ಪ್ರೇಮ ಪ್ರಕರಣದ ರಾಜಿ ಪಂಚಾಯಿತಿ ವೇಳೆ ಹರಿದ ನೆತ್ತರು: ಸ್ಥಳೀಯ ಪ್ರಭಾವಿ ಮುಖಂಡ ಸೇರಿ ಮೂವರಿಗೆ ಚಾಕು ಇರಿತ – Kannada News | Love Dispute Peace Talks Turn Violent; Leader Attacked in Udupi

ಉಡುಪಿ, ಮಾರ್ಚ್​ 05: ಪ್ರೇಮ ಪ್ರಕರಣದ ರಾಜಿ ಪಂಚಾಯಿತಿ ವೇಳೆ ಸ್ಥಳೀಯ ಪ್ರಭಾವಿ ಮುಖಂಡನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಉಡುಪಿಯ ಮಲ್ಪೆ ಬೀಚ್​​ನಲ್ಲಿ ನಡೆದಿದೆ. ಘಟನೆಯಲ್ಲಿ ಮಂಜು ಕೊಳ ಸೇರಿ ಒಟ್ಟು ಮೂವರಿಗೆ ಚಾಕುವಿನಿಂದ ಇರಿಯಲಾಗಿದೆ. ಈ ವೇಳೆ ತಡೆಯಲು ಬಂದ ಮತ್ತಿಬ್ಬರ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದು, ಬೆದರಿಕೆ ಹಾಕಿ ಪರಾರಿಗೆ ಯತ್ನಿಸಿದ್ದಾರೆ. ಈ ವೇಳೆ ಅವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಏನು?

ಮಲ್ಪೆಯ ಯುವಕ ಮತ್ತು ಪಡುಬಿದ್ರಿ–ಪಲಿಮಾರು ಭಾಗದ ಯುವತಿಯ ನಡುವಿನ ಪ್ರೇಮ ಪ್ರಕರಣ ಸಂಬಂಧ ಎರಡೂ ಕಡೆಯವರು ಮಾತುಕತೆ ನಡೆಸಲು ಬೀಚ್‌ ಸಮೀಪ ಸೇರಿದ್ದರು. ಆರಂಭದಲ್ಲಿ ಶಾಂತವಾಗಿಯೇ ನಡೆಯುತ್ತಿದ್ದ ಮಾತುಕತೆ, ಕೆಲವೇ ಕ್ಷಣಗಳಲ್ಲಿ ಮಾತಿನ ಚಕಮಕಿಗೆ ತಿರುಗಿದೆ. ಕುಟುಂಬದ ಗೌರವ ಮತ್ತು ಸಂಬಂಧಿತ ವಿಚಾರಗಳ ಬಗ್ಗೆ ಆರೋಪ–ಪ್ರತ್ಯಾರೋಪಗಳು ನಡೆಯುತ್ತಿದ್ದಂತೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಸಾಕ್ಷಿದಾರರ ಪ್ರಕಾರ, ತೀವ್ರ ವಾಗ್ವಾದದ ಮಧ್ಯೆ ಆರೋಪಿಗಳಲ್ಲಿ ಒಬ್ಬನು ತನ್ನ ಬಳಿಯಿದ್ದ ಚಾಕುವನ್ನು ಹೊರತೆಗೆದು ಮಂಜು ಕೊಳ ಅವರ ಹೊಟ್ಟೆಯ ಎಡಭಾಗಕ್ಕೆ ಇರಿದಿದ್ದಾನೆ. ರಕ್ತಸ್ರಾವವಾಗುತ್ತಾ ಅವರು ನೆಲಕ್ಕುರುಳುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದನ್ನು ತಡೆಯಲು ಮುಂದಾದ ವರುಣ್ ಹಾಗೂ ಲತೀಶ್ ಅವರಿಗೂ ಚಾಕು ಇರಿದು ಗಾಯಗೊಳಿಸಲಾಗಿದೆ ಎನ್ನಲಾಗಿದೆ. ಸಂತೋಷ್ ಮತ್ತು ಧನುಷ್ ಮೇಲೂ ಕೈಯಿಂದ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಭಾರತೀಯ ನೌಕಾಪಡೆಯ ರಹಸ್ಯ ಮಾಹಿತಿ ರವಾನೆ; ಉಡುಪಿಯಲ್ಲಿ ಮತ್ತೊಬ್ಬನ ಬಂಧನ

ಇನ್ನು ಪ್ರಕರಣ ಸಂಬಂಧ ಅಮೃತ್ ಭಂಡಾರಿ, ಪ್ರಜ್ಞೇಶ್, ಪುನೀತ್​ ಪೂಜಾರಿ ಹಾಗೂ ಅಭಿಜಿತ್​​ ಎಂಬ ನಾಲ್ವರನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಅಪ್ರಾಪ್ತನನ್ನು ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿವಿಧ ಕಲಂಗಳಡಿ ತನಿಖೆ ಮುಂದುವರಿದಿದೆ. ಘಟನೆ ಹಿನ್ನೆಲೆಯಲ್ಲಿ ಮಲ್ಪೆ ಬೀಚ್‌ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:39 pm, Thu, 5 March 26

Source link

Leave a Reply

Your email address will not be published. Required fields are marked *