ಬಾಲಿವುಡ್ ಹಿರಿಯ ನಟ ಸನ್ನಿ ಡಿಯೋಲ್ (Sunny Deol) ಅಭಿನಯದ ಬಹುನಿರೀಕ್ಷಿತ ‘ಬಟ್ವಾರಾ 1947’ (Batwara 1947) ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. 1947ರ ಭಾರತ-ಪಾಕಿಸ್ತಾನ ವಿಭಜನೆಯ ಭೀಕರ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರದ ಟ್ರೇಲರ್, ಸೌಹಾರ್ದತೆ ಮತ್ತು ಮಾನವೀಯತೆಯ ಸಂದೇಶದೊಂದಿಗೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಆಗಸ್ಟ್ 14ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಆಮಿರ್ ಖಾನ್ (Aamir Khan) ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈಗ ಬಿಡುಗಡೆ ಆಗಿರುವ ಟ್ರೇಲರ್ನಲ್ಲಿ ಸಿನಿಮಾದ ಕಥೆಯ ಬಗ್ಗೆ ವಿವರ ನೀಡಲಾಗಿದೆ.
‘ಬಟ್ವಾರಾ 1947’ ಸಿನಿಮಾದ ಕಥೆ:
ಟ್ರೇಲರ್‌ನ ಆರಂಭದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಶುಭ ಸುದ್ದಿ ಕೇಳಿಬರುತ್ತದೆ. ಆದರೆ, ಅದರ ಬೆನ್ನಲ್ಲೇ ದೇಶ ವಿಭಜನೆಯ ಬೆಂಕಿಯಲ್ಲಿ ಮನೆ-ಮಠ ಕಳೆದುಕೊಂಡು, ಒಟ್ಟಿಗೆ ಬಾಳುತ್ತಿದ್ದ ಜನರಲ್ಲಿ ಹಿಂಸೆ, ಭಯ ಮತ್ತು ಬಲವಂತದ ವಲಸೆ ಹೇಗೆ ಬಿರುಕು ಮೂಡಿಸುತ್ತದೆ ಎಂಬುದನ್ನು ಸನ್ನಿ ಡಿಯೋಲ್ ಆಘಾತದಿಂದ ನೋಡುವ ದೃಶ್ಯಗಳಿವೆ. ಸನ್ನಿ ಡಿಯೋಲ್ ಹಾಗೂ ಅವರ ಪತ್ನಿ ಪಾತ್ರದಲ್ಲಿ ನಟಿಸಿರುವ ಪ್ರೀತಿ ಜಿಂಟಾ ಮತ್ತು ಮಗ ಕರಣ್ ಡಿಯೋಲ್ ಪಾಕಿಸ್ತಾನದ ಲಾಹೋರ್‌ಗೆ ವಲಸೆ ಹೋಗಿ, ಅಲ್ಲಿ ಅವರಿಗೆ ಹಂಚಿಕೆಯಾದ ಹೊಸ ಮನೆಗೆ ತೆರಳುತ್ತಾರೆ. ಅಲ್ಲಿ ಅವರನ್ನು ಅಲಿ ಫಜಲ್ ಸ್ವಾಗತಿಸುತ್ತಾರೆ.
ಆದರೆ, ಆ ಮನೆಯ ಮಹಡಿಯ ಮೇಲೆ ಹಿರಿಯ ಹಿಂದೂ ಮಹಿಳೆಯೊಬ್ಬರು (ಶಬಾನಾ ಅಜ್ಮಿ) ವಾಸಿಸುತ್ತಿದ್ದು, ತಮ್ಮ ಪಾರಂಪರಿಕ ಮನೆಯನ್ನು ತೊರೆಯಲು ನಿರಾಕರಿಸುತ್ತಾರೆ. ಅವರು ತಮ್ಮ ಕೋಣೆಯಲ್ಲಿ ಸಣ್ಣ ದೇವಾಲಯವನ್ನಿಟ್ಟುಕೊಂಡು ಪೂಜೆ ಮಾಡುವುದು ಸ್ಥಳೀಯ ಕೆಲವರ ಆಕ್ರೋಶಕ್ಕೆ ಕಾರಣವಾಗುತ್ತದೆ. ಆಕೆಯನ್ನು ಮನೆಯಿಂದ ಹೊರಹಾಕಲು ಗಲಭೆ ಸೃಷ್ಟಿಯಾದಾಗ, ಸನ್ನಿ ಡಿಯೋಲ್ ಆ ತಾಯಿಯ ರಕ್ಷಣೆಗೆ ಗುರಾಣಿಯಾಗಿ ನಿಲ್ಲುತ್ತಾರೆ.
‘ಬಟ್ವಾರಾ 1947’ ಟ್ರೇಲರ್:
ಹಿಂದೂ ಮಹಿಳೆಯನ್ನು ಉಳಿಸಲು ಏಕಿಷ್ಟು ಹಠ ಎಂದು ಕೆಲವರು ಪ್ರಶ್ನಿಸಿದಾಗ, ಸನ್ನಿ ಡಿಯೋಲ್ ‘ಹಿಂದೂ ಮಹಿಳೆಯೇ? ಆಕೆ ಒಬ್ಬ ತಾಯಿ. ಆಕೆಗೆ ಹಿಂದೂ-ಮುಸ್ಲಿಂ ಎಂಬ ಹಣೆಪಟ್ಟಿ ಹಚ್ಚಬೇಡಿ. ನಮ್ಮ ಮೊದಲ ಧರ್ಮವೇ ತಾಯಿ. ನಾವು ಆಡುವ ಮೊದಲ ಮಾತು ಕೂಡ ತಾಯಿ’ ಎಂದು ಗರ್ಜಿಸುವ ಸಂಭಾಷಣೆಯು ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚು ಮಾಡಿದೆ.
ಕಟ್ ಇಲ್ಲದೆ ‘A’ ಸರ್ಟಿಫಿಕೇಟ್:
ಈ ಸಿನಿಮಾದ ಮೂಲಕ ನಟಿ ಪ್ರೀತಿ ಜಿಂಟಾ ಅವರು ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಚಿತ್ರಕ್ಕೆ ಎ.ಆರ್. ರಹಮಾನ್ ಸಂಗೀತ ಸಂಯೋಜಿಸಿದ್ದು, ಜಾವೇದ್ ಅಖ್ತರ್ ಗೀತರಚನೆ ಮಾಡಿದ್ದಾರೆ. ಈ ನಡುವೆ, ಸೆನ್ಸಾರ್ ಮಂಡಳಿಯು ಯಾವುದೇ ಕಟ್ ಇಲ್ಲದೇ ಈ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ನೀಡಿ ಬಿಡುಗಡೆಗೆ ಹಸಿರು ನಿಶಾನೆ ತೋರಿದೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಸನ್ನಿ ಡಿಯೋಲ್, ‘ಬಟ್ವಾರಾ 1947 ಚಿತ್ರಕ್ಕೆ ಸೆನ್ಸಾರ್ ಮಂಡಳಿ ಒಂದೂ ಕಟ್ ಇಲ್ಲದೆ ಎ ಸರ್ಟಿಫಿಕೇಟ್ ನೀಡಿದೆ. ಇದು ಪ್ರೀತಿ ಮತ್ತು ಮಾನವೀಯತೆಯ ಕುರಿತಾದ ಸಿನಿಮಾ. ಆಗಸ್ಟ್ 14ರ ವಿಭಜನೆಯ ನೆನಪಿನ ದಿನದಂದು ಚಿತ್ರಮಂದಿರಗಳಲ್ಲಿ ವೀಕ್ಷಿಸಿ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಿನಿಮಾ ಸಂಭಾವನೆ ಮಾತ್ರವಲ್ಲ, ಸನ್ನಿ ಡಿಯೋಲ್ಗೆ ಸರ್ಕಾರದಿಂದ ಸಿಗ್ತಿದೆ ಪಿಂಚಣಿ
ಹಿಟ್ ಜೋಡಿಯ ಕಾಂಬಿನೇಷನ್:
90ರ ದಶಕದ ಸೂಪರ್ ಹಿಟ್ ನಟ-ನಿರ್ದೇಶಕ ಜೋಡಿಯಾದ ಸನ್ನಿ ಡಿಯೋಲ್ ಮತ್ತು ರಾಜ್‌ಕುಮಾರ್ ಸಂತೋಷಿ ಈ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಈ ಹಿಂದೆ ‘ಘಾತಕ್’, ‘ಘಾಯಲ್’ ಮತ್ತು ‘ದಾಮಿನಿ’ಯಂತಹ ಐಕಾನಿಕ್ ಸಿನಿಮಾಗಳನ್ನು ನೀಡಿದ್ದ ಈ ಜೋಡಿಯ ಹೊಸ ಚಿತ್ರಕ್ಕಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ‘ಬಟ್ವಾರಾ 1947’ ಚಿತ್ರವು ಆಗಸ್ಟ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
