ನಟ ವಿನೋದ್ ಪ್ರಭಾಕರ್ (Vinod Prabhakar) ಅವರು ‘ಬಲರಾಮನ ದಿನಗಳು’ ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರದ ಬಗ್ಗೆ ಅವರ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಈ ಸಿನಿಮಾ ಹೇಗಿರಲಿದೆ ಎಂಬುದು ಈಗ ಟೀಸರ್ ಮೂಲಕ ಗೊತ್ತಾಗಿದೆ. ಈ ಮೊದಲು 2 ಹಾಡುಗಳ ಮೂಲಕ ಸುದ್ದಿಯಾಗಿದ್ದ ಈ ಚಿತ್ರತಂಡ ಈಗ ಟೀಸರ್ ಬಿಡುಗಡೆ ಮಾಡಿದೆ. 80ರ ದಶಕದ ಬೆಂಗಳೂರಿನ ಭೂತಕ ಲೋಕವನ್ನು ‘ಬಲರಾಮನ ದಿನಗಳು’ (Balaramana Dinagalu) ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಕೆ.ಎಂ. ಚೈತನ್ಯ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
ಆ್ಯಕ್ಷನ್ ಸಿನಿಮಾಗಳ ಮೂಲಕ ಹೆಸರಾದವರು ವಿನೋದ್ ಪ್ರಭಾಕರ್. ಆದರೂ ಅವರು ಒಂದೇ ಬಗೆಯ ಪಾತ್ರಕ್ಕೆ ಸೀಮಿತವಾಗಿಲ್ಲ. ‘ಬಲರಾಮನ ದಿನಗಳು’ ಸಿನಿಮಾದಲ್ಲಿ ಅವರ ಪಾತ್ರ ಬೇರೆ ರೀತಿ ಇದೆ. ಟೀಸರ್ ನೋಡಿದ ಬಳಿಕ ಅದು ಸ್ಪಷ್ಟವಾಗಿದೆ. ಸಿನಿಮಾದ ನಿರ್ಮಾಪಕಿ ಪದ್ಮಾವತಿ ಅವರೇ ಟೀಸರ್ ಬಿಡುಗಡೆ ಮಾಡಿದರು. ಸಿನಿಮಾ ನಿರ್ಮಾಣಕ್ಕೆ ಕುಟುಂಬದವರು ನೀಡಿದ ಸಹಕಾರಕ್ಕೆ ಅವರು ಧನ್ಯವಾದ ತಿಳಿಸಿದರು. ಈ ಚಿತ್ರದಲ್ಲಿ ಅವರೊಂದು ಪಾತ್ರವನ್ನೂ ಮಾಡಿದ್ದಾರೆ.
‘ಬಲರಾಮನ ದಿನಗಳು’ ಟೀಸರ್:
‘ಮಾದೇವ’ ಸಿನಿಮಾದ ಬಳಿಕ ವಿನೋದ್ ಪ್ರಭಾಕರ್ ಅವರು ‘ಬಲರಾಮನ ದಿನಗಳು’ ಚಿತ್ರದಲ್ಲಿ ನಟಿಸಿದ್ದಾರೆ. ‘ಮಾದೇವ’ ಚಿತ್ರಕ್ಕಿಂತಲೂ ದೊಡ್ಡ ಯಶಸ್ಸು ಈ ಸಿನಿಮಾಗೆ ಸಿಗಲಿದೆ ಎಂಬ ಭರವಸೆ ಅವರಿಗೆ ಇದೆ. ವಿನೋದ್ ಪ್ರಭಾಕರ್ ಜೊತೆ ಆಶಿಷ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ, ರಮೇಶ್ ಇಂದಿರಾ, ಶರತ್ ಲೋಹಿತಾಶ್ವ, ವಿನಯ್ ಗೌಡ, ರಜತ್, ಡ್ರ್ಯಾಗನ್ ಮಂಜು, ಪ್ರತಾಪ್ ನಾರಾಯಣ್, ಅಶ್ವಿನ್ ಹಾಸನ್ ಮಂತಾದ ಕಲಾವಿದರು ನಟಿಸಿದ್ದಾರೆ. ಪ್ರಿಯಾ ಆನಂದ್ ಅವರು ಈ ಚಿತ್ರಕ್ಕೆ ನಾಯಕಿ.
‘ಆ ದಿನಗಳು’ ಖ್ಯಾತಿಯ ಕೆ.ಎಂ. ಚೈತನ್ಯ ಅವರು ‘ಬಲರಾಮನ ದಿನಗಳು’ ಚಿತ್ರಕ್ಕೆ ನಿರ್ದೇಶನ ಮಾಡಿರುವುದರಿಂದ ಟೀಸರ್ನಲ್ಲಿ ಆ ಫ್ಲೇವರ್ ಕಾಣಿಸಿದೆ. ತಮ್ಮೊಂದಿಗೆ ಕೈ ಜೋಡಿಸಿದ ಸಹಾಯಕ ನಿರ್ದೇಶಕರ ತಂಡವನ್ನು ಅವರು ವೇದಿಕೆಗೆ ಕರೆದು ಪರಿಚಯ ಮಾಡಿಸಿದರು. ಹಾಡುಗಳನ್ನು ಬರೆದ ಕವಿರಾಜ್, ನಾಗಾರ್ಜುನ ಶರ್ಮ, ಪ್ರಮೋದ್ ಮರವಂತೆ ಕೂಡ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ವಿನೋದ್ ಪ್ರಭಾಕರ್ ನಟನೆಯ ‘ಬಲರಾಮನ ದಿನಗಳು’ಗೆ ಗೃಹ ಸಚಿವರ ಶುಭಾಶಯ
‘18 ವರ್ಷಗಳ ಹಿಂದೆ ‘ಆ ದಿನಗಳು’ ಸಿನಿಮಾ ಮಾಡಿದ್ದೆ. ಆ ಚಿತ್ರದ ರೀತಿಯೇ ಈ ಸಿನಿಮಾ ಮೂಡಿಬರಬೇಕು ಎಂಬ ಆಶಯ ನಿರ್ಮಾಪಕರಿಗೆ ಇತ್ತು. ಆಶಿಷ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ ಈ ಸಿನಿಮಾದಲ್ಲಿ ಇರಲೇಬೇಕು ಅಂತ ಒತ್ತಾಯಿಸಿದ್ದೇ ನಿರ್ಮಾಪಕರು. ಅವರಿಂದಾಗಿ ಈ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ’ ಎಂದು ಕೆ.ಎಂ. ಚೈತನ್ಯ ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
