ಅಫಜಲಪುರ ಶಿರವಾಳ ಸರ್ಕಾರಿ ಶಾಲೆಯ ಮಧ್ಯಾಹ್ನದ ಬಿಸಿಯೂಟದ ಧಾನ್ಯImage Credit source: tv9
ಕಲಬುರಗಿ, ಜುಲೈ 10: ಗೃಹ ಸಚಿವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆ ಕಲಬುರಗಿಯಲ್ಲಿ (Kalaburagi) ಕೆಕೆಆರ್ಟಿಸಿ ಬಸ್ ಹೆಡ್ಲೈಟ್ ಕೆಟ್ಟ ಕಾರಣ ಮೊಬೈಲ್ ಟಾರ್ಚ್ ನೆರವಿನಿಂದ ಚಾಲಕ ಬಸ್ ಚಲಾಯಿಸಿದ ವಿಚಾರ ಕೆಲವು ದಿನಗಳ ಹಿಂದೆ ಸುದ್ದಿಯಾಗಿತ್ತು. ಇದು ಭಾರಿ ಚರ್ಚೆಗೂ ಗ್ರಾಸವಾಗಿತ್ತು. ಸದ್ಯ, ಅದೇ ಕಲಬುರಗಿ ಜಿಲ್ಲೆಯಿಂದ ಮತ್ತೊಂದು ಆಡಳಿತ ಅಧ್ವಾನ ಬೆಳಕಿಗೆ ಬಂದಿದೆ. ಸರ್ಕಾರಿ ಶಾಲೆಯ ಬಡ ಮಕ್ಕಳ ಹಸಿವು ನೀಗಿಸುವ ಸರ್ಕಾರದ ಮಹತ್ವಾಕಾಂಕ್ಷಿ ‘ಮಧ್ಯಾಹ್ನದ ಬಿಸಿಯೂಟ ಯೋಜನೆ’ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಳ್ಳ ಹಿಡಿದಿರುವುದು ‘ಟಿವಿ9’ ರಿಯಾಲಿಟಿ ಚೆಕ್‌ನಲ್ಲಿ ಬಯಲಾಗಿದೆ.
‘ಟಿವಿ9’ ರಿಯಾಲಿಟಿ ಚೆಕ್‌ನಲ್ಲಿ ಸತ್ಯ ದರ್ಶನ
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಹುತೇಕ ಸರ್ಕಾರಿ ಶಾಲೆಗಳಿಗೆ ತೀರಾ ಕಳಪೆ ಗುಣಮಟ್ಟದ ಅಕ್ಕಿ ಹಾಗೂ ತೊಗರಿ ಬೇಳೆಯನ್ನು ಪೂರೈಕೆ ಮಾಡಲಾಗುತ್ತಿದೆ ಎಂಬ ದೂರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ತಾಲೂಕಿನ ಶಿರವಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ‘ಟಿವಿ9’ ರಿಯಾಲಿಟಿ ಚೆಕ್ ನಡೆಸಿದಾಗ ನೈಜ ಪರಿಸ್ಥಿತಿ ಕಂಡುಬಂದಿದೆ. ಶಾಲೆಯ ದಾಸ್ತಾನು ಕೊಠಡಿಯಲ್ಲಿದ್ದ ಬೇಳೆ ಮತ್ತು ಮುಗ್ಲು ಹಿಡಿದಿದ್ದ ಅಕ್ಕಿಯಲ್ಲಿ ಹುಳುಗಳ ರಾಶಿಯೇ ತುಂಬಿ ಹೋಗಿರುವುದು ಪತ್ತೆಯಾಗಿದೆ. ಈ ಕಳಪೆ ಆಹಾರ ಧಾನ್ಯಗಳಲ್ಲೇ ಮಕ್ಕಳಿಗೆ ದಿನನಿತ್ಯ ಅಡುಗೆ ಮಾಡಿ ಬಡಿಸಲಾಗುತ್ತಿದೆ.
‘ನಮ್ಮ ಮಕ್ಕಳ ಆರೋಗ್ಯಕ್ಕೆ ಏನಾದರೂ ಹೆಚ್ಚುಕಮ್ಮಿಯಾದರೆ ಯಾರು ಹೊಣೆ’ ಎಂದು ಶಿರವಾಳ ಗ್ರಾಮದ ರಮೇಶ್ ಸೇರಿದಂತೆ ಹಲವು ಪೋಷಕರು ಪ್ರಶ್ನಿಸಿದ್ದಾರೆ. ಅಲ್ಲದೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಡುಗೆ ಸಿಬ್ಬಂದಿಯ ಅಸಹಾಯಕತೆ, ಇಲಾಖೆಯ ತೇಪೆ ಹಚ್ಚುವ ಕೆಲಸ
ಈ ಕುರಿತು ಶಾಲೆಯ ಅಡುಗೆ ಮೇಲ್ವಿಚಾರಕಿ ಮತ್ತು ಸಿಬ್ಬಂದಿ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. ಶಾಲೆಗೆ ಸರಬರಾಜಾಗುತ್ತಿರುವ ಧಾನ್ಯಗಳೇ ಕಳಪೆಯಾಗಿವೆ. ಬೇರೆ ದಾರಿಯಿಲ್ಲದೆ ನಾವು ಅದೇ ಹುಳು ಹಿಡಿದ ಧಾನ್ಯಗಳನ್ನು ಸಾಧ್ಯವಾದಷ್ಟು ಸ್ವಚ್ಛಗೊಳಿಸಿ ಮಕ್ಕಳಿಗೆ ಅಡುಗೆ ಮಾಡಿಕೊಡುವ ಅನಿವಾರ್ಯತೆ ಎದುರಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಅಕ್ಷರ ದಾಸೋಹ ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆ ಕಣ್ಣು ಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: ಕಲಬುರಗಿ: ಮೊಬೈಲ್ ಟಾರ್ಚ್ ಬೆಳಕಿನಲ್ಲಿ KKRTC ಬಸ್ ಚಾಲನೆ, ಮೂವರು ಸಸ್ಪೆಂಡ್
ಇನ್ನು ‘ಟಿವಿ9’ ವಾಹಿನಿಯಲ್ಲಿ ಈ ವರದಿ ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತ ಇಲಾಖೆಯು, ಕೇವಲ ಕೆಳಹಂತದ ಅಡುಗೆ ಸಿಬ್ಬಂದಿ ಮೇಲೆ ಕ್ರಮ ಕೈಗೊಂಡು ಇಡೀ ಪ್ರಕರಣಕ್ಕೆ ತೇಪೆ ಹಚ್ಚಲು ಮುಂದಾಗಿದೆ. ಕಳಪೆ ಧಾನ್ಯ ಪೂರೈಸಿದ ಗುತ್ತಿಗೆದಾರರು ಮತ್ತು ನಿರ್ಲಕ್ಷ್ಯ ವಹಿಸಿದ ಮುಖ್ಯ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆಯಾಗಿ ಕಠಿಣ ಕ್ರಮ ಜರುಗಬೇಕೆಂದು ಪೋಷಕರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
