ಬಿಜೆಪಿ ತೊರೆಯಲು ನಿಜವಾದ ಕಾರಣ ಬಿಚ್ಚಿಟ್ಟ ಅಣ್ಣಾಮಲೈ; ಗುಜರಾತ್ ಕೇಂದ್ರಿತ, ದೆಹಲಿ ಕೇಂದ್ರಿತ ರಾಜಕೀಯ ಧೋರಣೆಗೆ ಟೀಕೆ – Kannada News | K Annamalai criticizes BJP’s Gujrat centric and Delhi centric development models

ಚೆನ್ನೈ, ಆಗಸ್ಟ್ 17: ಇದೇ ಜೂನ್ ತಿಂಗಳಲ್ಲಿ ಬಿಜೆಪಿಯನ್ನು ತೊರೆದ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರು ತಮ್ಮ ನಿರ್ಧಾರಕ್ಕೆ ಕಾರಣವೇನೆಂದು ಸುಳಿವು ನೀಡಿದ್ದಾರೆ. ಐದಾರು ವರ್ಷಗಳಿಂದ ಬಿಜೆಪಿಯಲ್ಲಿದ್ದು, ತಮಿಳುನಾಡಿನ ಭವಿಷ್ಯದ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿದ್ದ, ಮತ್ತು ತಮಿಳುನಾಡಿನಲ್ಲಿ ಬಿಜೆಪಿಗೆ ಶೇ. 10ಕ್ಕಿಂತಲೂ ಹೆಚ್ಚು ಮತಗಳು ಸಿಗುವಂತೆ ಮಾಡಿದ್ದ ಅಣ್ಣಾಮಲೈ ಅವರು ಪಕ್ಷದ ಧೋರಣೆ ಬಗ್ಗೆ ಅಸಮಾಧಾನಗೊಂಡು ನಿರ್ಗಮಿಸಿದ್ದಾರೆ. ಇಂಡಿಯಾ ಟುಡೆ ತಮಿಳುನಾಡು ಸಮಾವೇಶದಲ್ಲಿ (India Today Roundtable Tamil Nadu) ಮಾತನಾಡುತ್ತಾ ಅವರು, ಬಿಜೆಪಿಯ ಕೇಂದ್ರ ನಾಯಕತ್ವದ ಧೋರಣೆ ಬಗ್ಗೆ ವರ್ಷಗಳಿಂದ ಇದ್ದ ಬೇಸರವು ಗಟ್ಟಿಗೊಂಡು ಪಕ್ಷ ತೊರೆಯುವಂತೆ ಮಾಡಿತು ಎಂದಿದ್ದಾರೆ.

‘ಗುಜರಾತ್-ಕೇಂದ್ರಿತ’ ಮಾದರಿಗೆ ವಿರೋಧ

ಭಾರತದ ಅಭಿವೃದ್ಧಿಯು ಕೇವಲ ಗುಜರಾತ್ ಒಂದಕ್ಕೇ ಸೀಮಿತವಾಗಿರಬಾರದು ಎಂದು ಅಣ್ಣಾಮಲೈ ಹೇಳಿದ್ದಾರೆ. “ಎಲ್ಲಾ ಎಐ (AI) ಕಂಪನಿಗಳು, ಚಿಪ್/ಸೆಮಿಕಂಡಕ್ಟರ್ ತಯಾರಿಕಾ ಘಟಕಗಳು, 2030ರ ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು 2036ರ ಒಲಿಂಪಿಕ್ಸ್‌ನಂತಹ ಬೃಹತ್ ಯೋಜನೆಗಳು ಕೇವಲ ಗುಜರಾತ್‌ಗೆ ಹೋಗುವುದನ್ನು ಒಪ್ಪಲು ಸಾಧ್ಯವಿಲ್ಲ. ಭಾರತದ ಅಭಿವೃದ್ಧಿ ಮಾದರಿ ಬದಲಾಗಬೇಕು,” ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಘಟಕ ಪುನಾರಚನೆ: ಸ್ಮೃತಿ ಇರಾನಿಗೆ ಹೊಸ ಹೊಣೆ, ಬಿ.ಎಲ್.ಸಂತೋಷ್‌ ಮುಂದುವರಿಕೆ

‘ದೆಹಲಿ-ಕೇಂದ್ರಿತ’ ನಿರ್ಧಾರಗಳಿಗೂ ವಿರೋಧ

ಬಿಜೆಪಿಯ ನಿರ್ಧಾರಗಳು ದಿನದಿಂದ ದಿನಕ್ಕೆ ‘ದೆಹಲಿ-ಕೇಂದ್ರಿತ’ (ಕೇಂದ್ರೀಕೃತ) ಆಗುತ್ತಿರುವುದು ದುರದೃಷ್ಟಕರ. ಪಕ್ಷದ ವಿಕೇಂದ್ರೀಕರಣವಾಗಬೇಕು ಮತ್ತು ರಾಜ್ಯ ಮಟ್ಟದ ನಾಯಕರಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಮಿಳುನಾಡಿನ ಧ್ವನಿ ಬಿಜೆಪಿಯ ನಾಯಕತ್ವಕ್ಕೆ ಕೇಳಿಸಲಿಲ್ಲ: ಅಣ್ಣಾಮಲೈ

‘ತಮಿಳುನಾಡಿನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದುದು ನನಗೆ ಅನುಭವಕ್ಕೆ ಬಂದಿತ್ತು. ಯುವಜನರು ಬದಲಾವಣೆ ಬಯಸುತ್ತಿದ್ದರು. ನಾವು ಆ ಧ್ವನಿಯನ್ನು ಕೇಳಿಸಿಕೊಳ್ಳುತ್ತಿರಲಿಲ್ಲ ಅನಿಸಿತು. ಜನತೆಗೆ ಹೊಸ ಮಾದರಿಯ ಆಡಳಿತ, ಹೊಸ ಐಡಿಯಾಗಳು ಬೇಕಿತ್ತು. ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ದೆಹಲಿಯಲ್ಲಿ ಕುಳಿತು ಒಂದು ರಾಜ್ಯದ ಬಗ್ಗೆ ರಾಷ್ಟ್ರ ಮಟ್ಟದ ಧೋರಣೆಯಿಂದ ನೋಡುವುದು ಎಲ್ಲಾ ಸಮಯದಲ್ಲೂ ಸರಿ ಎನಿಸುವುದಿಲ್ಲ’ ಎಂದು ಕರ್ನಾಟಕ ಕೇಡರ್​ನ ಮಾಜಿ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ರಾಹುಲ್ ವಿರುದ್ಧ ಅಕ್ರಮ ಆಸ್ತಿ ಪ್ರಕರಣ: ವಿಚಾರಣೆ ಸದ್ಯಕ್ಕೆ ನಿಲ್ಲಿಸುವಂತೆ ಅಲಹಾಬಾದ್ ಹೈಕೋರ್ಟ್​ಗೆ ಸುಪ್ರೀಂ ನಿರ್ದೇಶನ

2024ರ ಲೋಕಸಭೆ ಚುನಾವಣೆಗೆ ಮುನ್ನ ಅಣ್ಣಾಮಲೈ ಅವರು ತಮಿಳುನಾಡಿನಲ್ಲಿ 1,700 ಕಿಮೀ ಪಾದಯಾತ್ರೆ ಕೈಗೊಂಡಿದ್ದರು. ಎಲ್ಲಾ 39 ಲೋಕಸಭಾ ಕ್ಷೇತ್ರಗಳಲ್ಲೂ ಸಂಚರಿಸಿದ್ದರು. ಇದರ ಪರಿಣಾಮವೋ ಏನೋ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಮತಗಳಿಕೆ ಪ್ರಮಾಣ ಶೇ. 11 ಮುಟ್ಟಿತ್ತು. ಇದು ಬಿಜೆಪಿ ಪಾಲಿಗೆ ಅಚ್ಚರಿಯ ಸಾಧನೆ ಹೌದು. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿತು. ಇದನ್ನು ಅಣ್ಣಾಮಲೈ ಬಲವಾಗಿ ವಿರೋಧಿಸಿದರು. ಚುನಾವಣೆ ಬಳಿಕ ಅವರು ಬಿಜೆಪಿ ತೊರೆದರು.

ತಮಿಳುನಾಡು ಸಿಎಂಗೆ ಬೆಂಬಲ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಆಡಳಿದ ಬಗ್ಗೆ ಮಾತನಾಡಿದ ಅವರು, ಹೊಸ ಸರ್ಕಾರಕ್ಕೆ ತನ್ನ ಕೆಲಸವನ್ನು ಸಾಬೀತುಪಡಿಸಲು ಕನಿಷ್ಠ ಒಂದು ವರ್ಷದ ಸಮಯ ನೀಡಬೇಕು. ಪ್ರಸ್ತುತ ಒಬ್ಬ ತಮಿಳನಾಗಿ ತಾನು ವಿಜಯ್ ಅವರಿಗೆ ಬೆಂಬಲ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

‘ಇಂಡಿಯಾ ಟುಡೇ ತಮಿಳುನಾಡು ರೌಂಡ್ ಟೇಬಲ್’ ಕಾರ್ಯಕ್ರಮದಲ್ಲಿ ಅವರು ಈ ನೇರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *