
ದಾವಣಗೆರೆ, ಮಾ,26: ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಆವರಣಕ್ಕೆ ಬಿಜೆಪಿ ಮುಖಂಡರು ಚಪ್ಪಲಿ ಧರಿಸಿ ಪ್ರವೇಶಿಸಿದ್ದಾರೆ ಎಂಬ ವಿಚಾರ ಈಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ದೇವಸ್ಥಾನ ಅಪವಿತ್ರಗೊಂಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ದೇವಿಗೆ ವಿಶೇಷ ಹಾಲಿನ ಅಭಿಷೇಕ ಮಾಡುವ ಮೂಲಕ ‘ಶುದ್ಧೀಕರಣ’ ನಡೆಸಿದ್ದಾರೆ. ಮಾರ್ಚ್ 24ರಂದು ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುವ ಕೊನೆಯ ದಿನದಂದು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೇವಸ್ಥಾನದ ಪಾದಗಟ್ಟೆ ಮುಂದಿನ ಅಂಗಳಕ್ಕೆ ಚಪ್ಪಲಿ ಧರಿಸಿಯೇ ಪ್ರವೇಶ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯಿಂದ ದೇವಸ್ಥಾನ ಅಪವಿತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರು, ಇಂದು 101 ಲೀಟರ್ ಹಾಲು, 25 ಲೀಟರ್ ಮೊಸರು, ತುಪ್ಪ ಹಾಗೂ ಜೇನುತುಪ್ಪದಿಂದ ದುರ್ಗಾಂಬಿಕಾ ದೇವಿಗೆ ಮಹಾಭಿಷೇಕ ಮಾಡಿದರು. ಅಲ್ಲದೆ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತು ದೇವಸ್ಥಾನ ಪ್ರದಕ್ಷಿಣೆ ಹಾಕುವ ಮೂಲಕ ಭಕ್ತಿ ಸಮರ್ಪಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಬಿ.ಜಿ. ಅಜಯಕುಮಾರ್, “ಅಭಿಮಾನಿಗಳು ನಾಯಕರನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದ ಸಂಭ್ರಮದಲ್ಲಿ ನೇರವಾಗಿ ಪ್ರಾಂಗಣಕ್ಕೆ ಪ್ರವೇಶಿಸಿದ್ದಾರೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ, ನಾವು ಗರ್ಭಗುಡಿಗೆ ಚಪ್ಪಲಿ ಒಯ್ದಿಲ್ಲ. ಅವಸರದಲ್ಲಿ ನಡೆದ ತಪ್ಪನ್ನು ರಾಜಕೀಯ ಮಾಡುವುದು ಬೇಡ” ಎಂದು ಮನವಿ ಮಾಡಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ