ಬಂದೇ ಬಿಡ್ತು ‘ಹೌಸ್ ಆಫ್ ದಿ ಡ್ರ್ಯಾಗನ್ 3’: ಬಿಡುಗಡೆ ದಿನಾಂಕ ಘೋಷಣೆ – Kannada News | House Of The Dragon season 3 trailer released

ವಿಶ್ವದ ಈ ವರೆಗಿನ ಅತ್ಯುತ್ತಮ ವೆಬ್ ಸರಣಿ ‘ಗೇಮ್ ಆಫ್ ಥ್ರೋನ್ಸ್’ (Game Of  Thrones) ಎನ್ನಲಾಗುತ್ತದೆ. ವಿಶ್ವದಲ್ಲಿ ಅತಿ ಹೆಚ್ಚು ಜನ ನೋಡಿರುವ ವೆಬ್ ಸರಣಿ ಸಹ ಇದೇ ಆಗಿದೆ. ಜಾರ್ಜ್​ ಆರ್​​ಆರ್ ಮಾರ್ಟಿನ್ ಬರೆದಿರುವ ‘ಆ ಸಾಂಗ್ ಆಫ್ ಐಸ್ ಆಂಡ್ ಫೈರ್’ ಪುಸ್ತಕ ಸರಣಿಯನ್ನು ಆಧರಿಸಿದ ಕತೆಯನ್ನು ಇದು ಒಳಗೊಂಡಿದೆ. ‘ಗೇಮ್ ಆಫ್ ಥ್ರೋನ್’ ವೆಬ್ ಸರಣಿ 2019 ರಲ್ಲಿ ಕೊನೆಗೊಂಡಿತ್ತು. ಅದರ ಪ್ರೀಕ್ವೆಲ್ ‘ಹೌಸ್ ಆಫ್ ದಿ ಡ್ರ್ಯಾಗನ್’ 2022 ರಲ್ಲಿ ಮೊದಲ ಸೀಸನ್ ಪ್ರಸಾರವಾಗಿ ಭಾರಿ ಜನಪ್ರಿಯತೆ ಗಳಿಸಿಕೊಂಡಿತು. ಇದೀಗ ‘ಹೌಸ್ ಆಫ್ ದಿ ಡ್ರ್ಯಾಗನ್’ ಸೀಸನ್ 3 ಪ್ರಸಾರಕ್ಕೆ ಅಣಿಯಾಗಿದ್ದು, ವೆಬ್ ಸರಣಿಯ ಟ್ರೈಲರ್ ಬಿಡುಗಡೆ ಆಗಿದೆ. ಜೊತೆಗೆ ಬಿಡುಗಡೆ ದಿನಾಂಕವನ್ನು ಸಹ ಪ್ರಕಟಿಸಲಾಗಿದೆ.

‘ಹೌಸ್ ಆಫ್ ದಿ ಡ್ರ್ಯಾಗನ್’ ಸರಣಿಯು ‘ಗೇಮ್ ಆಫ್ ಥ್ರೋನ್’ ಕತೆ ನಡೆಯುವ 200 ವರ್ಷ ಹಿಂದಿನ ಕತೆಯನ್ನು ಒಳಗೊಂಡಿದೆ. ಸೀಸನ್ 1 ಬಹುತೇಕ ಪಾತ್ರ ಪರಿಚಯ, ವಿವಿಧ ಹೌಸ್​​ಗಳ ಪರಿಚಯ ಅವರ ಸ್ಥಿತಿ ಇನ್ನಿತರೆಗಳನ್ನು ತೋರಿಸಿದರೆ ಸೀಸನ್ 2ರಲ್ಲಿ ಟಾಗೇರಿಯನ್ ರಾಜನ ಸಾವಿನ ಮೂಲಕ ಒಳ ರಾಜಕೀಯಗಳು ಶುರುವಾಗಿದ್ದವು. ಯುದ್ಧಕ್ಕೆ ತಯಾರಿ ಆರಂಭಿಸುವ ಮೂಲಕ ಎರಡನೇ ಸೀಸನ್ ಅಂತ್ಯವಾಗಿತ್ತು. ಆದರೆ ಇದೀಗ ಸೀಸನ್ 3 ರಲ್ಲಿ ಯುದ್ಧ ಮತ್ತು ಅದರ ನಂತರದ ಕತೆಯನ್ನು ಒಳಗೊಂಡಿದೆ.

ಈಗ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ರಿಹಾನಾ ಟಾಗೇರಿಯನ್ ಮತ್ತು ಏಮಂಡ್ ಟಾಗೇರಿಯನ್ ನಡುವೆ ಭೀಕರ ಯುದ್ಧ ನಡೆದಿದೆ. ಕೊಲೆಯಾಗುವ ಭಯದಿಂದ ಪರಾರಿ ಆಗಿರುವ ಆತನ ಸಹೋದರ ಏಗನ್ ಟಾಗೇರಿಯನ್ ಸಹ ಈ ಸೀಸನ್​​ನಲ್ಲಿ ತಮ್ಮನ ವಿರುದ್ಧ ಸೇಡು ತೀರಿಸಿಕೊಳ್ಳಲು ಮರಳಿ ಬರುತ್ತಿದ್ದಾನೆ. ರಿಹಾನಾಳ ಪತಿ ಮತ್ತು ಚಿಕ್ಕಪ್ಪ ಎರಡೂ ಆಗಿರುವ ಡೇಮನ್ ಟಾಗೇರಿಯನ್ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ಸಹ ತೋರಿಸಲಾಗಿದೆ. ಜೊತೆಗೆ ಕೆಲವು ಹೊಸ ಪಾತ್ರಗಳ ಪರಿಚಯವನ್ನು ಸೀಸನ್ 3ರಲ್ಲಿ ಮಾಡಲಾಗಿದೆ.

ಇದನ್ನೂ ಓದಿ:ಕೊಲೆ ಮಾಡಲು ಒಂದು ತಿಂಗಳು ವೆಬ್ ಸೀರೀಸ್ ನೋಡಿದ ಆರೋಪಿಗಳು

‘ಹೌಸ್ ಆಫ್ ದಿ ಡ್ರ್ಯಾಗನ್’ ಸೀಸನ್ 3 ಜೂನ್ 22 ಕ್ಕೆ ಬಿಡುಗಡೆ ಆಗಲಿದೆ. ಎಚ್​​ಬಿಓನಲ್ಲಿ ಇದು ಪ್ರಸಾರ ಆಗಲಿದ್ದು, ಜಿಯೋ ಹಾಟ್​​ಸ್ಟಾರ್​​ನಲ್ಲಿ ಸಹ ವೆಬ್ ಸರಣಿಯನ್ನು ವೀಕ್ಷಿಸಬಹುದಾಗಿದೆ. ‘ಗೇಮ್ ಆಫ್ ಥ್ರೋನ್ಸ್’ ಸರಣಿಯ ಎರಡನೇ ಪ್ರೀಕ್ವೆಲ್ ಇದಾಗಿದೆ. ‘ಹೌಸ್ ಆಫ್ ದಿ ಡ್ರ್ಯಾಗನ್’ ಹೊರತಾಗಿ ‘ಎ ನೈಟ್ ಆಫ್ ದಿ ಸೆವೆನ್ ಕಿಂಗ್ಡಮ್ಸ್’ ಹೆಸರಿನ ವೆಬ್ ಸರಣಿ ಸಹ ಈಗಾಗಲೇ ಪ್ರದರ್ಶನ ಆಗುತ್ತಿದ್ದು ಅದರ ಒಂದು ಸೀಸನ್​ ಈಗಾಗಲೇ ಪ್ರಸಾರ ಆಗಿದ್ದು, ಅದೂ ಸಹ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಎರಡನೇ ಸೀಸನ್ ಈ ವರ್ಷದ ಅಂತ್ಯದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *