ಪ್ರಭಾಸ್ ಹೊಸ ಸಿನಿಮಾದ ಬಿಡುಗಡೆಗೆ ಮುಹೂರ್ತ ನಿಗದಿ – Kannada News | Prabhas starrer Fauji movie release date fixed

ಪ್ರಭಾಸ್ (Prabhas) ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಇದೇ ವರ್ಷ ಜನವರಿ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದವು ಆದರೆ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಫ್ಲಾಪ್ ಆಯ್ತು. ‘ದಿ ರಾಜಾ ಸಾಬ್’ ಸಿನಿಮಾದ ಬಳಿಕ ಪ್ರಭಾಸ್ ಅವರಿಗೆ ಹಲವು ಸಿನಿಮಾಗಳು ಕೈಯಲ್ಲಿದ್ದವು, ಆದರೆ ಅವರು ಆಯ್ಕೆ ಮಾಡಿದ್ದು ರಘು ಹನುಪುಡಿಯ ಸಿನಿಮಾ. ‘ಫೌಜಿ’ ಹೆಸರಿನ ಸಿನಿಮಾ ಆರಂಭಿಸಿದ ಪ್ರಭಾಸ್, ಆಶ್ಚರ್ಯಕರ ರೀತಿಯಲ್ಲಿ ಚಿತ್ರೀಕರಣವನ್ನೂ ಮುಗಿಸಿದ್ದು, ಸಿನಿಮಾ ಇದೇ ವರ್ಷ ಬಿಡುಗಡೆ ಸಹ ಆಗಲಿದೆ.

ರಘ ಹನುಪುಡಿ ನಿರ್ದೇಶನದ ‘ಫೌಜಿ’ ಸಿನಿಮಾವನ್ನು ಬಲು ವೇಗವಾಗಿ ಪ್ರಭಾಸ್ ಮುಗಿಸಿದ್ದು, ಸಿನಿಮಾದ ಬಿಡುಗಡೆ ದಿನಾಂಕವನ್ನು ನಿಗದಿ ಪಡಿಸಲಾಗಿದೆ. ‘ಫೌಜಿ’ ಸಿನಿಮಾವು ಇದೇ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್​​ನಲ್ಲಿ ಬಿಡುಗಡೆ ಆಗಲಿದೆ. ಡಿಸೆಂಬರ್ ಮೊದಲ ವಾರದಲ್ಲೇ ಸಿನಿಮಾ ರಿಲೀಸ್ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಡಿಸೆಂಬರ್ ತಿಂಗಳು ಲಕ್ಕಿ ತಿಂಗಳು ಸಹ ಆಗಿದ್ದು, ಹಾಗಾಗಿ ಡಿಸೆಂಬರ್ ತಿಂಗಳನ್ನು ಆಯ್ಕೆ ಮಾಡಿಕೊಂಡಿರುವ ಸಾಧ್ಯತೆ ಇದೆ.

‘ಫೌಜಿ’ ಸಿನಿಮಾವು 1940ರ ಘಟನೆಗಳನ್ನು ಒಳಗೊಂಡಿದ್ದು, ಇದು ಸೈನಿಕನ ಕುರಿತಾದ ಕತೆಯ ಸಿನಿಮಾ. ಸಿನಿಮಾನಲ್ಲಿ ಪ್ರಭಾಸ್ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವು ಪ್ರೇಮಕತೆಯ ಜೊತೆಗೆ ಅದ್ಭುತ ಆಕ್ಷನ್ ಅನ್ನು ಸಹ ಒಳಗೊಂಡಿದೆಯಂತೆ. ಜೊತೆಗೆ ಕೆಲವು ಸುಂದರ ಹಾಡುಗಳು ಸಹ ಸಿನಿಮಾನಲ್ಲಿವೆ ಎನ್ನಲಾಗುತ್ತಿದೆ. ಸೂಪರ್ ಹಿಟ್, ಕಲ್ಟ್ ಕ್ಲಾಸಿಕ್ ಸಿನಿಮಾ ಆಗಿರುವ ‘ಸೀತಾ ರಾಮಂ’ ಸಿನಿಮಾ ನಿರ್ದೇಶಿಸಿದ್ದ ರಘು ಹನುಪುಡಿ ಅವರೇ ಈ ಸಿನಿಮಾವನ್ನು ಸಹ ನಿರ್ದೇಶಿಸಿರುವ ಕಾರಣ ನಿರೀಕ್ಷೆಗಳು ಬಲು ಹೆಚ್ಚಾಗಿವೆ.

ಇದನ್ನೂ ಓದಿ;‘ಬಾಹುಬಲಿ’ ಬಳಿಕ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾಗಿ ಹೇಳಿದ ಪ್ರಭಾಸ್

ಒಂದೇ ವರ್ಷದಲ್ಲಿ ಪ್ರಭಾಸ್ ನಾಯಕನಾಗಿ ನಟಿಸಿರುವ ಎರಡು ಸಿನಿಮಾಗಳು ಬಿಡುಗಡೆ ಆಗುವುದು ಬಲು ಅಪರೂಪ. ಅವರ ವೃತ್ತಿ ಜೀವನದಲ್ಲಿ ಮೂರನೇ ಬಾರಿಯಷ್ಟೆ ಈ ವಿದ್ಯಮಾನ ನಡೆಯುತ್ತಿದೆ. 2004 ರಲ್ಲಿ ‘ವರ್ಷಂ’ ಮತ್ತು ‘ಅಡವಿ ರಾಮುಡು’ ಸಿನಿಮಾ ಬಿಡುಗಡೆ ಆಗಿದ್ದವು. ಅದಾದ ಬಳಿಕ ಇತ್ತೀಚೆಗೆ 2023 ರಲ್ಲಿ ‘ಆದಿಪುರುಷ್’ ಮತ್ತು ‘ಸಲಾರ್’ ಸಿನಿಮಾಗಳು ಒಂದೇ ವರ್ಷದಲ್ಲಿ ತೆರೆಗೆ ಬಂದಿದ್ದವು. ಅದಾದ ಬಳಿಕ ಈಗ 2026ರಲ್ಲಿ ‘ದಿ ರಾಜಾ ಸಾಬ್’ ಮತ್ತು ‘ಫೌಜಿ’ ಸಿನಿಮಾಗಳು ಬಿಡುಗಡೆ ಆಗುತ್ತಿವೆ.

‘ಫೌಜಿ’ ಸಿನಿಮಾನಲ್ಲಿ ಹೊಸ ನಟಿ ಇಮಾನ್ವಿ ಇಸ್ಮಾಯಿಲ್ ನಟಿಸಿದ್ದಾರೆ. ಈಕೆ ಅಮೆರಿಕದಲ್ಲಿ ನೆಲೆಸಿರುವ ನೃತ್ಯಗಾರ್ತಿ ಆಗಿದ್ದಾರೆ. ಇದು ಅವರ ಪಾಲಿಗೆ ಮೊಟ್ಟ ಮೊದಲ ಸಿನಿಮಾ. ‘ಫೌಜಿ’ ಸಿನಿಮಾದ ಚಿತ್ರೀಕರಣವನ್ನು ಪ್ರಭಾಸ್ ಬಹುತೇಕ ಮುಗಿಸಿದ್ದಾರೆ. ಈಗಾಗಲೇ ಮುಂದಿನ ಸಿನಿಮಾ ಆಗಿರುವ ‘ಸ್ಪಿರಿಟ್’ನ ಚಿತ್ರೀಕರಣವನ್ನು ಪ್ರಾರಂಭ ಮಾಡಿದ್ದಾರೆ. ‘ಸ್ಪಿರಿಟ್’ ಸಿನಿಮಾದ ಬಳಿಕ ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ‘ಸಲಾರ್ 2’ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *