ನವದೆಹಲಿ, ಆಗಸ್ಟ್ 13: ಆನ್ಲೈನ್ನಲ್ಲಿ ಕ್ಯಾಬ್ ಅಥವಾ ಆಟೋ ಬುಕ್ ಮಾಡುವ ಮುನ್ನವೇ ಚಾಲಕರಿಗೆ ‘ಟಿಪ್ಸ್’ ನೀಡುವಂತೆ ಒತ್ತಾಯಿಸುವ ವ್ಯವಸ್ಥೆಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ಓಲಾ, ಉಬರ್, ರ‍್ಯಾಪಿಡೋ ಸೇರಿದಂತೆ ಎಲ್ಲಾ ರೈಡ್-ಹೇಲಿಂಗ್ (Ride-hailing) ಆ್ಯಪ್‌ಗಳಿಂದ ‘ಪ್ರಿ-ರೈಡ್ ಟಿಪ್ಸ್’ (Pre-ride tips) ಅಥವಾ ಮುಂಗಡ ಟಿಪ್ಸ್ ನೀಡುವ ಆಯ್ಕೆಯನ್ನು ತಕ್ಷಣವೇ ತೆಗೆದುಹಾಕುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಆದೇಶಿಸಿದೆ.
ಓಲಾ, ಊಬರ್ ಸೇರಿದಂತೆ ಎಲ್ಲಾ ಕ್ಯಾಬ್ ಬುಕಿಂಗ್ ಆ್ಯಪ್ಗಳಲ್ಲಿ ಕ್ಯಾಬ್ ಬುಕಿಂಗ್ ಮಾಡುವಾಗ ತತ್ಕ್ಷಣಕ್ಕೆ ಡ್ರೈವರ್ಗಳಿಂದ ರಿಕ್ವೆಸ್ಟ್ ಸ್ವೀಕೃತಿ ಆಗದೇ ಇದ್ದಾಗ, ವಿವಿಧ ಪ್ರಮಾಣದ ಟಿಪ್ಸ್ ನೀಡಿ ಪ್ರಯತ್ನಿಸುವಂತೆ ಕೇಳಲಾಗುತ್ತದೆ. ಟಿಪ್ಸ್ ಕೊಟ್ಟರೆ ಡ್ರೈವರ್ಗಳು ರೈಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಬಹುದು ಎಂದು ಗ್ರಾಹಕರನ್ನು ಪ್ರಲೋಬಿಸಲಾಗುತ್ತದೆ. ಇದೇ ಕಾರಣಕ್ಕೆ ಹೆಚ್ಚಿನ ಗ್ರಾಹಕರು ಟಿಪ್ಸ್ ಸೇರಿಸಿ ಬುಕ್ ಮಾಡುತ್ತಾರೆ. ಸರ್ಕಾರ ಈಗ ಕಡಿವಾಣ ಹಾಕಲು ಹೊರಟಿರುವುದು ಇದನ್ನೆಯೇ. ಸರ್ಕಾರದ ಹೊಸ ನಿಯಮಗಳು ಏನು ಹೇಳುತ್ತವೆ ನೋಡೋಣ:
ಇದನ್ನೂ ಓದಿ: ಕರ್ನಾಟಕದಲ್ಲಿ ಬಹಳ ಹೆಚ್ಚಾಗುತ್ತಿವೆ ಎಲೆಕ್ಟ್ರಿಕ್ ಸ್ಕೂಟರ್, ಬೈಕುಗಳು; ರಾಜ್ಯದ ಇವಿ ನೀತಿಗಳೇ ಇದಕ್ಕೆ ಕಾರಣವಾ?
- ಬುಕಿಂಗ್‌ಗೂ ಮುನ್ನ ಟಿಪ್ಸ್ ಕೇಳುವಂತಿಲ್ಲ: ಕ್ಯಾಬ್ ಅಥವಾ ಆಟೋ ಬೇಗ ಸಿಗಬೇಕು ಎಂಬ ಕಾರಣಕ್ಕೆ ಗ್ರಾಹಕರಿಂದ ಮುಂಗಡವಾಗಿ ಟಿಪ್ಸ್ ಆಫರ್ ಮಾಡಿಸುವ ಅಥವಾ ಕೇಳುವ ಯಾವುದೇ ಮೆಸೇಜ್/ಆಪ್ಷನ್ ಆ್ಯಪ್‌ನಲ್ಲಿ ಕಾಣಿಸುವಂತಿಲ್ಲ.
- ಮೋಟಾರು ವಾಹನ ಮಾರ್ಗಸೂಚಿ ಉಲ್ಲಂಘನೆ: ‘ಮೋಟಾರು ವಾಹನ ಅಗ್ರಿಗೇಟರ್ ಗೈಡ್‌ಲೈನ್ಸ್ 2025’ (Motor Vehicle Aggregator Guidelines 2025) ಪ್ರಕಾರ, ಮುಂಗಡವಾಗಿ ಹೆಚ್ಚುವರಿ ಹಣ ಅಥವಾ ಟಿಪ್ಸ್ ಕೇಳುವುದು ನಿಯಮಬಾಹಿರ ಮತ್ತು ಅನುಚಿತ ವ್ಯಾಪಾರ ವಹಿವಾಟು (Unfair Trade Practice) ಎಂದು ಸರ್ಕಾರ ಸ್ಪಷ್ಟಪಡಿಸಿದೆ.
- ಸವಾರಿ ಮುಗಿದ ನಂತರವಷ್ಟೇ ಅವಕಾಶ: ಚಾಲಕರ ಸೇವೆಗೆ ಮೆಚ್ಚಿ ಟಿಪ್ಸ್ ನೀಡುವುದಾದರೆ, ಅದು ಸಂಪೂರ್ಣವಾಗಿ ಪ್ರಯಾಣ (Ride) ಮುಗಿದ ನಂತರವಷ್ಟೇ ಸಾಧ್ಯವಾಗಲಿದೆ. ಅಲ್ಲದೆ, ಇದು ಸಂಪೂರ್ಣ ಗ್ರಾಹಕರ ಐಚ್ಛಿಕ ನಿರ್ಧಾರವಾಗಿರುತ್ತದೆ.
- ಸಂಪೂರ್ಣ ಮೊತ್ತ ಚಾಲಕನಿಗೆ: ಪ್ರಯಾಣಿಕರು ಕೊಡುವ ಟಿಪ್ಸ್‌ನಿಂದ ಯಾವುದೇ ಕಂಪನಿಯು ಕಮಿಷನ್ ಕಟ್ ಮಾಡುವಂತಿಲ್ಲ, ಸಂಪೂರ್ಣ ಹಣ ಚಾಲಕನಿಗೇ ತಲುಪಬೇಕು.
ಇದನ್ನೂ ಓದಿ: ಏರ್ಟೆಲ್ನ ಜನಪ್ರಿಯ 299 ರೂ ಪ್ಲಾನ್ ರದ್ದು; ಕನಿಷ್ಠ ಅನ್ಲಿಮಿಟೆಡ್ ಡೇಟಾ ಪ್ಲಾನ್ ಈಗ 349 ರೂ
ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾರಣವೇನು?
ಇತ್ತೀಚಿನ ದಿನಗಳಲ್ಲಿ ಓಲಾ, ಉಬರ್ ಮತ್ತು ರ‍್ಯಾಪಿಡೋದಂತಹ ಆ್ಯಪ್‌ಗಳು ಕ್ಯಾಬ್ ಹುಡುಕುವಾಗ “ಟಿಪ್ ಸೇರಿಸಿ, ಬೇಗನೆ ರೈಡ್ ಬುಕ್ ಮಾಡಿ” (Add a tip for faster pickup) ಎಂಬಂತಹ ಸಂದೇಶಗಳನ್ನು ನೀಡುತ್ತಿದ್ದವು. ಇದರಿಂದಾಗಿ ಹೆಚ್ಚುವರಿ ಹಣ (ಟಿಪ್) ನೀಡದಿದ್ದರೆ ರೈಡ್‌ಗಳು ರದ್ದಾಗುವ ಅಥವಾ ಚಾಲಕರು ಸ್ವೀಕರಿಸದೇ ಇರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಯಾಣಿಕರ ದೂರುಗಳನ್ನು ಪರಿಗಣಿಸಿದ ಕೇಂದ್ರ ಸರ್ಕಾರ, ಗ್ರಾಹಕರ ಮೇಲೆ ಮಾನಸಿಕ ಒತ್ತಡ ಹೇರುವ ಈ ವ್ಯವಸ್ಥೆಯನ್ನು ರದ್ದುಗೊಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
