T20 World Cup 2026: ಟಿ20 ವಿಶ್ವಕಪ್ನಲ್ಲಿ ಶಿಮ್ರಾನ್ ಹೆಟ್ಮೆಯರ್ (Shimron Hetmyer) ಸಿಡಿಲಬ್ಬರ ಮುಂದುವರೆದಿದೆ. ಈ ಸಿಡಿಲಬ್ಬರದೊಂದಿಗೆ ಹೆಟ್ಮೆಯರ್ ಈವರೆಗೆ ಸಿಡಿಸಿರುವ ಸಿಕ್ಸರ್ಗಳ ಸಂಖ್ಯೆ ಬರೋಬ್ಬರಿ 17. ಅದರಲ್ಲೂ ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಶಿಮ್ರಾನ್ ಬ್ಯಾಟ್ನಿಂದ 7 ಸಿಕ್ಸರ್ಗಳು ಮೂಡಿಬಂದಿವೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿಮ್ರಾನ್ ಹೆಟ್ಮೆಯರ್ ಕೇವಲ 34 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 85 ರನ್ ಬಾರಿಸಿದ್ದಾರೆ. ಈ ವೇಳೆ ಬಾರಿಸಿದ ಏಳು ಸಿಕ್ಸರ್ಗಳೊಂದಿಗೆ ನಿಕೋಲಸ್ ಪೂರನ್ ಅವರ ದಾಖಲೆಯನ್ನು ಸಹ ಸರಿಗಟ್ಟಿದ್ದಾರೆ.
ಅಂದರೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ವಿಶ್ವ ದಾಖಲೆ ವೆಸ್ಟ್ ಇಂಡೀಸ್ನ ಮಾಜಿ ಆಟಗಾರ ನಿಕೋಲಸ್ ಪೂರನ್ ಹೆಸರಿನಲ್ಲಿದೆ. 2024 ರ ವಿಶ್ವಕಪ್ನಲ್ಲಿ ಪೂರನ್ ಬರೋಬ್ಬರಿ 17 ಸಿಕ್ಸರ್ ಸಿಡಿಸುವ ಮೂಲಕ ಈ ದಾಖಲೆ ನಿರ್ಮಿಸಿದ್ದಾರೆ.
ಇದೀಗ ಸಿಕ್ಸರ್ಗಳ ಸುರಿಮಳೆಯೊಂದಿಗೆ ಶಿಮ್ರಾನ್ ಹೆಟ್ಮೆಯರ್ ಈ ದಾಖಲೆ ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಐದು ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಹೆಟ್ಮೆಯರ್ ಈವರೆಗೆ ಸಿಡಿಸಿರುವ ಒಟ್ಟು ಸಿಕ್ಸರ್ಗಳ ಸಂಖ್ಯೆ ಬರೋಬ್ಬರಿ 17. ಈ ಮೂಲಕ ಟಿ20 ವಿಶ್ವಕಲ್ ಆವೃತ್ತಿಯೊಂದರಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಪೂರನ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ಸದ್ಯ ಸೂಪರ್-8 ಪಂದ್ಯವಾಡುತ್ತಿರುವ ಹೆಟ್ಮೆಯರ್ ಮುಂದಿನ ಪಂದ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಈ ಪಂದ್ಯಗಳಲ್ಲಿ ಒಂದು ಸಿಕ್ಸರ್ ಬಾರಿಸಿದರೂ, ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಳ್ಳಬಹುದು. ಹೀಗಾಗಿ ಶಿಮ್ರಾನ್ ಹೆಟ್ಮೆಯರ್ ಬ್ಯಾಟ್ನಿಂದ ಈ ಭರ್ಜರಿ ದಾಖಲೆಯನ್ನು ನಿರೀಕ್ಷಿಸಬಹುದಾಗಿದೆ.
