ಪ್ರಯಾಣಿಕರು ನಿರಾಳ, ಎಂದಿನಂತೆ ನಾಳೆ ಬಸ್​​ ಸಂಚಾರ; ಇಲ್ಲಿವೆ ಈ ಹೊತ್ತಿನ ಟಾಪ್​​ 5 ಸುದ್ದಿಗಳು – Kannada News | Evening Top News: KSRTC Bus Services Resume, Elephant Marthanda Death and Punjami Singer Murder

ಬೆಂಗಳೂರು, ಮೇ 19: ನಾಳೆ (ಮೇ 20) ಕರೆ ನೀಡಿದ್ದ ಮುಷ್ಕರವನ್ನು ಸಾರಿಗೆ ನೌಕರರು ಹೈಕೋರ್ಟ್​​ ಆದೇಶದ ಬೆನ್ನಲ್ಲೇ ಹಿಂಪಡೆದಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ KSRTC ಜಂಟಿ ಕ್ರಿಯಾ ಸಮಿತಿ ಸಂಚಾಲಕ ಜಯದೇವರಾಜೆ ಅರಸ್ ಕೋರ್ಟ್ ಆದೇಶಕ್ಕೆ ಗೌರವ ಕೊಟ್ಟು ಮುಷ್ಕರ ಹಿಂದಕ್ಕೆ ಪಡೆಯುತ್ತಿರೋದಾಗಿ ತಿಳಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ವಾದ-ಪ್ರತಿವಾದ ಆಲಿಸಿದ ಕೋರ್ಟ್​​ ಮುಷ್ಕರ ಹಿಂಪಡೆಯುವಂತೆ ತಿಳಿಸಿರುವ ಕಾರಣ ನಿರ್ಧಾರ ಕೈಬಿಟ್ಟಿದ್ದೇವೆ. ಸಿಎಂ ಅಥವಾ ಸಾರಿಗೆ ಸಚಿವರು ಶೀಘ್ರ ಸಮಯ ನಿಗದಿ ಮಾಡಿ ಸಭೆ ಮಾಡಬೇಕು ಅಂತಲೂ ಕೋರ್ಟ್​​ ಹೇಳಿದ್ದು, ಈ ಸಭೆಯನ್ನು ಸಾರಿಗೆ ನೌಕರರು ಸದುಪಯೋಗಪಡಿಸಿಕೊಳ್ಳಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಹೈಕೋರ್ಟ್​​ ಆದೇಶದ ಬೆನ್ನಲ್ಲೇ ಮುಷ್ಕರ ಹಿಂಪಡೆದ ಸಾರಿಗೆ ನೌಕರರು

ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು

ಕುಶಾಲನಗರದ ದುಬಾರೆ ಕ್ಯಾಂಪ್​​ನಲ್ಲಿ ಕಾದಾಟದ ವೇಳೆ ಗಂಭಿರವಾಗಿ ಗಾಯಗೊಂಡಿದ್ದ ಆನೆ ಮಾರ್ತಾಂಡ ಕೂಡ ಚಿಕಿತ್ಸೆ ಫಲಕಾರಿಯಾಗದೆ ಇಂದು (ಮೇ 19) ಮೃತಪಟ್ಟಿದೆ. ನಿನ್ನೆ ಸ್ನಾನಕ್ಕೆಂದು ಕಾವೇರಿ ನದಿಗೆ ಮಾವುತರು ಕಂಜನ್​​ ಮತ್ತು ಮಾರ್ತಾಂಡ ಆನೆಗಳನ್ನು ಕರೆತಂದಿದ್ದ ವೇಳೆ ಅವುಗಳ ನಡುವೆ ಕಾದಾಟ ನಡೆದಿತ್ತು. ಈ ವೇಳೆ ಓರ್ವ ಮಹಿಳೆ ಮೃತಪಟ್ಟಿದ್ದರೆ ಮಾರ್ತಾಂಡ ಆನೆ ಗಂಭೀರವಾಗಿ ಗಾಯಗೊಂಡಿತ್ತು. ಗಾಯಗೊಂಡಿದ್ದ ಮಾರ್ತಾಂಡಗೆ ಶಿಬಿರದಲ್ಲೇ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ಅಂತಿಮವಾಗಿ ಚಿಕಿತ್ಸೆ ಫಲಕಾರಿಯಾಗದೆ ಅದು ಇಂದು ಮೃತಪಟ್ಟಿದೆ ಎಂದು ಡಿಎಫ್ಒ ಅಭಿಶೇಕ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕಾದಾಟದ ವೇಳೆ ಗಂಭೀರ ಗಾಯಗೊಂಡಿದ್ದ ಆನೆ ಮಾರ್ತಾಂಡ ಚಿಕಿತ್ಸೆ ಫಲಿಸದೆ ಸಾವು

ಪಶ್ಚಿಮ ಬಂಗಾಳ ಸರ್ಕಾರದಿಂದ ಮಹತ್ವದ ನಿರ್ಧಾರ

ಸಿಲಿಗುರಿ ಕಾರಿಡಾರ್ ಕುರಿತು ಪಶ್ಚಿಮ ಬಂಗಾಳ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರವು ‘ಚಿಕನ್ ನೆಕ್’ ಎಂದು ಕರೆಯಲ್ಪಡುವ ಸಿಲಿಗುರಿ ಕಾರಿಡಾರ್ ಪ್ರದೇಶದಲ್ಲಿನ 120 ಎಕರೆ ಭೂಮಿಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದೆ. ಸಿಲಿಗುರಿ ಕಾರಿಡಾರ್ ಭಾರತಕ್ಕೆ ಅತ್ಯಂತ ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ ಪ್ರದೇಶವಾಗಿದ್ದು, ಇದು ನೇಪಾಳ, ಭೂತಾನ್, ಬಾಂಗ್ಲಾದೇಶ ಹಾಗೂ ಚೀನಾ ಗಡಿಗಳಿಗೆ ಸಮೀಪದಲ್ಲಿದೆ. ‘ಚಿಕನ್ ನೆಕ್’ ಎಂದು ಪ್ರಸಿದ್ಧಿಯಾಗಿರುವ ಈ ಕಿರಿದಾದ ಭೂಭಾಗವು ಭಾರತದ ಮುಖ್ಯ ಭೂಭಾಗವನ್ನು ಈಶಾನ್ಯ ರಾಜ್ಯಗಳೊಂದಿಗೆ ಸಂಪರ್ಕಿಸುವ ಏಕೈಕ ಪ್ರಮುಖ ದಾರಿಯಾಗಿದೆ.

ಇದನ್ನೂ ಓದಿ: ಚಿಕನ್ ನೆಕ್ ಕಾರಿಡಾರ್​​ನ 120 ಎಕರೆ ಭೂಮಿಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದ ಪಶ್ಚಿಮ ಬಂಗಾಳದ ಸಿಎಂ

ಅಪಹರಣವಾಗಿದ್ದ ಗಾಯಕಿ ಶವ ಪತ್ತೆ

ಕಳೆದ 6 ದಿನಗಳ ಹಿಂದೆ ಅಪಹರಣಕ್ಕೆ ಒಳಗಾಗಿದ್ದ 29 ವರ್ಷದ ಪಂಜಾಬಿ ಗಾಯಕಿ ಇಂದರ್ ಕೌರ್ (Inder Kaur) ಲೂಧಿಯಾನದ ಕಾಲುವೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಂಗಳವಾರ (ಮೇ 19) ಮುಂಜಾನೆ ಸ್ಥಳೀಯ ಪೊಲೀಸರು ನೀಲೋ ಕಾಲುವೆಯಿಂದ ಗಾಯಕಿಯ ಶವವನ್ನು ಹೊರತೆಗೆದಿದ್ದಾರೆ. ಸುಖ್ವಿಂದರ್ ಸಿಂಗ್ ಎಂಬಾತ ಇಂದರ್ ಕೌರ್ ಅವರನ್ನು ಮದುವೆಯಾಗುವಂತೆ ತೀವ್ರ ಒತ್ತಾಯ ಹೇರುತ್ತಿದ್ದರಿಂದ ಆತನ ಮೇಲೆಯೇ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ. ಮೇ 13ರಂದು ರಾತ್ರಿ ಸುಮಾರು 8.30ಕ್ಕೆ ಇಂದರ್ ಕೌರ್ ಅವರು ತಮ್ಮ ಫೋರ್ಡ್ ಫಿಗೊ ಕಾರಿನಲ್ಲಿ ದಿನಸಿ ಸಾಮಗ್ರಿಗಳನ್ನು ಖರೀದಿಸಲು ಮನೆಯಿಂದ ಹೊರಟಿದ್ದರು. ಆದರೆ ಅವರು ಮತ್ತೆ ಮನೆಗೆ ಮರಳಲೇ ಇಲ್ಲ. ಗಾಯಕಿ ನಾಪತ್ತೆಯಾದ ನಂತರ, ಆಕೆಯ ಸಹೋದರ ಜೋತಿಂದರ್ ಸಿಂಗ್ ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ: ಮದುವೆ ನಿರಾಕರಿಸಿದ್ದಕ್ಕೆ ಗಾಯಕಿ ಇಂದರ್ ಕೌರ್ ಅಪಹರಣ; 6 ದಿನದ ಬಳಿಕ ಹೆಣವಾಗಿ ಪತ್ತೆ

ಭಾರತ ತಂಡ ಪ್ರಕಟ

ಅಫ್ಘಾನಿಸ್ತಾನ್ ವಿರುದ್ಧದ ಸರಣಿಗಾಗಿ ಭಾರತ ಏಕದಿನ ಹಾಗೂ ಟೆಸ್ಟ್ ತಂಡಗಳನ್ನು ಪ್ರಕಟಿಸಲಾಗಿದೆ. ಈ ಎರಡೂ ತಂಡಗಳ ನಾಯಕನಾಗಿ ಶುಭ್​ಮನ್ ಗಿಲ್ ಮುಂದುವರೆದರೆ ಟೆಸ್ಟ್ ತಂಡದ ಉಪನಾಯಕನಾಗಿ ಕೆಎಲ್ ರಾಹುಲ್ ಕಾಣಿಸಿಕೊಂಡಿದ್ದಾರೆ. ಇನ್ನು ಏಕದಿನ ತಂಡದ ವೈಸ್ ಕ್ಯಾಪ್ಟನ್ ಆಗಿ ಶ್ರೇಯಸ್ ಅಯ್ಯರ್ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನ್ ವಿರುದ್ಧದ ಸರಣಿಗಾಗಿ ಭಾರತ ಏಕದಿನ ಹಾಗೂ ಟೆಸ್ಟ್ ತಂಡ ಪ್ರಕಟ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *