
ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ನಿರ್ದೇಶಕ ಆದಿತ್ಯ ಧರ್ ಕಾಂಬಿನೇಷನ್ನ ಸ್ಪೈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಧುರಂಧರ್ 2’ (Dhurandhar 2) ಬಾಕ್ಸ್ ಆಫೀಸ್ನಲ್ಲಿ ಸುನಾಮಿ ಎಬ್ಬಿಸಿದೆ. ಬಿಡುಗಡೆಯಾಗಿ ಮೂರನೇ ವಾರಕ್ಕೆ ಕಾಲಿಟ್ಟಿದ್ದರೂ ಚಿತ್ರದ ಕಲೆಕ್ಷನ್ (Box Office Collection) ಚೆನ್ನಾಗಿಯೇ ಆಗುತ್ತಿದೆ. ಸದ್ಯ ಈ ಚಿತ್ರವು ಭಾರತ ಬಾಕ್ಸ್ ಆಫೀಸ್ನಲ್ಲಿ ಸಾವಿರ ಕೋಟಿ ರೂಪಾಯಿ ಗಳಿಸುವತ್ತ ವೇಗವಾಗಿ ಮುನ್ನುಗ್ಗುತ್ತಿದೆ. ಈಗಾಗಲೇ 985 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು Sacnilk ವರದಿ ಮಾಡಿದೆ. ರಣವೀರ್ ಸಿಂಗ್ (Ranveer Singh) ಅವರು ಈ ಸಿನಿಮಾದಿಂದ ದೊಡ್ಡ ಯಶಸ್ಸು ಕಂಡಿದ್ದಾರೆ.
ಲೇಟೆಸ್ಟ್ ಮಾಹಿತಿ ಪ್ರಕಾರ, 17ನೇ ದಿನವಾದ ಶನಿವಾರ (ಏಪ್ರಿಲ್ 4) ಈ ಸಿನಿಮಾ 25.65 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಾರದ ದಿನಗಳಲ್ಲಿ ಸಾಧಾರಣವಾಗಿದ್ದ ಕಲೆಕ್ಷನ್, ಮೂರನೇ ವಾರಾಂತ್ಯದಲ್ಲಿ ಮತ್ತೆ ಪುಟಿದೆದ್ದಿದೆ. ಮೊದಲ ವಾರದ ಅಂತ್ಯಕ್ಕೆ 674.17 ಕೋಟಿ ರೂಪಾಯಿ ಆಗಿತ್ತು. ಎರಡನೇ ವಾರ 263.65 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು.
ಈಗಾಗಲೇ ಭಾರತದ ಹಲವು ಬ್ಲಾಕ್ಬಸ್ಟರ್ ಸಿನಿಮಾಗಳ ದಾಖಲೆಯನ್ನು ‘ಧುರಂಧರ್ 2’ ಹಿಂದಿಕ್ಕಿದೆ. ಯಶ್ ಅಭಿನಯದ ‘ಕೆಜಿಎಫ್: ಚಾಪ್ಟರ್ 2’ (859.70 ಕೋಟಿ), ರಾಜಮೌಳಿ ನಿರ್ದೇಶನ ‘ಆರ್ಆರ್ಆರ್’ (782.20 ಕೋಟಿ) ಮತ್ತು ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ (646 ಕೋಟಿ) ಸಿನಿಮಾಗಳ ಒಟ್ಟು ಗಳಿಕೆಯನ್ನು ‘ಧುರಂಧರ್ 2’ ಸಿನಿಮಾ ಮೀರಿಸಿದೆ.
ಸದ್ಯ ‘ಧುರಂಧರ್ 2’ ಸಿನಿಮಾದ ಮುಂದೆ ಕೆಲವು ದೈತ್ಯ ಸಿನಿಮಾಗಳ ಕಲೆಕ್ಷನ್ ದಾಖಲೆ ಹಾಗೆಯೇ ಇದೆ. ಈ ಮೊದಲು ‘ಬಾಹುಬಲಿ 2’ ಸಿನಿಮಾ 1,030 ಕೋಟಿ ರೂಪಾಯಿ ಗಳಿಸಿತ್ತು. ‘ಪುಷ್ಪ 2’ ಸಿನಿಮಾ 1,234.10 ಕೋಟಿ ರೂಪಾಯಿ ಚಾಚಿಕೊಂಡಿತ್ತು. ಆ ಸಿನಿಮಾಗಳ ದಾಖಲೆಯನ್ನು ‘ಧುರಂಧರ್ 2’ ಸಿನಿಮಾ ಅಳಿಸಿ ಹಾಕುತ್ತಾ ಇಲ್ಲವಾ ಎಂಬುದನ್ನು ಕಾದುನೋಡಬೇಕು.
ಇದನ್ನೂ ಓದಿ: ‘ಧುರಂಧರ್ 2’ ಬಗ್ಗೆ ಶಾರುಖ್ ಖಾನ್ ಮೌನ: ಆದರೂ ರಣವೀರ್ ಸಿಂಗ್ ಜೊತೆ ಪಾರ್ಟಿ
‘ಧುರಂಧರ್ 2’ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಹಮ್ಜಾ ಎಂಬ ಭಾರತೀಯ ಗೂಢಚಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಪಾಕಿಸ್ತಾನದ ಲಿಯಾರಿ ಗ್ಯಾಂಗ್ಗಳ ಒಳಗೆ ನುಗ್ಗಿ, ಅಲ್ಲಿನ ಭೂಗತ ಲೋಕ ಮತ್ತು ಭಾರತದ ಮೇಲೆ ಪ್ರಭಾವ ಬೀರುವ ಭಯೋತ್ಪಾದನಾ ಜಾಲವನ್ನು ಧ್ವಂಸ ಮಾಡುವ ಸಾಹಸಗಾಥೆ ಈ ಚಿತ್ರದಲ್ಲಿದೆ. ಸಿನಿಮಾದ ಮೊದಲ ಭಾಗವು ವಿಶ್ವಾದ್ಯಂತ 1,300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.