ಫ್ಲೈ 91 ವಿಮಾನಕ್ಕೆ ಮತ್ತೆ ಲ್ಯಾಂಡಿಂಗ್​​ ಸಮಸ್ಯೆ: ವಾರ ಕಳೆಯುವುದರ ಒಳಗೆ ಹುಬ್ಬಳ್ಳಿಯಲ್ಲಿ ಮೂರನೇ ಘಟನೆ – Kannada News | Fly91 Hubballi Landing Problems: Third Incident in a Week Raises Safety Concerns

ಹುಬ್ಬಳ್ಳಿ, ಏಪ್ರಿಲ್​​ 26: ಕಳೆದ ಒಂದು ವಾರದ ಅವಧಿಯಲ್ಲಿ ಮೂರನೇ ಬಾರಿಗೆ ಫ್ಲೈ 91 ವಿಮಾನಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್​​ ಸಮಸ್ಯೆ ಉಂಟಾಗಿದೆ. ನಿನ್ನೆ ಮಧ್ಯಾಹ್ನ 3.13ಕ್ಕೆ ಹೈದರಾಬಾದ್​​ನಿಂಗ ಹೊರಟಿದ್ದ ವಿಮಾನ ಸಂಜೆ 4.30ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಆಗಸದಲ್ಲಿಯೇ ಕೆಲ ಸಮಯ ವಿಮಾನ ಸುತ್ತುಹೊಡೆದಿದೆ. ಅಂತಿಮವಾಗಿ ನಲವತ್ತು ನಿಮಿಷಗಳ ಕಾಲ ಆಕಾಶದಲ್ಲಿ ಹಾರಾಡಿ ಸಂಜೆ 5.09ಕ್ಕೆ ಫ್ಲೈ 91 ಸಂಸ್ಥೆಯ ಜಿಒಎ 3401 ಪ್ಲೈಟ್ ಲ್ಯಾಂಡ್​​ ಆಗಿದೆ.

ಅಷ್ಟಕ್ಕೂ ಫ್ಲೈ 91 ಸಂಸ್ಥೆಗೆ ಸೇರಿದ ವಿಮಾನಗಳಿಗೆ ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್​​ ಸಮಸ್ಯೆ ಆಗುತ್ತಿರುವುದು ಇದೇ ಮೊದಲೇನಲ್ಲ. ಫೆ. 19ರಂದು ಹೈದರಾಬಾದ್​​ನಿಂದ ಹುಬ್ಬಳ್ಳಿ ಏರ್​​ಪೋರ್ಟ್​ಗೆ ಬರುತ್ತಿದ್ದ ಫ್ಲೈಟ್ ಏಕಾಏಕಿ ವೇಗದ ನಿಯಂತ್ರಣ ಕಳೆದುಕೊಂಡು 4 ಗಂಟೆ ಆಗಸದಲ್ಲೇ ಹಾರಾಡಿತ್ತು. ಬಳಿಕ 4 ಗಂಟೆ ತಡವಾಗಿ ಬೆಂಗಳೂರಿನಲ್ಲಿ ವಿಮಾನವನ್ನು ಲ್ಯಾಂಡ್​​ ಮಾಡಲಾಗಿತ್ತು. ಹವಾಮಾನ ವೈಪರೀತ್ಯ ಹಿನ್ನೆಲೆ ಲ್ಯಾಂಡಿಂಗ್ ಸಮಸ್ಯೆಯಾಗಿದೆ ಎಂದು ಹೇಳಲಾಗಿತ್ತಾದರೂ ತಾಂತ್ರಿಕ ಸಮಸ್ಯೆಯೇ ಇದಕ್ಕೆ ಕಾರಣ ಎಂಬ ಆರೋಪಗಳೂ ಕೇಳಿಬಂದಿದ್ದವು. ಮತ್ತೊಂದೆಡೆ ಘಟನೆ ಬಗ್ಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಲಾಗಿದೆ ಎಂದು ಪ್ರಯಾಣಿಕರ ಕುಟುಂಬಸ್ಥರು ಏರ್​​ಲೈನ್ಸ್ ವಿರುದ್ಧ ಅಸಮಾಧಾನಗೊಂಡಿದ್ದರು.

ಇದನ್ನೂ ಓದಿ: ವಿಮಾನದೊಳಗೆ ಪ್ರಯಾಣಿಕರ ಚೀರಾಟ, ಕಣ್ಣೀರು; ಸಾವಿನ ದರ್ಶನ ಮಾಡಿಸಿದ FLY91 ವಿಮಾನ

ಈ ಘಟನೆ ಮಾಸುವ ಮುನ್ನವೇ ಫೆ.21ರಂದು ಕೂಡ ಇದೇ ರೀತಿಯ ಸಮಸ್ಯೆ ಫ್ಲೈ 91 ವಿಮಾನಕ್ಕೆ ಆಗಿತ್ತು. ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿದ್ದ ವಿಮಾನದ ಲ್ಯಾಂಡಿಂಗ್ ವೇಳೆ ಸಮಸ್ಯೆ ಆಗಿತ್ತು. ಸಂಜೆ 7 ಗಂಟೆಗೆ ಬೆಂಗಳೂರಿನಿಂದ ಹೊರಟಿದ್ದ ಫ್ಲೈಟ್​​ ರಾತ್ರಿ 8.15ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್​ ಆಗಬೇಕಿತ್ತು. ಆದರೆ 1 ಗಂಟೆ ಸುತ್ತಾಟ ಬಳಿಕ ರಾತ್ರಿ 9.15ಕ್ಕೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್​​ ಆಗಿತ್ತು. ಈ ಬಾರಿಯೂ ಹವಾಮಾನ ವೈಪರೀತ್ಯದಿಂದ ಸಮಸ್ಯೆ ಎಂದು ಅಧಿಕಾರಿಗಳು ಹೇಳಿದ್ದರಾದರೂ ಫ್ಲೈ 91 ವಿಮಾನಕ್ಕೆ ಮಾತ್ರ ಯಾಕೆ ತೊಂದರೆ ಎಂಬ ಪ್ರಶ್ನೆ ಉದ್ಭವವಾಗಿತ್ತು. ಆ ಬಳಿಕ ಕೇವಲ ಮೂರು ದಿನಗಳ ಅಂತರದಲ್ಲಿ ಇದೇ ಸಂಸ್ಥೆಯ ವಿಮಾನಕ್ಕೆ ಮತ್ತೆ ಲ್ಯಾಂಡಿಂಗ್​​ ಸಮಸ್ಯೆ ಆಗಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಮಾನ ಸಂಸ್ಥೆಯ ವಿರುದ್ಧ ಪ್ರಯಾಣಿಕರಿಂದ ತೀವ್ರ ಆಕ್ರೋಶವೂ ವ್ಯಕ್ತವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:31 am, Sun, 26 April 26

Source link

Leave a Reply

Your email address will not be published. Required fields are marked *