ಬಾಂಗ್ಲಾದೇಶ್ ಕ್ರಿಕೆಟ್ ತಂಡಕ್ಕೆ ಆಸ್ಟ್ರೇಲಿಯಾದ ಯುವ ವೇಗಿಯೊಬ್ಬ ಅಕ್ಷರಶಃ ನಡುಕ ಹುಟ್ಟಿಸಿದ್ದಾನೆ. ಕೇವಲ 22 ವರ್ಷದ ಆಸ್ಟ್ರೇಲಿಯಾದ ಯುವ ಎಡಗೈ ವೇಗದ ಬೌಲರ್ ಕ್ಯಾಂಪ್ಬೆಲ್ ಥಾಂಪ್ಸನ್, ಬಾಂಗ್ಲಾದೇಶ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿ ಬರೋಬ್ಬರಿ 8 ವಿಕೆಟ್ ಕಬಳಿಸಿದ್ದಾರೆ. ಇವರ ಈ ಕರಾರುವಾಕ್ ದಾಳಿಗೆ ಧೂಳೀಪಟವಾದ ಬಾಂಗ್ಲಾದೇಶ್, ತನ್ನ ಎರಡನೇ ಇನಿಂಗ್ಸ್ನಲ್ಲಿ ಕೇವಲ 54 ರನ್ಗಳಿಗೆ ಆಲೌಟ್ ಆಗಿದೆ.
ಕ್ರಿಕೆಟ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧ ಡಾರ್ವಿನ್ನ ಮರಾರಾ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಕ್ಯಾಂಪ್ಬೆಲ್ ಥಾಂಪ್ಸನ್ ಮಿಂಚಿನ ದಾಳಿ ಸಂಘಟಿಸಿದ್ದಾರೆ. ಕೇವಲ ಎರಡನೇ ಪ್ರಥಮ ದರ್ಜೆ ಪಂದ್ಯವಾಡುತ್ತಿರುವ ಸೌತ್ ಆಸ್ಟ್ರೇಲಿಯಾದ ಈ ಯುವ ಪ್ರತಿಭೆ, ಇಡೀ ಬಾಂಗ್ಲಾ ಬ್ಯಾಟಿಂಗ್ ಲೈನಪ್ ಅನ್ನು ಧ್ವಂಸಗೊಳಿಸಿದರು. ಥಾಂಪ್ಸನ್ ಕೇವಲ 25 ರನ್ ನೀಡಿ 8 ವಿಕೆಟ್ ಕಬಳಿಸುವ ಮೂಲಕ ಪಂದ್ಯದ ಹೀರೊ ಆಗಿ ಹೊರಹೊಮ್ಮಿದ್ದಾರೆ.
ಪಂದ್ಯದ ವಿವರ:
ಮೊದಲ ಇನಿಂಗ್ಸ್ನಲ್ಲಿ ಮೆಹಿದಿ ಹಸನ್ ಮಿರಾಝ್ ಅವರ ಶತಕದ (109*) ನೆರವಿನಿಂದ ಬಾಂಗ್ಲಾದೇಶ್ ತಂಡ 263 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಇಲೆವೆನ್, ಟೇಗ್ ವೈಲಿ ಅವರ ಅದ್ಭುತ 130 ರನ್ಗಳ ನೆರವಿನಿಂದ 355 ರನ್ ಕಲೆಹಾಕಿ 92 ರನ್ಗಳ ಮುನ್ನಡೆ ಪಡೆದುಕೊಂಡಿತು.
ಇದನ್ನೂ ಓದಿ: ಸದಾ ‘ಗಂಭೀರ’ವಾಗಿರುವ ಗಂಭೀರ್ಗೆ ನಗು ತರಿಸಿದ ಜಡೇಜಾ!
92 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ್ ತಂಡಕ್ಕೆ ಕ್ಯಾಂಪ್ಬೆಲ್ ಥಾಂಪ್ಸನ್ ಆಘಾತದ ಮೇಲೆ ಆಘಾತ ನೀಡಿದರು. ಪರಿಣಾಮ ಬಾಂಗ್ಲಾ ಪಡೆ ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 54 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಕ್ರಿಕೆಟ್ ಆಸ್ಟ್ರೇಲಿಯಾ ಇಲೆವೆನ್ ತಂಡವು ಇನಿಂಗ್ಸ್ ಹಾಗೂ 38 ರನ್ಗಳ ಭರ್ಜರಿ ಜಯ ದಾಖಲಿಸಿತು. ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 25 ರನ್ ನೀಡಿ 8 ವಿಕೆಟ್ ಕಬಳಿಸುವ ಕ್ಯಾಂಪ್ಬೆಲ್ ಥಾಂಪ್ಸನ್ ಭರ್ಜರಿ ಗೆಲುವಿನ ರೂವಾರಿ ಎನಿಸಿಕೊಂಡರು.
ಟೆಸ್ಟ್ ಸರಣಿಗೂ ಮುನ್ನ ಎಚ್ಚರಿಕೆ:
ಆಗಸ್ಟ್ 13 ರಿಂದ ಡಾರ್ವಿನ್ನಲ್ಲಿ ಆಸ್ಟ್ರೇಲಿಯಾದ ಪ್ರಮುಖ ತಂಡದ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಅಲ್ಲಿ ಬಾಂಗ್ಲಾದೇಶ್ ತಂಡವು ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಝಲ್ವುಡ್ ಅವರಂತಹ ವಿಶ್ವದ ನಂಬರ್ ಒನ್ ವೇಗಿಗಳನ್ನು ಎದುರಿಸಬೇಕಾಗಿದೆ. ಅದಕ್ಕೂ ಮುನ್ನ ಕೇವಲ 22 ವರ್ಷದ ಯುವ ಆಟಗಾರನ ಎದುರೇ 54 ರನ್ಗಳಿಗೆ ಧೂಳೀಪಟವಾಗಿರುವುದ ಬಾಂಗ್ಲಾದೇಶ್ ತಂಡಕ್ಕೆ ತೀವ್ರ ಆತಂಕವನ್ನುಂಟು ಮಾಡಿದೆ.