ಬಾಕ್ಸ್ ಆಫೀಸ್‌ನಲ್ಲಿ ‘ಮಾ ಇಂಟಿ ಬಂಗಾರಂ’ ಹಾಗೂ ‘ಕಾಕ್‌ಟೇಲ್ 2’ ಚಿತ್ರಗಳ ಗಳಿಕೆ ಎಷ್ಟು?

ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವ ‘ಮಾ ಇಂಟಿ ಬಂಗಾರಂ’ ಹಾಗೂ ‘ಕಾಕ್‌ಟೇಲ್ 2’ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿವೆ. ಮೂರನೇ ದಿನವಾದ ಭಾನುವಾರ ದಾಖಲೆಯ ಗಳಿಕೆ ಕಂಡಿವೆ. ಎರಡೂ ವಿಭಿನ್ನ ಶೈಲಿಯ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಸಿನಿಮಾ ಪ್ರೇಮಿಗಳಿಗೆ ವೀಕೆಂಡ್ ಧಮಾಕಾ ನೀಡಿವೆ.

ಮೊದಲ ದಿನದಿಂದಲೇ ಪಾಸಿಟಿವ್ ಟಾಕ್ ಪಡೆದುಕೊಂಡಿದ್ದ ‘ಮಾ ಇಂಟಿ ಬಂಗಾರಂ’ ಚಿತ್ರಕ್ಕೆ ಭಾನುವಾರ ಪ್ರೇಕ್ಷಕರು ಜೈ ಎಂದಿದ್ದಾರೆ. ಬಿಡುಗಡೆಯಾದ ಮೊದಲ ದಿನ 5.35 ಕೋಟಿ ರೂಪಾಯಿ ಹಾಗೂ ಎರಡನೇ ದಿನ 7.65 ಕೋಟಿ ರೂಪಾಯಿ ಗಳಿಸಿದ್ದ ಈ ಸಿನಿಮಾ, ಮೂರನೇ ದಿನವಾದ ಭಾನುವಾರ ದಾಖಲೆಯ 2,965 ಶೋಗಳಿಂದ ಬರೋಬ್ಬರಿ 10.10 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನೆಟ್ ಕಲೆಕ್ಷನ್ 23.10 ಕೋಟಿ ರೂಪಾಯಿಗೆ ಹಾಗೂ ಒಟ್ಟು ಗ್ರಾಸ್ ಕಲೆಕ್ಷನ್ 26.69 ಕೋಟಿ ರೂಪಾಯಿಗೆ ತಲುಪಿದೆ.

ಇನ್ನು ವಿದೇಶದಲ್ಲೂ ಜಾದೂ ಮಾಡಿರುವ ಈ ಚಿತ್ರ ಭಾನುವಾರ 4 ಕೋಟಿ ರೂಪಾಯಿ ಬಾಚಿಕೊಂಡಿದ್ದು, ಓವರ್‌ಸೀಸ್‌ನಲ್ಲಿ ಒಟ್ಟು 15.10 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ವಿಶ್ವದಾದ್ಯಂತ ಕೇವಲ ಮೂರೇ ದಿನಕ್ಕೆ ಭರ್ಜರಿ 41.79 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ 40 ಕೋಟಿಯ ಕ್ಲಬ್ ದಾಟಿದೆ. ವಿಶೇಷವೆಂದರೆ ಭಾನುವಾರ ಚಿತ್ರಮಂದಿರಗಳಲ್ಲಿ ಶೇಕಡಾ 53.4 ರಷ್ಟು ಆಕ್ಯುಪೆನ್ಸಿ ಕಾಣುವ ಮೂಲಕ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಂಡಿದೆ.

ಇನ್ನೊಂದೆಡೆ, ಭಾರಿ ನಿರೀಕ್ಷೆ ಮೂಡಿಸಿದ್ದ ‘ಕಾಕ್‌ಟೇಲ್ 2’ ಸಿನಿಮಾ ಕೂಡ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದ್ದು, ಈಗಾಗಲೇ 75 ಕೋಟಿ ಕ್ಲಬ್ ಸೇರಿದೆ. ಮೊದಲ ದಿನ 13.50 ಕೋಟಿ ರೂಪಾಯಿ ಹಾಗೂ ಶನಿವಾರ 16.25 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದ್ದ ಈ ಸಿನಿಮಾ, ಭಾನುವಾರ ಒಂದೇ ದಿನ ಬರೋಬ್ಬರಿ 10,462 ಶೋಗಳಿಂದ 17.75 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡುವ ಮೂಲಕ ಅಬ್ಬರಿಸಿದೆ.

ಇದನ್ನೂ ಓದಿ: ನಟಿ ಸಮಂತಾ ಕಟೌಟ್​​ಗೆ ಅದ್ಧೂರಿ ಹಾರ, ಹಾಲಿನಭಿಷೇಕ: ವಿಡಿಯೋ

ಇದರೊಂದಿಗೆ ಭಾರತದಲ್ಲಿ ಒಟ್ಟು 47.50 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಹಾಗೂ 57 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ. ವಿದೇಶಿ ಮಾರುಕಟ್ಟೆಯಲ್ಲೂ ಭಾನುವಾರ 4 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಚಿತ್ರ, ಓವರ್‌ಸೀಸ್‌ನಲ್ಲಿ ಒಟ್ಟು 19.25 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಕಂಪ್ಲೀಟ್ ಮಾಡಿದೆ. ಅಲ್ಲಿಗೆ ಜಗತ್ತಿನಾದ್ಯಂತ ‘ಕಾಕ್‌ಟೇಲ್ 2’ ಚಿತ್ರದ ಒಟ್ಟು ಗಳಿಕೆ ಬರೋಬ್ಬರಿ 76.25 ಕೋಟಿ ರೂಪಾಯಿಗೆ ಬಂದು ನಿಂತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *