ಯಾದಗಿರಿ, ಜುಲೈ 27: ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ಆಲಮಟ್ಟಿ ಜಲಾಶಯ ಭರ್ತಿಯಾಗುತ್ತಿದೆ. ಬಸವಸಾಗರ ಜಲಾಶಯವೂ ತುಂಬಿದ್ದು, ಡ್ಯಾಂನಿಂದ ಕೃಷ್ಣಾ ನದಿಗೆ 30 ಸಾವಿರ ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ, ರಾಯಚೂರು ತಾಲ್ಲೂಕಿನ ಗುರ್ಜಾಪುರದಲ್ಲಿರುವ ಬ್ರಿಡ್ಜ್-ಕಂ-ಬ್ಯಾರೇಜ್‌ನ 196 ಗೇಟ್‌ಗಳನ್ನು ತೆರೆಯುವ ಕಾರ್ಯ ಭರದಿಂದ ಸಾಗುತ್ತಿದೆ. ಆರ್‌ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕಕ್ಕೆ ಸೇರಿದ ಈ ಬ್ಯಾರೇಜ್‌ನ ಗೇಟ್‌ಗಳನ್ನು ತೆರೆಯುವುದರಿಂದ ಹಿನ್ನೀರಿನ ಸಂಗ್ರಹವನ್ನು ತಪ್ಪಿಸಿ, ನೀರು ಸುಗಮವಾಗಿ ಹರಿಯಲು ಸಹಾಯಕವಾಗುತ್ತದೆ. ಹಿನ್ನೀರಿನಿಂದಾಗಿ ಗುರ್ಜಾಪುರ, ಮರಚೇಣಿಗೆ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಗೆ ತೊಂದರೆಯಾಗುವುದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸಿಬ್ಬಂದಿ ಈಗಾಗಲೇ ನೂರಕ್ಕೂ ಹೆಚ್ಚು ಗೇಟ್‌ಗಳನ್ನು ತೆರೆದಿದ್ದಾರೆ.
ಭೀಕರ ಬರಗಾಲದಿಂದ ತತ್ತರಿಸಿದ್ದ ರೈತರಿಗೆ, ಈ ನೀರು ಬಿಡುಗಡೆಯು ಕೊಂಚ ನಿರಾಳತೆಯನ್ನು ತಂದಿದೆ. ಕೃಷಿ ಚಟುವಟಿಕೆಗಳು ಮತ್ತೆ ಪ್ರಾರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ದೇವರಸೂಗೂರು, ಗಂಜಿಹಳ್ಳಿ, ಡಿ. ರಾಮಪುರ ಮುಂತಾದ ಕೆಳಭಾಗದ ಹಳ್ಳಿಗಳಿಗೆ ನೀರು ತಲುಪುವ ಭರವಸೆ ಮೂಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
