ಪ್ರೀಮಿಯಂ ಮದ್ಯ, ಬಿಯರ್ ದರ ಇಳಿಕೆಯಾದ್ರೂ ಹಳೆ ದರದಲ್ಲೇ ಸೇಲ್: ಮದ್ಯ ಮಾರಾಟಗಾರರ ವಿರುದ್ಧ ಎಣ್ಣೆ ಪ್ರಿಯರ ಆಕ್ರೋಶ

ಸಾಂದರ್ಭಿಕ ಚಿತ್ರ (ಎಐ)Image Credit source: MediaForge AI

ಬೆಂಗಳೂರು, ಮೇ 29: ಕರ್ನಾಟಕ (Karnataka) ಸರ್ಕಾರ ಜಾರಿಗೆ ತಂದಿರುವ ಹೊಸ ಅಬಕಾರಿ ತೆರಿಗೆ ನೀತಿಯ ಲಾಭ ಗ್ರಾಹಕರಿಗೆ ಸಿಗುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣವನ್ನು (Alcohol Content) ಆಧರಿಸಿ ತೆರಿಗೆ ವಿಧಿಸುವ ಹೊಸ ಎಐಬಿ (Alcohol-in-Beverage) ತೆರಿಗೆ ಪದ್ಧತಿಯನ್ನು ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿದೆ. ಅದರಂತೆ ಹೆಚ್ಚು ಆಲ್ಕೋಹಾಲ್ ಹೊಂದಿರುವ ಮದ್ಯಕ್ಕೆ ಹೆಚ್ಚಿನ ತೆರಿಗೆ ಹಾಗೂ ಕಡಿಮೆ ಆಲ್ಕೋಹಾಲ್ ಹೊಂದಿರುವ ಮದ್ಯಕ್ಕೆ ಕಡಿಮೆ ತೆರಿಗೆಯನ್ನು ವಿಧಿಸಲಾಗುತ್ತಿದೆ. ಈ ಹೊಸ ನೀತಿಯಿಂದಾಗಿ ಶ್ರೀಮಂತರು ಖರೀದಿಸುವ ಪ್ರೀಮಿಯಂ ವಿಸ್ಕಿ, ಜಿನ್, ಟಕೀಲಾ ಹಾಗೂ ಬಿಯರ್ ಸೇರಿದಂತೆ ಪ್ರೀಮಿಯಂ ಬ್ರ್ಯಾಂಡ್‌ಗಳ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಆದರೆ, ಬಡವರು ಮತ್ತು ಮಧ್ಯಮ ವರ್ಗದವರು ಖರೀದಿಸುವ ಸಾಮಾನ್ಯ ಮದ್ಯದ ಬ್ರ್ಯಾಂಡ್‌ಗಳ ದರ ದುಬಾರಿಯಾಗಿದೆ. ಆದರೆ, ಈ ಬದಲಾವಣೆಯ ನಡುವೆ ಬಾರ್ ಮತ್ತು ರೆಸ್ಟೋರೆಂಟ್‌ಗಳ ಮಾಲೀಕರು ಗ್ರಾಹಕರನ್ನು ಲೂಟಿ ಮಾಡುತ್ತಿದ್ದು, ಮದ್ಯಪ್ರಿಯರ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಮುಖ್ಯಾಂಶಗಳು

  • ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣ ಆಧರಿಸಿದ ಹೊಸ ತೆರಿಗೆ ನೀತಿಯಿಂದಾಗಿ ಪ್ರೀಮಿಯಂ ಮದ್ಯ ಮತ್ತು ಬಿಯರ್ ದರಗಳು ಶೇ 5 ರಿಂದ ಶೇ 24 ರವರೆಗೆ ಇಳಿಕೆ.
  • ಹೊಸ ತೆರಿಗೆಯಿಂದಾಗಿ ಪ್ರೀಮಿಯಂ ಬ್ರ್ಯಾಂಡ್‌ಗಳು ಅಗ್ಗ.
  • ದರ ಇಳಿಕೆಯಾದರೂ ಹಳೇ ಬೆಲೆಗೇ ಮಾರುತ್ತಿರುವ ಬಾರ್ ಮಾಲೀಕರು.

ಬಾರ್ ಮಾಲೀಕರ ಕಿಲಾಡಿತನ: ಅಬಕಾರಿ ಇಲಾಖೆ ಕ್ರಮಕ್ಕೆ ಆಗ್ರಹ

ರಾಜ್ಯದಲ್ಲಿ ಮೇ 11 ರಿಂದ ಜಾರಿಗೆ ಬಂದಿರುವ ಹೊಸ ನಿಯಮದನ್ವಯ ಎಕ್ಸೈಸ್ ಸ್ಲ್ಯಾಬ್ ಅನ್ನು 16 ರಿಂದ 8 ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಬಹುತೇಕ ಪ್ರೀಮಿಯಂ ಬ್ರ್ಯಾಂಡ್‌ಗಳ ಬೆಲೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದ್ದರೂ, ಇದರ ಅಧಿಕೃತ ಲಾಭ ಗ್ರಾಹಕರಿಗೆ ತಲುಪುತ್ತಿಲ್ಲ. ಬಹುತೇಕ ವೈನ್ ಸ್ಟೋರ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಇಂದಿಗೂ ಬಾಟಲಿಗಳ ಮೇಲಿರುವ ಹಳೆಯ ಗರಿಷ್ಠ ಚಿಲ್ಲರೆ ಬೆಲೆಯನ್ನು (MRP) ತೋರಿಸಿ ಗ್ರಾಹಕರಿಂದ ಜೇಬು ಕತ್ತರಿಸುತ್ತಿವೆ.

ಮತ್ತೊಂದೆಡೆ, ಹೊಸ ತೆರಿಗೆ ನೀತಿಯಿಂದಾಗಿ ಬೆಲೆ ಹೆಚ್ಚಳವಾಗಿರುವ ಸಾಮಾನ್ಯ ಮದ್ಯದ ಬ್ರ್ಯಾಂಡ್‌ಗಳ ಲೇಬಲ್ ಮೇಲೆ ಹಳೆಯ (ಕಡಿಮೆ) ದರವೇ ಮುದ್ರಿತವಾಗಿದ್ದರೂ, ಮಾಲೀಕರು ಹೊಸದಾಗಿ ಹೆಚ್ಚಳಗೊಂಡಿರುವ ದರವನ್ನು ವಸೂಲಿ ಮಾಡುತ್ತಿದ್ದಾರೆ.

ಬಾರ್ ಮಾಲೀಕರ ಕಳ್ಳಾಟದ ವಿರುದ್ಧ ಗ್ರಾಹಕರ ಕಿಡಿ

ಬಾರ್ ಮಾಲೀಕರ ಈ ಇಬ್ಬಂದಿ ನೀತಿಯ ವಿರುದ್ಧ ಗ್ರಾಹಕರಾದ ಮಹೇಶ್, ಶರಣು, ಸುನೀಲ್ ಕುಮಾರ್ ಹಾಗೂ ಶಿವಣ್ಣ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ‘ದರ ಕಡಿಮೆಯಾಗಿರುವ ಮದ್ಯಕ್ಕೆ ಹಳೆಯ ಹೆಚ್ಚಿನ ಬೆಲೆ ಪಡೆಯುತ್ತಾರೆ, ಆದರೆ ದರ ಹೆಚ್ಚಾಗಿರುವ ಮದ್ಯಕ್ಕೆ ಹೊಸ ಹೆಚ್ಚಿನ ಬೆಲೆ ವಸೂಲಿ ಮಾಡುತ್ತಾರೆ. ಇದು ಮದ್ಯಪ್ರಿಯರಿಗೆ ಮಾಡುತ್ತಿರುವ ನೇರ ವಂಚನೆ’ ಎಂದು ಕೆಂಡಕಾರಿದ್ದಾರೆ.

ಇದನ್ನೂ ಓದಿ: ‘ಎಣ್ಣೆ’ ಪ್ರಿಯರ ಕಿಕ್ ಏರಿಸಿದ ಸರ್ಕಾರ! ಇನ್ನು ಶ್ರೀಮಂತರ ಮದ್ಯ ಅಗ್ಗ, ಬಡವರ ಮದಿರೆ ದುಬಾರಿ

ಸರ್ಕಾರ ಹೊಸ ನೀತಿಯನ್ನು ಜಾರಿಗೊಳಿಸಿದ್ದರೂ, ಮದ್ಯದಂಗಡಿಗಳ ಮೇಲೆ ಸೂಕ್ತ ನಿಗಾ ಇಡದ ಕಾರಣ ಈ ಕಳ್ಳಾಟ ನಡೆಯುತ್ತಿದ್ದು, ಅಬಕಾರಿ ಇಲಾಖೆಯು ತಕ್ಷಣವೇ ಇಂತಹ ಮದ್ಯದಂಗಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *