ಬಿಜೆಪಿ ಖಾತೆಗಳಲ್ಲಿ ಮಿಂಚುತ್ತಿರುವ ನಟ ರಾಮ್ ಚರಣ್

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ನಟ ರಾಮ್ ಚರಣ್ ‘ಪೆದ್ದಿ’ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ದೇಶದಾದ್ಯಂತ ಸಂಚರಿಸಿ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನು ನಾಲ್ಕು ದಿನಗಳಷ್ಟೆ ಉಳಿದಿದ್ದು, ಈ ಸಂದರ್ಭದಲ್ಲಿ ಬಿಜೆಪಿಯ ಹಲವು ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ನಟ ರಾಮ್ ಚರಣ್ ಅವರು ಮಿಂಚುತ್ತಿದ್ದಾರೆ. ಹಲವು ರಾಜ್ಯಗಳ ಅಧಿಕೃತ ಬಿಜೆಪಿ ಖಾತೆಗಳು ರಾಮ್ ಚರಣ್ ಅವರ ವಿಡಿಯೋ ಮತ್ತು ಚಿತ್ರಗಳನ್ನು ಹಂಚಿಕೊಂಡಿದ್ದು, ‘ಪೆದ್ದಿ’ ಸಿನಿಮಾಕ್ಕೆ ಪರೋಕ್ಷೆ ಬೆಂಬಲ ವ್ಯಕ್ತಪಡಿಸಿವೆ.

ರಾಷ್ಟ್ರೀಯ ಬಿಜೆಪಿ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆ, ‘ಬಿಜೆಪಿ ಇಂಡಿಯಾ’, ಬಿಜೆಪಿ ತೆಲಂಗಾಣ, ಬಿಜೆಪಿ ಆಂಧ್ರ ಪ್ರದೇಶ, ಬಿಜೆಪಿ ಬಿಹಾರ್, ಬಿಜೆಪಿ ಅಂಡಮಾನ್ ನಿಕೋಬಾರ್, ಬಿಜೆಪಿ ಅರುಣಾಚಲ್ ಪ್ರದೇಶ ಇನ್ನೂ ಕೆಲವು ರಾಜ್ಯಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ರಾಮ್ ಚರಣ್ ಅವರ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಎಲ್ಲ ಖಾತೆಗಳಲ್ಲಿಯೂ ರಾಮ್ ಚರಣ್ ಅವರು ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡಿದ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ.

ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ರಾಮ್ ಚರಣ್, ಮೋದಿ ಅವರೊಟ್ಟಿಗೆ ನಡೆಸಿದ ಸಂಭಾಷಣೆಯನ್ನು ನೆನಪು ಮಾಡಿಕೊಂಡಿದ್ದರು. ವಿಶೇಷವಾಗಿ ತಮ್ಮೊಟ್ಟಿಗೆ ಮೋದಿ ಅವರು ‘ಪೆದ್ದಿ’ ಸಿನಿಮಾದ ಬಗ್ಗೆ ವಿಚಾರಿಸಿದ್ದು ಹಾಗೂ ಮೋದಿ ಅವರು ಪಶ್ಚಿಮ ಬಂಗಾಳದ ಪುಟ್ಟ ಗ್ರಾಮವೊಂದು ಫುಟ್​​ಬಾಲ್​ ಕ್ರೀಡೆಯಲ್ಲಿ ಸಾಧನೆ ಮಾಡಿರುವ ವಿಷಯವನ್ನು ಹಂಚಿಕೊಂಡಿದ್ದನ್ನು ರಾಮ್ ಚರಣ್ ಹೇಳಿದ್ದರು. ಇದೀಗ ಬಿಜೆಪಿಗರು ರಾಮ್ ಚರಣ್ ಅವರ ಇದೇ ವಿಡಿಯೋ ಅನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ರಾಮ್ ಚರಣ್ ಅವರೊಟ್ಟಿಗೆ ಮಾತನಾಡಿದ್ದ ಮೋದಿ ಅವರು ‘ಪಶ್ಚಿಮ ಬಂಗಾಳಕ್ಕೆ ಚುನಾವಣೆ ಪ್ರಚಾರಕ್ಕೆ ಹೋಗಿದ್ದಾಗ ಅಲ್ಲಿ ಕೆಲವು ಯುವಕರು ಮೇಲೆ ಸ್ಪೋರ್ಟ್ಸ್ ಜರ್ಸಿ ಧರಿಸಿ ಕೆಳಗೆ ಲಂಗೋಟಿ ಧರಿಸಿದ್ದನ್ನು ಕಂಡು ವಿಚಾರಿಸಿದಾಗ ಆ ಇಡೀ ಊರು ಫುಟ್​​ಬಾಲ್ ಕ್ರೀಡಾಪಟುಗಳನ್ನು ಹೊಂದಿರುವುದಾಗಿ ಹೇಳಿದ್ದರಂತೆ. ಆ ಊರಿನಿಂದ ಬಂದು ಖ್ಯಾತ ಫುಟ್​​ಬಾಲ್ ಆಟಗಾರನಾದ ಮೊಹಮ್ಮದ್ ಬಗ್ಗೆಯೂ ಮೋದಿ ಹೇಳಿದ್ದರಂತೆ.

ದೆಹಲಿಯಲ್ಲಿ ಮಾತನಾಡಿದ್ದ ನಟ ರಾಮ್ ಚರಣ್, ತಮ್ಮ ‘ಪೆದ್ದಿ’ ಸಿನಿಮಾವು ಮೋದಿ ಅವರ ಕನಸಾದ ‘ವಿಕಸಿತ್ ಭಾರತ್’ ಅನ್ನು ಪ್ರತಿನಿಧಿಸುತ್ತದೆ ಎಂದು ಸಹ ಹೇಳಿದ್ದರು. ಈ ಎಲ್ಲ ಕಾರಣಗಳಿಂದಾಗಿ ಬಿಜೆಪಿಗರು ‘ಪೆದ್ದಿ’ ಸಿನಿಮಾವನ್ನು ಬೆಂಬಲಿಸುತ್ತಿದ್ದಾರೆ. ‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದೆ. ಸಿನಿಮಾ ಅನ್ನು ಬುಚ್ಚಿಬಾಬು ಸನಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾನಲ್ಲಿ ಶಿವರಾಜ್ ಕುಮಾರ್, ಜಾನ್ಹವಿ ಕಪೂರ್ ನಟಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *