ಬಾಗಲಕೋಟೆ, ಮಾರ್ಚ್ 5: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಲೋಕಾಯುಕ್ತ ಅಧಿಕಾರಿಗಳು ಬಾಗಲಕೋಟೆಯಲ್ಲಿ ನಡೆಸಿದ ದಾಳಿಯ ವೇಳೆ ಅಚ್ಚರಿಯ ಘಟನೆ ನಡೆದಿದೆ. ಮನೆಯೊಂದರಲ್ಲಿ ಶೋಧ ಕಾರ್ಯ ನಡೆಯುತ್ತಿದ್ದಾಗ ಕೆಳಮಹಡಿಗೆ ಕೆರೆ ಹಾವು ನುಗ್ಗಿ ಕೆಲಕಾಲ ಗೊಂದಲ ಉಂಟುಮಾಡಿತು. ಬಳಿಕ ಮನೆಯವರು ಹಾವನ್ನು ಹೊಡೆದು ದೂರ ಸಾಗಿಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಮುಖ್ಯ ಎಂಜಿನಿಯರ್ ವಸಂತ್ ವಾಲಪ್ಪ ನಾಯಕ್ ಅವರ ವಿರುದ್ಧ ದಾಖಲಾಗಿದ್ದ ದೂರಿನ ಆಧಾರದಲ್ಲಿ ಅವರ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆಸಿದರು. ಬಾಗಲಕೋಟೆಯ ಪೋಸ್ಟಲ್ ಕಾಲೋನಿಯಲ್ಲಿರುವ ವಸಂತ್ ಅವರ ಸಹೋದರ ಭೀಮಸಿಂಗ್ ನಾಯಕ್ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡರು.
ಭೀಮಸಿಂಗ್ ನಾಯಕ್ ಬಾಗಲಕೋಟೆ ಡಿಎಆರ್‌ನಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ, ಬಾಗಲಕೋಟೆ ತಾಲೂಕಿನ ಬಿಲ್ ಕೆರೂರು ಗ್ರಾಮದ ಮನೆಯಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ವಸಂತ್ ಅವರ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಆಧಾರದಲ್ಲಿ ಈ ದಾಳಿ ನಡೆದಿದೆ. ಆಸ್ತಿ, ದಾಖಲೆಗಳು ಮತ್ತು ಬ್ಯಾಂಕ್ ವ್ಯವಹಾರಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಲಾಗುತ್ತಿದೆ.
