ಗೆದ್ದು ಬೀಗಿದ ಕಾಂಗ್ರೆಸ್ನ ಉಮೇಶ್ ಮೇಟಿ
ಬಾಗಲಕೋಟೆ, ಮೇ 04: ಹೆಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಬಾಗಲಕೋಟೆ (Bagalakot) ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಗೆಲುವಿನ ನಗೆ ಬೀರಿದ್ದಾರೆ. ಆ ಮೂಲಕ ಕ್ಷೇತ್ರವನ್ನು ಮರಳಿ ಕಾಂಗ್ರೆಸ್ ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಬಿಜೆಪಿ ಅಭ್ಯರ್ಥಿಯಾಗಿದ್ದ ವೀರಣ್ಣ ಚರಂತಿಮಠ ಪೈಪೋಟಿ ನೀಡಿದ್ದರಾದರೂ ಅಂತಿಮವಾಗಿ ಸೋಲುಂಡಿದ್ದಾರೆ. ಹೆಚ್.ವೈ. ಮೇಟಿ ನಿಧನದ ಹಿನ್ನೆಲೆ ಅವರ ಕುಟುಂಬಕ್ಕೇ ಟಿಕೆಟ್ ನೀಡಲು ನಿರ್ಧರಿಸಿದ್ದ ಕಾಂಗ್ರೆಸ್, ಮೇಟಿ ಪುತ್ರ ಉಮೇಶ್ರನ್ನು ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಉಮೇಶ್ ಮೇಟಿ ಅಂತಿಮವಾಗಿ ಗೆದ್ದು ಬೀಗಿದ್ದಾರೆ.
‘ತಂದೆ ಆತ್ಮಕ್ಕೆ ಶಾಂತಿ ಸಿಕ್ಕಿದೆ’
ಬಾಗಲಕೋಟೆ ಉಪಚುನಾವಣೆಯಲ್ಲಿ ಉಮೇಶ್ ಮೇಟಿ ಜಯಭೇರಿ ಸಂಬಂಧ ಅವರ ಸಹೋದರ ಮಲ್ಲಿಕಾರ್ಜುನ ಮೇಟಿ ಟಿವಿ9 ಜೊತೆ ಸಂತಸ ಹಂಚಿಕೊಂಡಿದ್ದಾರೆ. ಇದೊಂದು ಭಾವುಕ ಕ್ಷಣವಾಗಿದ್ದು, ಈ ಗೆಲುವಿನಿಂದ ನಮ್ಮ ತಂದೆ ಆತ್ಮಕ್ಕೆ ಶಾಂತಿ ಸಿಕ್ಕ ಹಾಗಾಗಿದೆ. ನಮ್ಮ ತಂದೆ ಕೈ ಹಿಡಿದಿದ್ದ ಜನರು ಈಗ ನಮ್ಮ ಸಹೋದರನ ಕೈಯನ್ನೂ ಹಿಡಿದಿದ್ದಾರೆ. ಸಿಎಂ, ಸಚಿವರು ಮತ್ತು ಮತದಾರರಿಗೆ ಧನ್ಯವಾದ ಹೇಳೋದಾಗಿ ಅವರು ತಿಳಿಸಿದ್ದಾರೆ.
(ಮಾಹಿತಿ ಅಪ್ಡೇಟ್ ಆಗುತ್ತಿದೆ)
Published On – 12:17 pm, Mon, 4 May 26
