ಬೆಂಗಳೂರು, ಜುಲೈ 05: ನಗರದ ನಿವಾಸಿಗಳ ಪಾಲಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ಗಳು ಯಮ ಸ್ವರೂಪಿಯಾಗಿ ಮಾರ್ಪಟ್ಟಿವೆ. ಕಳೆದ ಹಲವು ವರ್ಷಗಳಲ್ಲಿ ನಡೆದಿರುವ ಬಿಎಂಟಿಸಿ ಬಸ್ಗಳ ಅಪಘಾತ ಮತ್ತು ಸಾವು ನೋವುಗಳ ಸಂಖ್ಯೆ ಬೆಚ್ಚಿ ಬೀಳಿಸುವಂತಿದೆ. ಬಸ್ ಅಪಘಾತದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲೇ 150ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ಸಿಬ್ಬಂದಿ ಅತ್ಯಂತ ಒತ್ತಡದಲ್ಲಿ ಕೆಲಸ ಮಾಡುತ್ತಿರೋದೇ ಇಂತಹ ಘಟನೆಗಳ ಹೆಚ್ಚಳಕ್ಕೆ ಕಾರಣ ಎಂಬ ಆರೋಪಗಳೂ ಕೇಳಿಬಂದಿವೆ.
17 ವರ್ಷದಲ್ಲಿ 5864 ಆ್ಯಕ್ಸಿಡೆಂಟ್
ಕಳೆದ 17 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 5,864 ಬಾರಿ ಬಿಎಂಟಿಸಿ ಬಸ್ ಅಪಘಾತಗಳು ನಡೆದಿದ್ದು, ಇವುಗಳಲ್ಲಿ 1,142 ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಎಲೆಕ್ಟ್ರಿಕ್ ಬಸ್ಗಳ ಆ್ಯಕ್ಸಿಡೆಂಟ್ನಿಂದಾಗಿ 40ಕ್ಕೂ ಹೆಚ್ಚು ಮತ್ತು ನಾರ್ಮಲ್ ಬಸ್ಗಳಿಂದಾಗಿ 100ಕ್ಕೂ ಹೆಚ್ಚು ಜನರ ಜೀವ ಹೋಗಿದೆ. ಕಳೆದ 1 ವರ್ಷದಲ್ಲಿ ನಡೆದಿರುವ ನಾರ್ಮಲ್ ಬಿಎಂಟಿಸಿ ಬಸ್ಗಳ 104 ಅಪಘಾತಗಳಿಂದಲೇ 31 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಅಂಕಿ-ಅಂಶ ಟಿವಿ9 ಕನ್ನಡಕ್ಕೆ ದೊರೆತಿದೆ.
ಇದನ್ನೂ ಓದಿ: ಕೆ. ಆರ್ ಸರ್ಕಲ್ ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತಿದ್ದ ಎಸಿ ಬಸ್ಗೆ ಮತ್ತೊಂದು ಬಸ್ ಡಿಕ್ಕಿ!
ಅಪಘಾತ ಹೆಚ್ಚಳ ಯಾಕೆ?
ಕಡಿಮೆ ಅವಧಿಯಲ್ಲಿ ಹೆಚ್ಚಿನ ರೂಟ್ಳನ್ನು ಕ್ಲಿಯರ್ ಮಾಡಲು ಸಿಬ್ಬಂದಿಗೆ ಟಾರ್ಗೆಟ್ ನೀಡಲಾಗುತ್ತೆ. 1991-95ರ ರೂಲ್ಸ್ ಅನ್ನೇ ಇನ್ನೂ ಫಾಲೋ ಮಾಡ್ತಿದ್ದಾರೆ. ಪ್ರತಿದಿನ 250ರಿಂದ 300 ಕಿ.ಮೀ. ಬಸ್ ಓಡಿಸಲು ಹೇಳ್ತಿದ್ದಾರೆ. ಈ ಬಗ್ಗೆ ಬಿಎಂಟಿಸಿಯ ಸಿಟಿಎಂ ಬಳಿ ಸಾಕಷ್ಟು ಬಾರಿ ಮನವಿ ಮಾಡಿದ್ರು ಯಾವುದೇ ಬದಲಾವಣೆ ಆಗಿಲ್ಲ ಎಂದು ಕೆಎಸ್ಆರ್ಟಿಸಿ ನೌಕರರ ಸಂಘದ ಅಧ್ಯಕ್ಷ ಜಗದೀಶ್ ಆರೋಪಿಸಿದ್ದಾರೆ. ಬಿಎಂಟಿಸಿ ಡ್ರೈವರ್, ಕಂಡಕ್ಟರ್ಗಳು ಅತ್ಯಂತ ಒತ್ತಡದಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ನೌಕರರಿಗೆ ಆರೋಗ್ಯ ಸರಿಯಿಲ್ಲದೆ ರಜೆ ಬೇಕು ಅಂದರೂ ಡಿಪೋ ಮ್ಯಾನೇಜರ್ಗಳಿಗೆ ಒಂದು ರಜೆಗೆ 500 ರೂ. ಲಂಚ ನೀಡಬೇಕಾದ ಕೆಟ್ಟ ಪರಿಸ್ಥಿತಿ ಇದೆ. ಲೈನ್ ಚೆಕ್ಕಿಂಗ್ ಅನ್ನೋ ಹೆಸ್ರಲ್ಲಿ ಸೆಕ್ಯೂರಿಟಿ ಅಧಿಕಾರಿಗಳು ದಂಧೆ ಮಾಡಿಕೊಂಡಿದ್ದಾರೆ. ಬಿಎಂಟಿಸಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಎಂಡಿ ಯಾರೂ ಡಿಪೋಗಳಿಗೆ ಭೇಟಿ ಮಾಡ್ತಿಲ್ಲ. ಹೀಗಾಗಿ ಡಿಪೋ ಮ್ಯಾನೇಜರ್, ಡಿಸಿಗಳ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 1:01 pm, Sun, 5 July 26
