ಕಲ್ಲು ತೂರಾಟ ಪ್ರಕರಣImage Credit source: tv9 kannada
ಬಾಗಲಕೋಟೆ, ಫೆಬ್ರವರಿ 23: ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದ (Stone pelting) ಕಾವು ಇನ್ನೂ ಆರಿಲ್ಲ. ಕಲ್ಲೆಸೆದ ಎರಡು ಕೋಮಿನ ಕೆಲ ಕಿಡಿಗೇಡಿಗಳು ಅಂದರ್ ಆಗಿದ್ದಾರೆ. ಶಾಂತಿ ಸಭೆಗಳೂ ವಿಫಲವಾಗಿದ್ದು, ದ್ವೇಷದ ಕಿಚ್ಚು ಬುಸುಗುಡುತ್ತಿದೆ. ಇದೇ ತಿಂಗಳ 26ರಂದು ಬೃಹತ್ ಹೋರಾಟಕ್ಕೆ ಹಿಂದೂ ಸಂಘಟನೆಗಳು ಮುಂದಾಗಿವೆ. ಹೀಗಾಗಿ ಫೆ. 28ರವರೆಗೂ ನಗರದಲ್ಲಿ ನಿಷೇಧಾಜ್ಞೆ ಮುಂದುವರಿಯಲಿದೆ. ಜೊತೆಗೆ ಯಾವುದೇ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಪ್ರತಿಭಟನೆಗೆ ಮುಂದಾದರೆ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂದು ಎಸ್ಪಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರ ಆರ್.ಬಿ.ತಿಮ್ಮಾಪುರ, ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಹಿಂದೂ, ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಸಭೆ ಮಾಡಲಾಗಿದೆ. ಈ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸಭೆಯಲ್ಲಿ ಮನವಿ ಮಾಡಲಾಗಿದೆ. ಫೆಬ್ರವರಿ 28ರಂದು ಪಿಯುಸಿ ಪರೀಕ್ಷೆ, ಹೋಳಿ ಹಬ್ಬವಿದೆ. ಎಲ್ಲರೂ ಅಣ್ಣ ತಮ್ಮಂದಿರಂತೆ ಸಹಬಾಳ್ವೆಯಿಂದ ಇರಲು ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ ಮನವಿ ಮಾಡಿದ್ದಾರೆ.
ಎಸ್ಪಿ ಸಿದ್ದಾರ್ಥ ಗೋಯಲ್ ಹೇಳಿದ್ದಿಷ್ಟು
ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್. ಫೆ. 28ರವರೆಗೂ ಬಾಗಲಕೋಟೆ ನಗರದಲ್ಲಿ ನಿಷೇಧಾಜ್ಞೆ ಮುಂದುವರಿಯಲಿದೆ. ಯಾವುದೇ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಪ್ರತಿಭಟನೆಗೆ ಮುಂದಾದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮುಸ್ಲಿಮರ ನಮಾಜ್ಗೆ ಅನುಮತಿ, ಹಿಂದೂಗಳ ಪ್ರಾರ್ಥನೆಗೆ ನಿರ್ಬಂಧ: ಪ್ರಲ್ಹಾದ್ ಜೋಶಿ ವಾಗ್ದಾಳಿ
ಪ್ರತಿಭಟನೆ ನಡೆಸಿದರೆ ರಸ್ತೆ ಬದಿ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ. ಫೆ.28ರಿಂದ ಪರೀಕ್ಷೆಗಳು ಆರಂಭವಾಗುತ್ತಿದ್ದು ಓದಿಕೊಳ್ಳಲು ಅವಕಾಶ ನೀಡಿ. ಮಕ್ಕಳು ಓದಿಕೊಳ್ಳಬೇಕು, ಚೆನ್ನಾಗಿ ಪರೀಕ್ಷೆ ಬರೆಯಲು ಎಲ್ಲರೂ ಸಹಕರಿಸಿ ಎಂದು ಎಸ್ಪಿ ಸಿದ್ದಾರ್ಥ ಗೋಯಲ್ ಮನವಿ ಮಾಡಿದ್ದಾರೆ.
ಫೆ.26ರಂದು ಬೃಹತ್ ಹೋರಾಟಕ್ಕೆ ಹಿಂದೂ ಸಮುದಾಯ ಕರೆ
ನಿನ್ನೆ ಸಂಜೆ ಹಿಂದೂ ಮುಖಂಡರ ಸಭೆ ಮಾಡಲಾಗಿದೆ. ಬಾಗಲಕೋಟೆಯಲ್ಲಿ ಫೆ.26ರಂದು ಬೃಹತ್ ಹೋರಾಟಕ್ಕೆ ಮುಂದಾಗಿದ್ದಾರೆ. ಇಂದು ಹೋರಾಟದ ರೂಪುರೇಷೆ ಬಗ್ಗೆ ನಿರ್ಧರಿಸಲಿದ್ದಾರೆ. ಮಸೀದಿ ಅಧ್ಯಕ್ಷ ಸೇರಿದಂತೆ ಸದಸ್ಯರ ವಿರುದ್ಧ ಕೇಸ್ ಹಾಕಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕಲ್ಲು ತೂರಾಟ ಕೇಸ್: ಇಬ್ಬರು ಹಿಂದೂ ಕಾರ್ಯಕರ್ತರ ಬಂಧನ; ಮುತಾಲಿಕ್, ಕೆರೆಹಳ್ಳಿಗೆ ನಿರ್ಬಂಧ
ಸದ್ಯ ಬೂದಿ ಮುಚ್ಚಿದ ಕೆಂಡದಂತಿರೋ ಬಾಗಲಕೋಟೆಯಲ್ಲಿ ಪಂಕಾ ಮಸೀದಿ ಮತ್ತು ಕೊತ್ತಲೇಶ್ವರ ಮಂದಿರದ ಬಳಿ ಪೊಲೀಸ್ ಸರ್ಪ ಗಾವಲಿದೆ. ಈಗಾಗಲೇ ನಡೆದ ಎರಡು ಶಾಂತಿ ಸಭೆಗಳು ವಿಫಲವಾಗಿವೆ. ಮುಸ್ಲಿಂ ಕಡೆಯ 8 ಜನರ ಬಂಧನ ವಾಗಿದೆ. ಇನ್ನು ಮಾಂಸದಂಗಡಿಗಳ ಮೇಲೆ ಕಲ್ಲೆಸೆದ ಇಬ್ಬರು ಹಿಂದು ಕಾರ್ತಕರ್ತರನ್ನೂ ಬಂಧಿಸಲಾಗಿದೆ. ಇಂದು ಆಸ್ಪತ್ರೆಗೆ ಭೇಟಿ ಕೊಟ್ಟ ಮಾಜಿ ಸಚಿವ ಬಿ ಶ್ರೀರಾಮುಲು, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
