ಸಚಿವ ಕೃಷ್ಣಬೈರೇಗೌಡ, ಸಂಸದ ತೇಜಸ್ವಿ ಸೂರ್ಯImage Credit source: tv9 kannada
ಬೆಂಗಳೂರು, ಜುಲೈ 09: ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಮಾಡುವ ಮೂಲಕ ಬೆಂಗಳೂರಿನ ಅಭಿವೃದ್ಧಿಗೆ ಸಚಿವ ಕೃಷ್ಣಬೈರೇಗೌಡ (Krishna Byre Gowda) ಮುಂದಾಗಿದ್ದಾರೆ. ಈ ಬೆನ್ನಲ್ಲೇ ಸಂಸದ ತೇಜಸ್ವಿ ಸೂರ್ಯ (Tejasvi Surya) ಕೃಷ್ಣಬೈರೇಗೌಡರಿಗೆ ಪತ್ರ ಬರೆದಿದ್ದು, ಅನುಮೋದಿತ ಬನಶಂಕರಿ ಸ್ಕೈವಾಕ್ ಯೋಜನೆ ಜಾರಿಗೆ ತರಬೇಕು. ಸ್ಕೈವಾಕ್ನ್ನು ಬಿ-ಸ್ಮೈಲ್ ಫ್ಲೈಓವರ್‌ಗಾಗಿ ಬಲಿ ಕೊಡಬಾರದು ಎಂದು ಆಗ್ರಹಿಸಿದ್ದಾರೆ.
ತೇಜಸ್ವಿ ಸೂರ್ಯ ಬರೆದ ಪತ್ರದಲ್ಲಿ ಏನಿದೆ?
ಈ ಕುರಿತಾಗಿ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ. ‘‘ಕೆಲವು ವಾರಗಳ ಹಿಂದೆ ಬನಶಂಕರಿಯಲ್ಲಿ ರಸ್ತೆ ದಾಟುತ್ತಿದ್ದ ಓರ್ವ ವೃದ್ಧ ಮಹಿಳೆ ಪ್ರಾಣ ಕಳೆದುಕೊಂಡರು. ಸರಿಯಾದ ಪಾದಚಾರಿ ಮೂಲಸೌಕರ್ಯ ಇದ್ದಿದ್ದರೆ ಈ ದುರಂತವನ್ನು ತಪ್ಪಿಸಬಹುದಿತ್ತು’’ ಎಂದಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಟ್ವೀಟ್
A few weeks ago, an elderly woman lost her life while trying to cross the road at Banashankari. It was another tragedy that could have been prevented.
For nearly seven years, I have fought to get the Banashankari Skywalk built. We got a practical, commuter-friendly circular… pic.twitter.com/ffziLXEKcV
— Tejasvi Surya (@Tejasvi_Surya) July 9, 2026
‘‘ಕಳೆದ 7 ವರ್ಷಗಳಿಂದ ಬನಶಂಕರಿ ಸ್ಕೈವಾಕ್ ನಿರ್ಮಾಣಕ್ಕಾಗಿ ನಾನು ನಿರಂತರವಾಗಿ ಹೋರಾಟ ಮಾಡುತ್ತಿದ್ದೇನೆ. ಜನರು ನಿಜವಾಗಿಯೂ ಬಳಸುವಂತೆ ಪ್ರಾಯೋಗಿಕ ಹಾಗೂ ಪ್ರಯಾಣಿಕ ಸ್ನೇಹಿ ವೃತ್ತಾಕಾರದ ವಿನ್ಯಾಸವನ್ನು ಸಿದ್ಧಪಡಿಸಿದ್ದೇವೆ. ಬಿಬಿಎಂಪಿ ಬಜೆಟ್‌ನಲ್ಲಿ 45 ಕೋಟಿ ರೂ ಅನುದಾನವನ್ನು ಮಂಜೂರು ಮಾಡಿಸಿದ್ದೇವೆ. ಶಂಕುಸ್ಥಾಪನೆಯೂ ಆಯಿತು. ಆದರೆ ಇಷ್ಟೆಲ್ಲಾ ಆದರೂ, ಕಾಮಗಾರಿ ಇನ್ನೂ ಆರಂಭವೇ ಆಗಿಲ್ಲ’’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಒಂದು ಸರಳ ಸ್ಕೈವಾಕ್ ನಿರ್ಮಾಣಕ್ಕೂ ಇಷ್ಟು ವರ್ಷ ಬೇಕೇ?
‘‘ಅನುಮೋದಿತ ಬನಶಂಕರಿ ಸ್ಕೈವಾಕ್ ಯೋಜನೆಯನ್ನು ತಕ್ಷಣ ಜಾರಿಗೆ ತರಬೇಕು ಮತ್ತು ಅದನ್ನು ಬಿ-ಸ್ಮೈಲ್ ಫ್ಲೈಓವರ್‌ಗಾಗಿ ಬಲಿಕೊಡಬಾರದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರಿಗೆ ಮತ್ತೊಮ್ಮೆ ಪತ್ರ ಬರೆದಿದ್ದೇನೆ. ಈ ಸ್ಕೈವಾಕ್ ಮಾತ್ರವೇ ಟಿಟಿಎಂಸಿ, ಮೆಟ್ರೋ ನಿಲ್ದಾಣ, ಮಾರುಕಟ್ಟೆ ಮತ್ತು ದೇವಸ್ಥಾನಗಳ ನಡುವೆ ಸುರಕ್ಷಿತ, ಸುಗಮ ಹಾಗೂ ಎಲ್ಲರಿಗೂ ಅನುಕೂಲಕರ ಸಂಪರ್ಕ ಕಲ್ಪಿಸಬಲ್ಲದು’’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಫುಟ್‌ಪಾತ್ ತೆರವು ಬೆನ್ನಲ್ಲೇ ವಾಹನ ಟೋಯಿಂಗ್ ಬಗ್ಗೆ ಸಚಿವ ಕೃಷ್ಣಬೈರೇಗೌಡ ಸುಳಿವು
‘‘ಈ ನಿಟ್ಟಿನಲ್ಲಿ ಸಚಿವರು ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ, ಈ ಬಹುಕಾಲದ ಸಾರ್ವಜನಿಕ ಸುರಕ್ಷತಾ ಯೋಜನೆಯನ್ನು ಕೊನೆಗೂ ಸಾಕಾರಗೊಳಿಸುತ್ತಾರೆ ಎಂಬ ಆಶಯ ನನ್ನದು’’ ಎಂದು ಪತ್ರದಲ್ಲಿ ತೇಜಸ್ವಿ ಸೂರ್ಯ ಉಲ್ಲೇಖಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
