2026 ರ ಫಿಫಾ ವಿಶ್ವಕಪ್ಗೆ (FIFA World Cup 2026) ಅದ್ಧೂರಿ ತೆರೆಬಿದ್ದಿದೆ. ನ್ಯೂಜೆರ್ಸಿಯಲ್ಲಿ ನಡೆದ ಈ ಪ್ರಶಸ್ತಿ ಪಂದ್ಯದಲ್ಲಿ, ಸ್ಪೇನ್ ಹಾಲಿ ಚಾಂಪಿಯನ್ ಅರ್ಜೆಂಟೀನಾವನ್ನು (Spain vs Argentina) 1-0 ಗೋಲುಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಮೂಲಕ ಸ್ಪೇನ್ ಎರಡನೇ ಬಾರಿಗೆ ವಿಶ್ವಕಪ್ ಗೆದ್ದ ಸಾಧನೆಯನ್ನು ಮಾಡಿತು. ತಂಡದ ಈ ಗೆಲುವನ್ನು ಸ್ಪೇನ್ನಲ್ಲಿ ಹಬ್ಬದಂತೆ ಆಚರಿಸಲಾಗುತ್ತಿದೆ. ಅಲ್ಲಿನ ನಾಗರೀಕರು ಬೀದಿಗಿಳಿದು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆದರೆ ಈ ಸಂಭ್ರಮಾಚರಣೆ ದುರಂತವಾಗಿ ಮಾರ್ಪಟ್ಟಿದೆ.
ಫೌಂಟೇನ್ ಬಿದ್ದು ಬಾಲಕ ಸಾವು
ನ್ಯೂಜೆರ್ಸಿಯಲ್ಲಿ ಸ್ಪೇನ್ ತಂಡ ವಿಶ್ವಕಪ್ ಎತ್ತಿಹಿಡಿದು ಸಂಭ್ರಮಿಸುತ್ತಿದ್ದರೆ, ಇಲ್ಲಿ ಸ್ಪೇನ್ ದೇಶದ ಅಭಿಮಾನಿಗಳು ಕೂಡ ಬೀದಿಗಿಳಿದು ಸಂಭ್ರಮಿಸುತ್ತಿದ್ದರು. ಅದರಂತೆ ಪಶ್ಚಿಮ ನಗರವಾದ ಸಿಯುಡಾಡ್ ರೋಡ್ರಿಗೋದಲ್ಲಿ ವಿಜಯೋತ್ಸವದ ಸಂದರ್ಭದಲ್ಲಿ ಫೌಂಟೇನ್ನ ಒಂದು ಭಾಗ ಕುಸಿದಿದೆ, ಈ ದುರಂತದಲ್ಲಿ 13 ವರ್ಷದ ಬಾಲಕ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಪೋರ್ಚುಗಲ್ ಗಡಿ ಬಳಿಯ ಸಲಾಮಾಂಕಾ ಪ್ರಾಂತ್ಯದ ಐತಿಹಾಸಿಕ ನಗರದಲ್ಲಿರುವ ಅರ್ಬೋಲ್ ಗೋರ್ಡೊ ಕಾರಂಜಿಯಲ್ಲಿ ಈ ಅವಘಡ ಸಂಭವಿಸಿದೆ. ರಾಯಿಟರ್ಸ್ ಪ್ರಕಾರ, ಫೌಂಟೆನ್ ಮೇಲಿನ ಒಂದು ಭಾಗವು ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಜನಸಮೂಹದ ಮೇಲೆ ಬಿದ್ದಿದೆ. ಈ ಅವಘಡದಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, 13 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಂದ್ಯ ಹೀಗಿತ್ತು
120 ನಿಮಿಷಗಳ ಕಾಲ ನಡೆದ ಫೈನಲ್‌ನಲ್ಲಿ, ಬದಲಿ ಆಟಗಾರ ಫೆರಾನ್ ಟೊರೆಸ್ ಅವರ ಏಕೈಕ ಗೋಲಿನಿಂದ ಸ್ಪೇನ್ ಅರ್ಜೆಂಟೀನಾವನ್ನು 1-0 ಗೋಲುಗಳಿಂದ ಸೋಲಿಸಿತು. ಟೊರೆಸ್ 106 ನೇ ನಿಮಿಷದಲ್ಲಿ ಗೋಲು ಗಳಿಸಿ ಅರ್ಜೆಂಟೀನಾವನ್ನು ಸೋಲಿನ ದವಡೆಗೆ ತಳ್ಳಿದರು. ಆರಂಭದಿಂದಲೂ, ಈ ಫೈನಲ್‌ನಲ್ಲಿ ಸ್ಪೇನ್ ತಂಡವು ಅರ್ಜೆಂಟೀನಾ ವಿರುದ್ಧ ಮೇಲುಗೈ ಸಾಧಿಸಿತ್ತು. ಆದಾಗ್ಯೂ ಹಿಂದಿನ ಎರಡು ಪಂದ್ಯಗಳಲ್ಲಿ, ಅರ್ಜೆಂಟೀನಾ ಅಂತಿಮ ನಿಮಿಷಗಳಲ್ಲಿ ಸೋಲನ್ನು ಗೆಲುವಾಗಿ ಪರಿವರ್ತಿಸಿ, ಪಂದ್ಯದ ಮೇಲುಗೈ ಸಾಧಿಸಿತ್ತು. ಹೀಗಾಗಿ ಕೊನೆಯ ನಿಮಿಷಗಳಲ್ಲಿ ಅರ್ಜೆಂಟೀನಾ ಪುಟಿದೇಳಲಿದೆ ಎಂದು ಎಲ್ಲರೂ ಕಾದು ಕುಳಿತಿದ್ದರು. ಆದರೆ ಸ್ಪೇನ್ ವಿರುದ್ಧ ಅರ್ಜೆಂಟೀನಾದ ಯಾವ ತಂತ್ರವೂ ಫಲಕೊಡಲಿಲ್ಲ.
ವಿಶ್ವಕಪ್ ಸ್ವರೂಪದಲ್ಲಿ ಬದಲಾವಣೆ; 4 ತಂಡಗಳ ನಾಯಕರ ಅಸಮಾಧಾನ
ಸ್ಪೇನ್ ಗೆಲುವಿನಲ್ಲಿ ಹೀಗೊಂದು ಕಾಕತಾಳೀಯ
ಈ ಸೋಲಿನೊಂದಿಗೆ ಸತತ ಎರಡನೇ ಮತ್ತು ಒಟ್ಟಾರೆಯಾಗಿ ನಾಲ್ಕನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಅರ್ಜೆಂಟೀನಾದ ಕನಸು ಭಗ್ನವಾಯಿತು. ಹಾಗೆಯೇ ಮೆಸ್ಸಿಯ ಮತ್ತೊಂದು ವಿಶ್ವಕಪ್ ಟ್ರೋಫಿಯೊಂದಿಗೆ ನಿವೃತ್ತಿ ಹೊಂದುವ ಕನಸು ಕೂಡ ನನಸಾಗಲಿಲ್ಲ. ಇತ್ತ ಸ್ಪೇನ್ ಎರಡನೇ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿತು. ಪ್ರಾಸಂಗಿಕವಾಗಿ, 2010 ರಲ್ಲಿ ಕೊನೆಯ ಬಾರಿಗೆ ಸ್ಪೇನ್ ಟ್ರೋಫಿಯನ್ನು ಎತ್ತಿಹಿಡಿದಾಗ, ಪಂದ್ಯದ ಏಕೈಕ ಗೋಲು ಹೆಚ್ಚುವರಿ ಸಮಯದಲ್ಲಿ ಗಳಿಸಲ್ಪಟ್ಟಿತು, ಇದರಿಂದಾಗಿ ಸ್ಪೇನ್ ಚಾಂಪಿಯನ್ ಆಗಿತ್ತು. ಅಲ್ಲದೆ, ಆ ಸಮಯದಲ್ಲಿ, ತಂಡವು ವಿಶ್ವಕಪ್ ಗೆಲ್ಲುವ ಎರಡು ವರ್ಷಗಳ ಮೊದಲು ಯುರೋ ಕಪ್ ಕೂಡ ಗೆದ್ದಿತ್ತು. ಈ ಬಾರಿಯೂ, ತಂಡವು ಹೆಚ್ಚುವರಿ ಸಮಯದಲ್ಲಿ ಗೋಲು ದಾಖಲಿಸಿ ಚಾಂಪಿಯನ್ ಆಯಿತ್ತಲ್ಲದೆ, ತಂಡವು ಕೇವಲ ಎರಡು ವರ್ಷಗಳ ಹಿಂದೆ ಅಂದರೆ 2024 ರಲ್ಲಿ ಯುರೋ ಕಪ್ ಕೂಡ ಗೆದ್ದಿತ್ತು.
