹೆಗ್ಡೆ, ಪ್ರಭಾಸ್ ಇನ್ನಿತರರು ಇಟಲಿಗೆ ತೆರಳಿದ್ದರಂತೆ. ಆದರೆ ಅಲ್ಲಿ ಪೂಜಾ ಅವರ ತಂಡದವರಿಗೆ ಕೋವಿಡ್ ಕಾಣಿಸಿಕೊಂಡಿತಂತೆ. ಇದರಿಂದ ಪೂಜಾ ಬಹಳ ಆಸೆ ಪಟ್ಟಿದ್ದಂತಹ ಪಿಜ್ಜಾ, ಪಾಸ್ತಾಗಳನ್ನು ತಿನ್ನಲಾಗಲಿಲ್ಲವಂತೆ. ಆದರೆ ವಿಷಯ ತಿಳಿದ ಪ್ರಭಾಸ್, ತಮ್ಮ ಅಡುಗೆಯವರಿಗೆ ಹೇಳಿ ಪ್ರತಿ ದಿನವೂ ರುಚಿ-ರುಚಿಯಾದ ಸಸ್ಯಹಾರ ಮಾಡಿಸಿ ಕಳಿಸುತ್ತಿದ್ದರಂತೆ.
ಇದನ್ನೂ ಓದಿ:35ರ ವಯಸ್ಸಲ್ಲಿ ಶಾಲಾ ಬಾಲಕಿ ಆದ ನಟಿ ಪೂಜಾ ಹೆಗ್ಡೆ
ಪ್ರಭಾಸ್ ಅವರ ಆತಿಥ್ಯದ ಬಗ್ಗೆ ಹಲವಾರು ಮಂದಿ ಹೇಳಿಕೊಂಡಿದ್ದಾರೆ. ಪ್ರಭಾಸ್ ರೀತಿ ಇನ್ಯಾವ ನಟರೂ ಆತಿಥ್ಯ ಮಾಡುವುದಿಲ್ಲ ಎನ್ನುತ್ತಾರೆ. ವಿಶೇಷವಾಗಿ ತಮ್ಮ ಸಹನಟರಿಗೆ ಊಟ ಮಾಡಿಸುವುದರಲ್ಲಿ ಪ್ರಭಾಸ್ ನಿಸ್ಸೀಮರಂತೆ. ‘ಸಲಾರ್’ ಸಿನಿಮಾ ಸಮಯದಲ್ಲಿ ಪೃಥ್ವಿರಾಜ್ ಸುಕುಮಾರ್ ಕುಟುಂಬಕ್ಕಾಗಿ ಇಡೀ ಒಂದು ಕೋಣೆ ತುಂಬುವಷ್ಟು ಊಟ ಕಳಿಸಿದ್ದರಂತೆ ಪ್ರಭಾಸ್. ‘ಆದಿಪುರುಷ್’ ಸಿನಿಮಾ ಸಮಯದಲ್ಲಿ ಸೈಫ್ ಅಲಿ ಖಾನ್ ಕುಟುಂಬಕ್ಕಾಗಿ ಬಿರಿಯಾನಿ ಕಳಿಸಿದ್ದರು. ಅದೇ ಸಿನಿಮಾದ ಮುಂಬೈ ಶೂಟಿಂಗ್ ವೇಳೆ, ಹೈದರಾಬಾದ್ನಿಂದ ಕ್ಯಾರಿಯರ್ನಲ್ಲಿ ತೆಲುಗು ಊಟ ತರಿಸಿಕೊಳ್ಳುತ್ತಿದ್ದರು, ಇಡೀ ತಂಡಕ್ಕೂ ತರಿಸುತ್ತಿದ್ದರು ಎಂದು ‘ಆದಿಪುರುಷ್’ ನಿರ್ದೇಶಕ ಓಂ ರಾವತ್ ಹಿಂದೊಮ್ಮೆ ಹೇಳಿದ್ದರು. ಈಗ ಪೂಜಾ ಹೆಗ್ಡೆ ಸಹ ಪ್ರಭಾಸ್ ಆತಿಥ್ಯದ ಬಗ್ಗೆ ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 11:33 am, Fri, 17 July 26