ಬೆಂಗಳೂರು, ಫೆ.19: ದೆಹಲಿಯ ಭರತ್ ಮಂಟಪದಲ್ಲಿ ನಡೆದ ‘ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್’ನಲ್ಲಿ (India AI Impact Summit) ಪ್ರದರ್ಶಿಸಲಾದ ‘ರೋಬೋಡಾಗ್’ (Robodog) ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರವು ಈ ಹಿಂದೆ ಯುಪಿಎ (UPA) ಸರ್ಕಾರದ ಯೋಜನೆಗಳನ್ನು ನಕಲು ಮಾಡಿ ತನ್ನದೇ ಎಂದು ಹೆಸರಿಟ್ಟುಕೊಂಡಿತ್ತು. ಈಗ ತಂತ್ರಜ್ಞಾನದಲ್ಲೂ ಅದೇ ‘ಕಾಪಿ-ಪೇಸ್ಟ್’ ಸಂಸ್ಕೃತಿಯನ್ನು ಮುಂದುವರಿಸಿದೆ ಎಂದು ಸಿದ್ದರಾಮಯ್ಯ ಎಕ್ಸ್ ಖಾತೆಯಲ್ಲಿ ಟೀಕಿಸಿದ್ದಾರೆ.
ಸಮ್ಮೇಳನದಲ್ಲಿ ಪ್ರದರ್ಶಿಸಲಾದ ರೋಬೋಡಾಗ್ ಚೀನಾ ಮೂಲದ ‘ಯೂನಿಟ್ರೀ’ (Unitree) ಕಂಪನಿಯ ಉತ್ಪನ್ನವಾಗಿದೆ. ಆದರೆ ಇದನ್ನು ಭಾರತದ್ದೇ ಆವಿಷ್ಕಾರ ಎಂಬಂತೆ ಬಿಂಬಿಸಿರುವುದು ದೇಶಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗುರ ತಂದಿದೆ ಎಂದು ಅವರು ಕಿಡಿಕಾರಿದ್ದಾರೆ. ಮೋದಿಯವರ ‘ಮೇಕ್ ಇನ್ ಇಂಡಿಯಾ’ (Make in India) ಅಭಿಯಾನವು ಈಗ ‘ಫೇಕ್ ಇನ್ ಇಂಡಿಯಾ’ (Fake in India) ಆಗಿ ಬದಲಾಗಿದೆ. ಸ್ವದೇಶಿ ಆವಿಷ್ಕಾರಗಳನ್ನು ಪ್ರೋತ್ಸಾಹಿಸುವ ಬದಲು ಪರಕೀಯರ ತಂತ್ರಜ್ಞಾನಕ್ಕೆ ಭಾರತದ ಲೇಬಲ್ ಅಂಟಿಸುವ ಕೆಲಸ ಆಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್;
Narendra Modi and the BJP don’t believe in ‘Make in India’. They believe in ‘Fake in India’.
At the AI Impact Summit, a BJP-linked institution passed off a Chinese robot as “Indian innovation”. Chinese media quickly exposed it – turning the spectacle into an international… pic.twitter.com/D4dxuNN6B9
— Siddaramaiah (@siddaramaiah) February 18, 2026
ಇಂತಹ ಜಾಗತಿಕ ಮಟ್ಟದ ಸಮ್ಮೇಳನದಲ್ಲಿ ಸರಿಯಾದ ಪರಿಶೀಲನೆ ಇಲ್ಲದೆ ರೋಬೋಟ್ ಪ್ರದರ್ಶನ ಮಾಡಿರುವುದು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಮತ್ತು ಪ್ರಚಾರದ ಹಪಾಹಪಿಯನ್ನು ತೋರಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನು ರೋಬೋಡಾಗ್ ವಿವಾದವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ದೆಹಲಿಯ ಭರತ್ ಮಂಟಪದಲ್ಲಿ ನಡೆದ ‘ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್ 2026’ ರಲ್ಲಿ ನಡೆದ ಈ ಘಟನೆಯು ದೇಶೀಯ ಆವಿಷ್ಕಾರ ಮತ್ತು ತಂತ್ರಜ್ಞಾನದ ನೈಜತೆಯ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ಎಐ ಶೃಂಗಸಭೆಯಲ್ಲಿ ಚೀನಾದ ರೋಬೋಟ್ ಪ್ರದರ್ಶನ; ವಿವಾದಕ್ಕೆ ಕ್ಷಮೆ ಯಾಚಿಸಿದ ಗಾಲ್ಗೋಟಿಯಾಸ್ ವಿವಿ
ವಿವಾದದ ಕೇಂದ್ರಬಿಂದು: ಗಾಲ್ಗೋಟಿಯಸ್ ವಿಶ್ವವಿದ್ಯಾಲಯ:
ಉತ್ತರ ಪ್ರದೇಶದ ಗಾಲ್ಗೋಟಿಯಸ್ ವಿಶ್ವವಿದ್ಯಾಲಯವು ಸಮ್ಮೇಳನದಲ್ಲಿ ಒಂದು ರೋಬೋಟಿಕ್ ನಾಯಿಯನ್ನು ಪ್ರದರ್ಶಿಸಿತು. ಇದಕ್ಕೆ ‘ಒರಿಯನ್’ (Orion) ಎಂದು ಹೆಸರಿಡಲಾಗಿತ್ತು. ಆದರೆ, ನೆಟ್ಟಿಗರು ಇದನ್ನು ತಕ್ಷಣವೇ ಗುರುತಿಸಿ, ಇದು ಚೀನಾದ ‘ಯೂನಿಟ್ರೀ’ (Unitree) ಕಂಪನಿಯ Unitree Go2 ಮಾಡೆಲ್ ಎಂದು ಸಾಕ್ಷ್ಯ ಸಮೇತ ಬಹಿರಂಗಪಡಿಸಿದ್ದಾರೆ. ವಿಶ್ವವಿದ್ಯಾಲಯದ ಪ್ರೊಫೆಸರ್ ನೇಹಾ ಸಿಂಗ್ ಅವರು ಮಾಧ್ಯಮಗಳ ಮುಂದೆ ಮಾತನಾಡುವಾಗ ಇದನ್ನು ನಮ್ಮ ವಿಶ್ವವಿದ್ಯಾಲಯದ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ” ಎಂದು ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ಚೀನಾದಿಂದ ಕೇವಲ 2-3 ಲಕ್ಷ ರೂಪಾಯಿಗೆ ಸಿಗುವ ರೋಬೋಟ್ ಎಂದು ಗೊತ್ತಾದಾಗ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
