ನಟಿ ಅಮೂಲ್ಯ ಗೌಡ (Amulya Gowda) ಸಾಕಷ್ಟು ವರ್ಷಗಳಿಂದ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಹೊಸ ಹೊಸ ಆಫರ್ಗಳು ಬರುತ್ತಿವೆ. ಸದ್ಯ ಅವರು ಉದಯ ಟಿವಿಯಲ್ಲಿ ‘ಮಹಾಲಕ್ಷ್ಮಿ ಮದುವೆ’ ಹೆಸರಿನ ಧಾರಾವಾಹಿ ಮಾಡುತ್ತಿದ್ದಾರೆ. ಈಗ ಅವರು ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ನೀಡಿದ್ದಾರೆ. ಹಲವು ವರ್ಷಗಳಿಂದ ಹರಿದಾಡುತ್ತಿದ್ದ ವದಂತಿಯನ್ನು ಅಮೂಲ್ಯ ನಿಜ ಎಂದು ಒಪ್ಪಿಕೊಂಡಿದ್ದಾರೆ.
2018ರಿಂದ 2022ರವರೆಗೆ ಜೀ ಕನ್ನಡದಲ್ಲಿ ಪ್ರಸಾರ ಕಂಡ ‘ಕಮಲಿ’ ಧಾರಾವಾಹಿಯಲ್ಲಿ ಅಮೂಲ್ಯ ನಟಿಸಿದ್ದರು. ಇವರಿಗೆ ಜೊತೆಯಾಗಿ ನಿರಂಜನ್ ಬಣ್ಣ ಹಚ್ಚಿದ್ದರು. ಆ ಸಮಯದಲ್ಲೇ ಇವರು ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಇದನ್ನು ಅವರು ಎಂದಿಗೂ ನೇರವಾಗಿ ಒಪ್ಪಿಕೊಂಡಿರಲಿಲ್ಲ. ಈಗ ಅದಕ್ಕೆ ಸಮಯ ಬಂದಿದೆ. ಹೊಸ ಯೂಟ್ಯೂಬ್ ಚಾನೆಲ್ ಮಾಡಿರೋ ಅಮೂಲ್ಯ ಗೌಡ ಅವರು, ಪ್ರೀತಿ ವಿಷಯವನ್ನು ಅಧಿಕೃತ ಮಾಡಿದ್ದಾರೆ.
ಇದನ್ನೂ ಓದಿ: ‘ಸನ್ ಉದಯ’ ಟಿವಿಯಲ್ಲಿ ಅಮೂಲ್ಯ ಗೌಡ ಹೊಸ ಧಾರಾವಾಹಿ ‘ಮಹಾಲಕ್ಷ್ಮೀ ಮದುವೆ’
ಈ ಮೊದಲು ‘ನಿರಂಜನ್ ಅವರೇನಾ ನಿಮ್ಮ ಬಾಯ್ಫ್ರೆಂಡ್’ ಎಂದು ಕೇಳಿದಾಗ ಅಮೂಲ್ಯ ಅವರು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದರು. ‘ನಾನು ಈಗಲೇ ಏನೂ ಹೇಳೋಲ್ಲ’ ಎಂದು ಹೇಳಿ ಜಾರಿಕೊಳ್ಳುತ್ತಿದ್ದರು. ಅವರು ಪ್ರೀತಿ ವಿಷಯವನ್ನು ಒಪ್ಪಿಕೊಂಡೂ ಇರಲಿಲ್ಲ, ನಿರಾಕರಿಸಿಯೂ ಇರಲಿಲ್ಲ. ಈಗ ಪ್ರೀತಿ ವಿಷಯವನ್ನು ಅಧಿಕೃತಮಾಡಿದ್ದಾರೆ.
ಬಾಯ್ಫ್ರೆಂಡ್ ರಿವೀಲ್ ವಿಡಿಯೋ ಹಂಚಿಕೊಂಡಿರೋ ಅಮೂಲ್ಯ ಗೌಡ, ಅದರಲ್ಲಿ ನಿರಂಜನ್ ಅವರನ್ನೂ ಕರೆತಂದಿದ್ದಾರೆ. ಇಬ್ಬರೂ ಮೊದಲು ಭೇಟಿ ಆಗಿದ್ದು ಎಲ್ಲಿ, ಯಾವ ಗುಣ ಇಷ್ಟ ಆಯಿತು ಎಂಬಿತ್ಯಾದಿ ವಿಷಯಗಳನ್ನು ಹೇಳಿಕೊಂಡಿದ್ದಾರೆ. ಆ ಬಳಿಕ ಇಬ್ಬರೂ ಪ್ರೀತಿ ವಿಷಯ ಒಪ್ಪಿಕೊಂಡಿದ್ದಾರೆ. ಇಬ್ಬರೂ ಒಟ್ಟಾಗಿ ಯೂಟ್ಯೂಬ್ ಚಾನೆಲ್ ನಡೆಸೋದಾಗಿ ಹೇಳಿದ್ದಾರೆ. ಈ ಮೂಲಕ ಶೀಘ್ರವೇ ಇವರು ಮದುವೆ ಆಗೋ ಸೂಚನೆ ನೀಡಿದ್ದಾರೆ. ನಿರಂಜನ್ ಅವರು ಸ್ಟಾರ್ ಸುವರ್ಣದಲ್ಲಿ ‘ನಿನ್ನ ಜೊತೆ ನನ್ನ ಕಥೆ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.