ಬಾಗಲಕೋಟೆಯಲ್ಲಿ ನದಿಗಳು ಖಾಲಿ ಖಾಲಿ, ಕುಸಿಯುತ್ತಿರುವ ಅಂತರ್ಜಲ: 114 ಗ್ರಾಮಗಳಲ್ಲಿ ಜಲಕ್ಷಾಮದ ಭೀತಿ – Kannada News | Bagalkote Water Crisis: Krishna and Malaprabha Rivers Reach Dead Storage; 114 Villages Face Water Scarcity Amid Heat wave

ಬಾಗಲಕೋಟೆ ನದಿಗಳಲ್ಲಿ ನೀರು ಕಡಿಮೆಯಾಗಿರುವುದುImage Credit source: tv9

ಬಾಗಲಕೋಟೆ, ಏಪ್ರಿಲ್ 20: ಬಾಗಲಕೋಟೆಯಲ್ಲಿ (Bagalkot) ಸೂರ್ಯನ ತಾಪ (Heat wave) ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬರೋಬ್ಬರಿ 39 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇದರ ಬೆನ್ನಲ್ಲೇ ಜಿಲ್ಲೆಯ ಪ್ರಮುಖ ಜಲಮೂಲಗಳು ಬತ್ತುತ್ತಿದ್ದು, ಜನರಲ್ಲಿ ಜಲಕ್ಷಾಮದ ಭೀತಿ ಆವರಿಸಿದೆ. ಜಿಲ್ಲೆಯ ಜೀವನದಿಗಳಾದ ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳಲ್ಲಿ ನೀರಿನ ಮಟ್ಟ ತಳಮಟ್ಟಕ್ಕೆ ಕುಸಿದಿದೆ.

ಬತ್ತಿದ ಜಲಮೂಲಗಳು

ಆಲಮಟ್ಟಿ ಹಿನ್ನೀರು ಹಾಗೂ ಕೃಷ್ಣಾ ನದಿ ಪಾತ್ರದಲ್ಲಿ ನೀರು ಸಂಪೂರ್ಣವಾಗಿ ತಳ ಸೇರಿದೆ. ನದಿಯ ಒಡಲು ಖಾಲಿಯಾಗುತ್ತಿದ್ದು, ಪಕ್ಷಿಗಳು ಆಹಾರಕ್ಕಾಗಿ ಮತ್ತು ಕುರಿಗಳು ದಾಹ ತಣಿಸಿಕೊಳ್ಳಲು ಕೆಸರು ಮಿಶ್ರಿತ ಅಲ್ಪ ನೀರಿನಲ್ಲೇ ಪರದಾಡುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಆಲಮಟ್ಟಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ.

ಜಿಲ್ಲಾಡಳಿತದ ಮುನ್ನೆಚ್ಚರಿಕೆ

ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗಾಗಿ ಜಿಲ್ಲಾಧಿಕಾರಿ ಸಂಗಪ್ಪ ಅವರು ಈಗಾಗಲೇ ಎರಡು ಬಾರಿ ತುರ್ತು ಸಭೆ ನಡೆಸಿದ್ದಾರೆ. ಜಿಲ್ಲೆಯಾದ್ಯಂತ ಒಟ್ಟು 114 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಬಹುದು ಎಂದು ಗುರುತಿಸಲಾಗಿದೆ. ಏಪ್ರಿಲ್ ತಿಂಗಳಲ್ಲಿ 52 ಮತ್ತು ಮೇ ತಿಂಗಳಲ್ಲಿ 62 ಗ್ರಾಮಗಳಲ್ಲಿ ತೀವ್ರ ಅಭಾವ ಉಂಟಾಗುವ ಸಾಧ್ಯತೆ ಇದೆ.

ಈಗಾಗಲೇ ಇಳಕಲ್ ತಾಲೂಕಿನ ಚಿಕ್ಕಕೊಡಗಲಿ ತಾಂಡಾ ಮತ್ತು ಗುಳೇದಗುಡ್ಡದ ಒಂದು ಗ್ರಾಮದಲ್ಲಿ ಖಾಸಗಿ ಬೋರ್‌ವೆಲ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನದಿಗಳಿಗೆ ನೀರು ಬಿಡಲಾಗಿದ್ದು, ಏಪ್ರಿಲ್ 2 ರಂದು ಘಟಪ್ರಭಾ ನದಿಗೆ 1.10 ಟಿಎಂಸಿ ಹಾಗೂ ಏಪ್ರಿಲ್ 10 ರಂದು ಮಲಪ್ರಭಾ ನದಿಗೆ 1 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ಬಿಸಿಲ ಝಳಕ್ಕೆ ಬೆಂದ ಕರ್ನಾಟಕ: ಆಸ್ಪತ್ರೆಗೆ ಫ್ಯಾನ್ ತಂದ ಪೋಷಕರು, ಪೊಲೀಸ್ ಶ್ವಾನಗಳಿಗೂ ಕೂಲರ್-ಎಳನೀರು ಭಾಗ್ಯ!

‘ಮೇ ಅಂತ್ಯದವರೆಗೂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗದಂತೆ ಕ್ರಮ ವಹಿಸಲಾಗಿದೆ. ಹಳ್ಳಿಗಳಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಿ ಇರಿಸಿಕೊಳ್ಳಲಾಗಿದೆ. ಸಾರ್ವಜನಿಕರು ನೀರನ್ನು ಪೋಲು ಮಾಡದೆ ಮಿತವ್ಯಯವಾಗಿ ಬಳಸಬೇಕು’ ಎಂದು ಜಿಲ್ಲಾಧಿಕಾರಿ ಸಂಗಪ್ಪ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಮೂರು ನದಿಗಳು ಹರಿಯುತ್ತಿದ್ದರೂ ಕೆರೆ ತುಂಬಿಸುವ ಕಾರ್ಯ ಸಮರ್ಪಕವಾಗಿ ನಡೆಯದ ಕಾರಣ ಅಂತರ್ಜಲ ಕುಸಿಯುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಮಹಾರಾಷ್ಟ್ರದಿಂದ ಹೆಚ್ಚಿನ ನೀರು ಬಿಡುಗಡೆ ಮಾಡಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *