ನವದೆಹಲಿ, ಜುಲೈ 21: ಆಡಳಿತಾರೂಢ ಎನ್‌ಡಿಎ (NDA) ಸಂಸದೀಯ ಪಕ್ಷದ ‘ಮಂಗಲ್ ಮಿಲನ್’ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಟ್ (NEET) ಮತ್ತು ಇತರ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಕುರಿತು ಅತ್ಯಂತ ಗಂಭೀರವಾಗಿ ಮಾತನಾಡಿದ್ದಾರೆ. “ದೇಶದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟುವುದು ಸರ್ಕಾರದ ಕೇವಲ ಕರ್ತವ್ಯವಲ್ಲ, ಅದೊಂದು ‘ರಾಷ್ಟ್ರೀಯ ಜವಾಬ್ದಾರಿ’ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ. ಸಭೆಯ ನಂತರ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಪ್ರಧಾನಿಯವರ ಮಾತುಗಳನ್ನು ಮಾಧ್ಯಮಗಳಿಗೆ ವಿವರಿಸಿದರು.
ಆರೋಪಿಗಳಿಗೆ ಅತ್ಯಂತ ಕಠಿಣ ಶಿಕ್ಷೆಯಾಗಲಿ
ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವ ಅಪರಾಧಿಗಳಿಗೆ ಯಾವುದೇ ಕಾರಣಕ್ಕೂ ವಿನಾಯಿತಿ ನೀಡಬಾರದು ಎಂದಿರುವ ಪ್ರಧಾನಿ. ಪರೀಕ್ಷಾ ಪ್ರಕ್ರಿಯೆಯನ್ನು ಕಲುಷಿತಗೊಳಿಸಿ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುವ ಕಿಡಿಗೇಡಿಗಳಿಗೆ ಕಾನೂನಿನಡಿಯಲ್ಲಿ ಸಿಗಬಹುದಾದ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಪ್ರಧಾನಿ ಮೋದಿ ಖಡಕ್ ಆಗಿ ಸೂಚಿಸಿದ್ದಾರೆ.
ಭವಿಷ್ಯದಲ್ಲಿ ಯಾವುದೇ ರೀತಿಯ ಸೋರಿಕೆ ನಡೆಯದಂತೆ ಅತ್ಯಂತ ಪಾರದರ್ಶಕ ಹಾಗೂ ದೋಷರಹಿತ ಪರೀಕ್ಷಾ ವ್ಯವಸ್ಥೆಯನ್ನು ರೂಪಿಸಲು ಸರ್ಕಾರಿ ಮತ್ತು ಸಾಂಸ್ಥಿಕ ಮಟ್ಟದಲ್ಲಿ ಸಾಮೂಹಿಕ ಪ್ರಯತ್ನಗಳು ನಡೆಯಬೇಕೆಂದು ಕರೆ ನೀಡಿದ್ದಾರೆ. ಸಂಸತ್ತಿನ ಕಲಾಪಗಳು ಸುಗಮವಾಗಿ ನಡೆಯುವಂತೆ ಮಾಡಲು ಪ್ರಧಾನಿ ನಾಯಕರೊಂದಿಗೆ ಚರ್ಚಿಸಿದರು.
ಮತ್ತಷ್ಟು ಓದಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯಲ್ಲಿ ತೀವ್ರ ಪ್ರತಿಭಟನೆ; ಅಮಿತ್ ಶಾ- ಧರ್ಮೇಂದ್ರ ಪ್ರಧಾನ್ ತುರ್ತು ಸಭೆ
ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ, ದೇಶದ ಭವಿಷ್ಯ ಮತ್ತು ಯುವಜನತೆಯ ಕಲ್ಯಾಣಕ್ಕಾಗಿ ಕೆಲಸ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಸಂಸದರ ಮೇಲಿದೆ. ಶಾಸಕಾಂಗ ವ್ಯವಹಾರಗಳನ್ನು ಬೆಂಬಲಿಸಲು ಎನ್‌ಡಿಎ ಮೈತ್ರಿಕೂಟದ ಎಲ್ಲಾ ನಾಯಕರು ಒಗ್ಗಟ್ಟಿನಿಂದ ಇರಬೇಕು. ಹಾಗೆಯೇ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಸಹ ಗದ್ದಲ ಎಬ್ಬಿಸದೆ ರಚನಾತ್ಮಕವಾಗಿ ದೇಶದ ಹಿತದೃಷ್ಟಿಯಿಂದ ಭಾಗವಹಿಸಬೇಕು” ಎಂದು ಪ್ರಧಾನಿ ಮೋದಿ ಆಶಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
