ಪ್ರಯಾಣಿಕರಿಗೆ ಶಾಕ್ ಕೊಟ್ಟ ಕೆಎಸ್​ಆರ್​ಟಿಸಿ: ಇಂದಿನಿಂದಲೇ ಈ ದರ ಹೆಚ್ಚಳ – Kannada News | KSRTC Luggage Charges Hike from Feb 16: New Rates Rs 6 to 145 Per Kg Beyond 30 Kg Free Limit, Details here

ಕೆಎಸ್​ಆರ್​ಟಿಸಿ ಬಸ್ (ಸಂಗ್ರಹ ಚಿತ್ರ)Image Credit source: tv9

ಬೆಂಗಳೂರು, ಫೆಬ್ರವರಿ 16: ಪ್ರಯಾಣಿಕರ ಮೇಲಿನ ದರ ಏರಿಕೆ ಭಾರ ಹೆಚ್ಚುತ್ತಿರುವ ನಡುವೆಯೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮತ್ತೊಂದು ದರ ಏರಿಕೆ ನಿರ್ಧಾರಕ್ಕೆ ಮುಂದಾಗಿದೆ. ಬಸ್‌ಗಳಲ್ಲಿ ಸಾಗಿಸುವ ಲಗೇಜ್‌ ಶುಲ್ಕವನ್ನು ಹೆಚ್ಚಿಸಲಾಗಿದ್ದು, ನೂತನ ದರ ಇಂದಿನಿಂದಲೇ (ಫೆಬ್ರವರಿ 16) ಜಾರಿಗೆ ಬರುತ್ತಿದೆ. ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದ ಸಂಸ್ಥೆ, ಪ್ರತಿಯೊಂದು ದರ ಪರಿಷ್ಕರಣೆಯ ನಂತರ ಲಗೇಜ್ ಶುಲ್ಕವನ್ನೂ ಮರುಪರಿಶೀಲನೆ ಮಾಡಲಾಗುತ್ತದೆ. ಇದು ಸಾಮಾನ್ಯ ಪ್ರಕ್ರಿಯೆ ಎಂದು ತಿಳಿಸಿದೆ.

2025ರ ಜನವರಿಯಲ್ಲಿ ಬಸ್ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಆದರೆ, ಲಗೇಜ್ ಶುಲ್ಕವನ್ನು ಆಗ ಪರಿಷ್ಕರಿಸಲಾಗಿರಲಿಲ್ಲ. ಈ ಹಿನ್ನೆಲೆ ಇದೀಗ ಲಗೇಜ್ ದರಗಳನ್ನು ಹೆಚ್ಚಿಸಲಾಗಿದೆ ಎಂದು ಕೆಎಸ್​ಆರ್​ಟಿಸಿ ಸ್ಪಷ್ಟಪಡಿಸಿದೆ.

ಪರಿಷ್ಕೃತ ಲಗೇಜ್ ದರ ಎಷ್ಟು? ಕೆಎಸ್​ಆರ್​ಟಿಸಿ ಕೊಟ್ಟ ಮಾಹಿತಿ ಇಲ್ಲಿದೆ

30 ಕೆಜಿ ವರೆಗೆ ಉಚಿತವಾಗಿ ಲಗೇಜ್ ಸಾಗಿಸಲು ಅವಕಾಶ ಇದೆ. ಹೊಸ ನಿಯಮದ ಪ್ರಕಾರ, ಈ ಮಿತಿಗಿಂತ ಹೆಚ್ಚಿನ ಲಗೇಜ್‌ಗೆ ಪ್ರತಿ ಕೆಜಿಗೆ 6 ರೂಪಾಯಿಯಿಂದ 145 ರೂ.ವರೆಗೆ ಶುಲ್ಕ ವಿಧಿಸಲಾಗುತ್ತದೆ. ಪ್ರಯಾಣದ ದೂರ ಮತ್ತು ಸ್ಟೇಜ್​ಗಳ ಆಧಾರದ ಮೇಲೆ ದರ ಬದಲಾಗುತ್ತದೆ. ಕೆಎಸ್‌ಆರ್‌ಟಿಸಿಯಲ್ಲಿ ಒಂದು ಸ್ಟೇಜ್ ಎಂದರೆ ಸುಮಾರು ಆರು ಕಿಲೋಮೀಟರ್ ಎಂದು ಪರಿಗಣಿಸಲಾಗುತ್ತದೆ. ಹಿಂದಿನ ದರಗಳಿಗೆ ಹೋಲಿಸಿದರೆ ಈ ಬಾರಿ ಸುಮಾರು ಶೇ 15 ರಷ್ಟು ದರ ಏರಿಕೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಕೊನೆಯದಾಗಿ ಲಗೇಜ್ ಶುಲ್ಕವನ್ನು 2021ರ ಡಿಸೆಂಬರ್‌ನಲ್ಲಿ ಪರಿಷ್ಕರಿಸಲಾಗಿತ್ತು. ಪ್ರಯಾಣಿಕರಿಗೆ ಹಿಂದಿನಂತೆ 30 ಕೆಜಿ ವರೆಗೆ ಉಚಿತ ಲಗೇಜ್ ಸಾಗಿಸಲು ಅವಕಾಶ ಮುಂದುವರಿಯಲಿದೆ.

ಸಾಕು ಪ್ರಾಣಿಗಳ ಸಾಗಾಟಕ್ಕೂ ಅವಕಾಶ!

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಲಭ್ಯವಿರುವ ಸ್ಥಳದ ಆಧಾರದ ಮೇಲೆ ವಾಶಿಂಗ್ ಮಷೀನ್, ಫ್ರಿಜ್, ಟ್ರಕ್ ಟೈರ್, ಅಲ್ಯೂಮಿನಿಯಂ ಮತ್ತು ಕಬ್ಬಿಣದ ಪೈಪ್‌ಗಳು, ಗೃಹೋಪಯೋಗಿ ಪಾತ್ರೆಗಳು ಹಾಗೂ ಬೆಕ್ಕು, ನಾಯಿ, ಮೊಲ ಮುಂತಾದ ಪ್ರಾಣಿಗಳನ್ನು ಸಹ ಸಾಗಿಸಲು ಅವಕಾಶ ಇದೆ.

ಇದನ್ನೂ ಓದಿ: ನಡು ರಸ್ತೆಯಲ್ಲೇ ಕೆಎಸ್​ಆರ್​ಟಿಸಿ ಬಸ್ ಜಪ್ತಿ! ಪ್ರಯಾಣಿಕರು ಕಂಗಾಲು

ಲಗೇಜ್ ಸಾಗಣೆ ವ್ಯವಸ್ಥೆ 1999ರ ನವೆಂಬರ್ 5ರಿಂದಲೇ ಕೆಎಸ್‌ಆರ್‌ಟಿಸಿಯಲ್ಲಿ ಜಾರಿಯಲ್ಲಿದ್ದು, ಕಾಲಾನುಗುಣವಾಗಿ ಶುಲ್ಕ ಹಾಗೂ ನಿಯಮಗಳನ್ನು ಪರಿಷ್ಕರಿಸಲಾಗುತ್ತಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *