ಹೈದರಾಬಾದ್, ಜುಲೈ 29: ಪ್ರಯಾಣಿಕನ ದುಬಾರಿ ಮದ್ಯದ ಬಾಟಲಿ ಒಡೆದ ಪ್ರಕರಣದಲ್ಲಿ ಕೇವಲ 500 ಮೌಲ್ಯದ ವೋಚರ್ ನೀಡಲು ಮುಂದಾಗಿದ್ದ ಇಂಡಿಗೋ ಏರ್‌ಲೈನ್ಸ್‌ಗೆ ಹೈದರಾಬಾದ್ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಆಯೋಗ-III (District Consumer Disputes Redressal Commission-III) ತೀವ್ರ ತರಾಟೆಗೆ ತೆಗೆದುಕೊಂಡಿದೆ. ಒಡೆದ ಬಾಟಲಿಯ ಸಂಪೂರ್ಣ ಮೌಲ್ಯ, ಮಾನಸಿಕ ವೇದನೆಗೆ ಪರಿಹಾರ ಹಾಗೂ ನ್ಯಾಯಾಂಗ ವೆಚ್ಚವನ್ನು ಪಾವತಿಸುವಂತೆ ಆಯೋಗ ಆದೇಶಿಸಿದೆ.
2025ರ ಸೆಪ್ಟೆಂಬರ್ 3ರಂದು ನಡೆದಿದ್ದ ಘಟನೆ
ಯೂಸುಫ್‌ಗುಡ ನಿವಾಸಿ ವಿನೀತ್ ಅವರು 2025ರ ಸೆಪ್ಟೆಂಬರ್ 3ರಂದು ದೆಹಲಿಯಿಂದ ಚೆನ್ನೈಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದರು. ಚೆಕ್-ಇನ್ ವೇಳೆ ತಮ್ಮ ಸೂಟ್‌ಕೇಸ್‌ನಲ್ಲಿ 35,000 ಮೌಲ್ಯದ ಪ್ರೀಮಿಯಂ ವೈಟ್ ಅಂಡ್ ಬ್ಲೂ ಮದ್ಯದ ಬಾಟಲಿ ಇದೆ ಎಂದು ವಿಮಾನಯಾನ ಸಂಸ್ಥೆಯ ಸಿಬ್ಬಂದಿಗೆ ಮುಂಚಿತವಾಗಿಯೇ ತಿಳಿಸಿದ್ದರು. ಇದು ಅತ್ಯಂತ ಸೂಕ್ಷ್ಮ ವಸ್ತುವಾಗಿರುವುದನ್ನೂ ಅವರು ಹೇಳಿದ್ದರು. ಆದರೆ ಚೆನ್ನೈ ತಲುಪಿ ಲಗೇಜ್ ಪಡೆದು ಸೂಟ್‌ಕೇಸ್ ತೆರೆದಾಗ, ಮದ್ಯದ ಬಾಟಲಿ ಸಂಪೂರ್ಣ ಒಡೆದಿರುವುದು ಕಂಡುಬಂದಿತು. ಬಾಟಲಿಯಲ್ಲಿದ್ದ ಮದ್ಯ ಸೋರಿಕೆಯಾಗಿದ್ದು, ಸೂಟ್‌ಕೇಸ್‌ನಲ್ಲಿದ್ದ ಇತರೆ ವಸ್ತುಗಳಿಗೂ ಹಾನಿಯಾಗಿತ್ತು.
ಇದನ್ನೂ ಓದಿ: 15 ಸಾವಿರ ರೂ ಸಿಗುತ್ತೆ ಎಂಬ ಆಸೆಗೆ ತಲೆ ಬೋಳಿಸಿಕೊಂಡ ಮಹಿಳೆಯರು, ಆಮೇಲೆ ಸಿಕ್ಕಿದ್ದೇನು?
ಪ್ರಯಾಣಿಕರದ್ದೇ ಜವಾಬ್ದಾರಿ ಎಂದಿದ್ದ ಇಂಡಿಗೋ
ವಿಮಾನ ನಿಲ್ದಾಣದಲ್ಲೇ ದೂರು ನೀಡಿದ ಬಳಿಕವೂ ಯಾವುದೇ ಸಮರ್ಪಕ ಪ್ರತಿಕ್ರಿಯೆ ಸಿಗದ ಕಾರಣ ವಿನೀತ್ ಇ-ಮೇಲ್ ಮೂಲಕ ಇಂಡಿಗೋವನ್ನು ಸಂಪರ್ಕಿಸಿದರು. ಬಾಟಲಿಯನ್ನು ಸರಿಯಾಗಿ ಪ್ಯಾಕ್ ಮಾಡಲಾಗಿತ್ತು ಎಂಬುದನ್ನು ಇಂಡಿಗೋ ಒಪ್ಪಿಕೊಂಡರೂ, ತಮ್ಮ ಲಗೇಜ್ ನಿಯಮಗಳ ಪ್ರಕಾರ ಸೂಕ್ಷ್ಮ ವಸ್ತುಗಳನ್ನು ಪ್ರಯಾಣಿಕರು ತಮ್ಮದೇ ಜವಾಬ್ದಾರಿಯಲ್ಲಿ ಸಾಗಿಸಬೇಕು ಎಂದು ಹೇಳಿ ಕೇವಲ 500 ರೂ. ಮೌಲ್ಯದ ವೋಚರ್ ನೀಡಲು ಮುಂದಾಗಿತ್ತು. ಇದರಿಂದ ಅಸಮಾಧಾನಗೊಂಡ ವಿನೀತ್ ಮೊದಲು ಕಾನೂನು ನೋಟಿಸ್ ನೀಡಿ, ಬಳಿಕ ಗ್ರಾಹಕರ ಆಯೋಗದ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಹೈದರಾಬಾದ್ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಆಯೋಗ-III, ಚೆಕ್-ಇನ್ ಲಗೇಜ್ ಅನ್ನು ನಿರ್ಲಕ್ಷ್ಯದಿಂದ ನಿರ್ವಹಿಸಿರುವುದರಿಂದ ಇಂಡಿಗೋ ಸೇವೆಯಲ್ಲಿ ಲೋಪವಾಗಿದೆ ಎಂದು ತೀರ್ಪು ನೀಡಿದೆ. ಒಡೆದ ಮದ್ಯದ ಬಾಟಲಿಗೆ 35,000 ಪರಿಹಾರವನ್ನು ವಾರ್ಷಿಕ 9% ಬಡ್ಡಿಯೊಂದಿಗೆ, ಮಾನಸಿಕ ವೇದನೆಗೆ 15,000, ಹಾಗೂ ನ್ಯಾಯಾಂಗ ವೆಚ್ಚಕ್ಕೆ 5,000 ಪಾವತಿಸುವಂತೆ ಆಯೋಗವು ಇಂಡಿಗೋಗೆ ಆದೇಶಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
