
ನವದೆಹಲಿ, ಮಾರ್ಚ್ 18: ಜನಸಾಮಾನ್ಯರಿಗೆ ವಿಮಾನ ಪ್ರಯಾಣ ಮತ್ತಷ್ಟು ಸುಲಭಗೊಳ್ಳಲಾಗುವಂತೆ ಸರ್ಕಾರ ಕೆಲ ಗಮನಾರ್ಹ ಕ್ರಮಗಳನ್ನು ಕೈಗೊಂಡಿದೆ. ಫ್ಲೈಟ್ನ ಶೇ. 60ಕ್ಕೂ ಹೆಚ್ಚು ಸೀಟುಗಳಿಗೆ ಶುಲ್ಕ ಉಚಿತಗೊಳಿಸಿರುವುದು ಸೇರಿದಂತೆ ವಿವಿಧ ನಿಯಮಗಳನ್ನು ಕೇಂದ್ರ ನಾಗರಿಕ ವಿಮಾನ ಸಚಿವಾಲಯ (civil aviation ministry) ಪ್ರಕಟಿಸಿದೆ. ಸಚಿವಾಲಯ ಬುಧವಾರ ಪತ್ರಿಕಾ ಹೇಳಿಕೆ ಮೂಲಕ ಈ ಹೊಸ ನಿಯಮಗಳನ್ನು ಬಹಿರಂಗಪಡಿಸಿದೆ.
ಶೇ. 60ಕ್ಕೂ ಹೆಚ್ಚು ಸೀಟುಗಳಿಗೆ ಶುಲ್ಕ ಇರಲ್ಲ…
ಫ್ಲೈಟ್ನಲ್ಲಿ ನೀವು ಟಿಕೆಟ್ ಬುಕ್ ಮಾಡಿದಾಗ ಟಿಕೆಟ್ ದರದ ಜೊತೆಗೆ ಸೀಟುಗಳಿಗೆ ಪ್ರತ್ಯೇಕ ಶುಲ್ಕ ನೀಡಬೇಕು. ಅಂದರೆ, ವಿಂಡೋ ಸೀಟುಗಳು, ಎಕ್ಸಿಟ್ ಬಳಿಯ ಸೀಟುಗಳು, ಕಾಲು ಚಾಚಲು ಹೆಚ್ಚು ಅವಕಾಶ ಕೊಡುವ ಸೀಟುಗಳು ಇತ್ಯಾದಿಗಳಿಗೆ ಬೇಡಿಕೆ ಇರುವುದರಿಂದ ಹೆಚ್ಚಿನ ಶುಲ್ಕ ಇರುತ್ತದೆ. ಪ್ರಸಕ್ತ ಫ್ಲೈಟ್ನ ಶೇ. 20ರಷ್ಟು ಸೀಟುಗಳನ್ನು ಶುಲ್ಕರಹಿತವಾಗಿ ಬುಕ್ ಮಾಡಬಹುದು. ಹೊಸ ನಿಯಮಗಳ ಪ್ರಕಾರ, ಈಗ ಕನಿಷ್ಠ ಶೇ. 60ರಷ್ಟು ಸೀಟುಗಳು ಶುಲ್ಕರಹಿತವಾಗಿರಬೇಕು.
ಇದನ್ನೂ ಓದಿ: ಭಯೋತ್ಪಾದನೆ ಆರೋಪದಡಿ ಭಾರತದಲ್ಲಿ 6 ಉಕ್ರೇನಿಯನ್ನರು, ಓರ್ವ ಅಮೆರಿಕನ್ ಬಂಧನ
ಒಂದೇ ಪಿಎನ್ಆರ್ ನಂಬರ್ ಇರುವ ಪ್ರಯಾಣಿಕರಿಗೆ ಅಕ್ಕಪಕ್ಕದಲ್ಲೇ ಸೀಟುಗಳು
ಈಗ ಇರುವ ವ್ಯವಸ್ಥೆಯಲ್ಲಿ ಒಂದು ಕುಟುಂಬ ಅಥವಾ ಗುಂಪಿನ ಹಲವು ಜನರಿಗೆ ಒಟ್ಟಿಗೆ ಫ್ಲೈಟ್ ಟಿಕೆಟ್ ಬುಕ್ ಮಾಡಿದಾಗ ಅಕ್ಕಪಕ್ಕದ ಸೀಟುಗಳು, ಹಿಂಬದಿ, ಮುಂಬದಿ ಸಾಲುಗಳು ಸಿಗುತ್ತವೆ ಎಂದು ಖಾತ್ರಿ ಇರುವುದಿಲ್ಲ. ಫ್ಲೈಟ್ನಲ್ಲಿ ಎಲ್ಲಿ ಬೇಕಾದರೂ ಸೀಟ್ ಅಲಾಟ್ ಆಗಬಹುದು. ಹೊಸ ನಿಯಮದ ಪ್ರಕಾರ ಒಂದೇ ಪಿಎನ್ಆರ್ (PNR) ಅಡಿಯಲ್ಲಿ ಬುಕಿಂಗ್ ಆಗಿರುವ ವ್ಯಕ್ತಿಗಳಿಗೆ ಅಕ್ಕಪಕ್ಕದ ಸೀಟುಗಳನ್ನೇ ಅಲಾಟ್ ಮಾಡಲು ಆದ್ಯತೆ ಕೊಡಬೇಕೆಂದು ಏರ್ಲೈನ್ಸ್ ಕಂಪನಿಗಳಿಗೆ ಸರ್ಕಾರ ನಿರ್ದೇಶನ ಕೊಟ್ಟಿದೆ.
ಲಗೇಜು ವಿಚಾರದಲ್ಲಿ ಸ್ಪಷ್ಟ ಮಾರ್ಗಸೂಚಿಗಳಿರಲಿ
ವಿಮಾನ ಪ್ರಯಾಣ ಮಾಡುವಾಗ ಯಾವ್ಯಾವ ರೀತಿಯ ವಸ್ತುಗಳನ್ನು, ಲಗೇಜುಗಳನ್ನು ತೆಗೆದುಕೊಂಡು ಹೋಗಬಹುದು, ಎಷ್ಟು ಶುಲ್ಕ ಕಟ್ಟಬಹುದು ಇತ್ಯಾದಿ ಬಗ್ಗೆ ವಿಮಾನ ಸಂಸ್ಥೆಗಳು ಸ್ಪಷ್ಟ ಮಾರ್ಗಸೂಚಿಗಳನ್ನು ಪ್ರಯಾಣಿಕರ ಗಮನಕ್ಕೆ ಬರಬೇಕು. ಇದರಿಂದ ಪ್ರಯಾಣಿಕರಿಗೆ ಅನಿಶ್ಚಿತತೆಯ ಸ್ಥಿತಿ ತಪ್ಪುತ್ತದೆ.
ಇದನ್ನೂ ಓದಿ: ಅಗತ್ಯ ಇದ್ದರೆ ಮಾತ್ರ ಎಲ್ಪಿಜಿ ಸಿಲಿಂಡರ್ ಬುಕ್ ಮಾಡಿ: ಇಂಡಿಯನ್ ಆಯಿಲ್ ಮನವಿ
ನಾಗರಿಕ ವಿಮಾನಯಾನ ಸಚಿವಾಲಯ ರೂಪಿಸಿರುವ ಹೊಸ ನಿಯಮಗಳು
- ಫ್ಲೈಟ್ನಲ್ಲಿ ಶೇ. 60ಕ್ಕಿಂತ ಹೆಚ್ಚು ಸೀಟುಗಳು ಶುಲ್ಕರಹಿತವಾಗಿರಬೇಕು
- ಒಂದೇ ಪಿಎನ್ಆರ್ ಅಡಿಯ ಸೀಟುಗಳು ಒಟ್ಟೊಟ್ಟಿಗೆ ಇರುವಂತಿರಬೇಕು.
- ವಿಶೇಷ ವಸ್ತು ಮತ್ತು ಸಾಕುಪ್ರಾಣಿಕಗಳನ್ನು ಸಾಗಿಸುವಾಗ ಬ್ಯಾಗೇಜ್ ನಿಯಮಗಳು ಸ್ಪಷ್ಟವಾಗಿರಬೇಕು.
- ಪ್ರಯಾಣಿಕರ ಹಕ್ಕು ರಕ್ಷಣೆ ವ್ಯವಸ್ಥೆ ಸರಿಯಾಗಿ ಜಾರಿಯಲ್ಲಿರಬೇಕು
- ಪ್ರಯಾಣಿಕರ ಹಕ್ಕುಗಳ ಬಗ್ಗೆ ಮಾಹಿತಿ ಎಲ್ಲಾ ಪ್ಲಾಟ್ಫಾರ್ಮ್ಗಳಲ್ಲೂ ಪ್ರದರ್ಶನವಾಗಬೇಕು.
- ಪ್ರಾದೇಶಿಕ ಭಾಷೆಗಳಲ್ಲೂ ಮಾಹಿತಿ ಲಭ್ಯ ಇರಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ