ಬಿಜೆಪಿ ಸೇರಿದ ರಾಜಣ್ಣ: ಹಿರಿಯೂರು ಕ್ಷೇತ್ರದ ಮೇಲೆ ಜೆಡಿಎಸ್ ಕಣ್ಣು, ಉಪಚುನಾವಣೆ ಅಖಾಡಕ್ಕೆ ರಂಗು – Kannada News | Rajanna Joins BJP For Contest In Hiriyur By Election, JDS also Plan for Ticket

ಚಿತ್ರದುರ್ಗ/ಬೆಂಗಳೂರು, (ಮೇ 21): ಹಿರಿಯ ನಾಯಕ ಹಾಗೂ ಸಚಿವ ಡಿ. ಸುಧಾಕರ್ (D Sudhakar) ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ (Hiriyur By Election) ಎದುರಾಗಿದೆ. ಚುನಾವಣೆಗೆ ದಿನಾಂಕ ಘೋಷಣೆ ಮೊದಲೇ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಇದಕ್ಕೆ ಪೂರಕವೆಂಬಂತೆ ಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಅವರು ಬಿಜೆಪಿ (BJP) ಸೇರ್ಪಡೆಯಾಗಿದ್ದಾರೆ. ಇನ್ನೊಂದೆಡೆ ಮಿತ್ರ ಪಕ್ಷ ಜೆಡಿಎಸ್ (JDS)​​​ ಸಹ ಬೇರೆಯದ್ದೇ ಲೆಕ್ಕಚಾರಗಳನ್ನ ಹಾಕುತ್ತಿದೆ.

ಮುಖ್ಯಾಂಶಗಳು

  • ರಂಗೇರಿದ ಹಿರಿಯೂರ ವಿಧಾನಸಭಾ ಕ್ಷೇತ್ರ ಉಪಚುನಾವಣೆ ರಾಜಕೀಯ
  • ಸಚಿವ ಡಿ ಸುಧಾಕರ್ ನಿಧನದಿಂದ ಹಿರಿಯೂರು ಕ್ಷೇತ್ರಕ್ಕೆ ಎದುರಾಗಿರುವ ಉಪಚುನಾವಣೆ
  • ಕ್ಷೇತ್ರಕ್ಕಾಗಿ ದೋಸ್ತಿಗಳಾದ ಜೆಡಿಎಸ್-ಬಿಜೆಪಿಯಲ್ಲಿ ಫೈಟ್
  • ಕಾಂಗ್ರೆಸ್​​​ನಲ್ಲೂ ಗರಿಗೆದರಿದ ರಾಜಕೀಯ ಬೆಳವಣಿಗಳು

ಮೈತ್ರಿ ಪಾಳಯದಲ್ಲಿ ಬಿಗ್ ಫೈಟ್

ಕೋಟೆಯನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಭರ್ಜರಿ ತಂತ್ರ-ಪ್ರತಿತಂತ್ರಗಳನ್ನು ಹೆಣೆಯುತ್ತಿವೆ. ಅದರಲ್ಲೂ ಮೈತ್ರಿ ಪಾಳಯದಲ್ಲಿ ಟಿಕೆಟ್‌ಗಾಗಿ ಒಳಗೊಳಗೇ ಬಿಗ್ ಫೈಟ್ ಶುರುವಾಗಿದೆ. ಹೌದು… ಹಿರಿಯೂರು ಕ್ಷೇತ್ರದ ಮೇಲೆ ಈ ಬಾರಿ ಪ್ರಾದೇಶಿಕ ಪಕ್ಷ ಜೆಡಿಎಸ್ ಕಣ್ಣಿಟ್ಟಿದ್ದು, ಈ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನವರನ್ನೇ ಕಣಕ್ಕಿಳಿಸಲು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭರ್ಜರಿ ಪ್ಲಾನ್ ಮಾಡಿದ್ದಾರೆ. ಇನ್ನೊಂದೆಡೆ ಬಿಜೆಪಿ ಸಹ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದ್ದು, ಇದಕ್ಕಾಗಿ ರಾಜಣ್ಣ ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ.

ಇದನ್ನೂ ನೋಡಿ: ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ಹೀಗಿದೆ ದಳಪತಿಗಳ ಲೆಕ್ಕಾಚಾರ

ರಾಜಣ್ಣನನ್ನ ಕಣ್ಣಕ್ಕಿಳಿಸಲು ಬಿಜೆಪಿ ಪ್ಲ್ಯಾನ್

ಮೈತ್ರಿ ಧರ್ಮದ ಪ್ರಕಾರ ಜೆಡಿಎಸ್ ಹಿರಿಯೂರು ಸೀಟಿಗೆ ಬೇಡಿಕೆ ಇಡುತ್ತಿದ್ದರೆ, ಇತ್ತ ಬಿಜೆಪಿ ಮಾತ್ರ ಒಳಗೊಳಗೇ ಬೇರೆಯದೇ ಆದ ಬ್ರಹ್ಮಾಸ್ತ್ರವನ್ನು ರೆಡಿ ಮಾಡಿಕೊಂಡಿದೆ. ಹಿರಿಯೂರು ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ‘ಕಾಡುಗೊಲ್ಲ’ ಸಮುದಾಯದ ಮತಗಳನ್ನು ಸೆಳೆಯಲು ಅದೇ ಸಮುದಾಯದ ಪ್ರಭಾವಿ ನಾಯಕನನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದ್ದು, ಅದಕ್ಕಾಗಿಯೇ ತಟಸ್ಥರಾಗಿದ್ದ ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ಅವರನ್ನ ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಇದರಿಂದ ಇಂದು ರಾಜಣ್ಣ ಅವರನ್ನು ಅದ್ಧೂರಿಯಾಗಿ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಗೋವಿಂದ ಕಾರಜೋಳ, ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಮೈಸೂರು ಸಂಸದ ಯದುವೀರ್ ಒಡೆಯರ್, ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರಂತಹ ಘಟಾನುಘಟಿ ನಾಯಕರ ಸಮ್ಮುಖದಲ್ಲೇ ರಾಜಣ್ಣ ಮರಳಿ ಕಮಲ ಮುಡಿದಿದ್ದಾರೆ.

ಕಾಂಗ್ರೆಸ್‌ನಿಂದ ಪೂರ್ಣಿಮಾ ಶ್ರೀನಿವಾಸ್?

ಇಷ್ಟು ದೋಸ್ತಿಗಳ ಕಥೆಯಾದರೆ ಇನ್ನು ಕಾಂಗ್ರೆಸ್ ಕಾಂಗ್ರೆಸ್ ಪಾಳಯದಲ್ಲಿ ಟಿಕೆಟ್‌ಗಾಗಿ ಆಕಾಂಕ್ಷಿಗಳ ದಂಡೇ ಇದೆ. ಈ ರೇಸ್‌ನಲ್ಲಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಹೆಸರು ಮುಂಚೂಣಿಯಲ್ಲಿದೆ.ಈ ಹಿಂದೆ ಇದೇ ಹಿರಿಯೂರು ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕಿಯಾಗಿದ್ದ ಪೂರ್ಣಿಮಾ, ಕಳೆದ ಚುನಾವಣೆಯಲ್ಲಿ (2023) ಸೋತ ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದೀಗ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನು ಅನುಕಂಪದ ಮೇಲೆ ಮೃತ ಸುಧಾಕರ್ ಅವರ ಪುತ್ರ ಸುಹಾಸ್‌ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಕಾಂಗ್ರೆಸ್​​​ನಲ್ಲೂ ಸಹ ಟಿಕೆಟ್ ಫೈಟ್ ಜೋರಾಗಿದ್ದು, ಹೈಕಮಾಂಡ್ ಅನುಕಂಪಕ್ಕೆ ಮನ್ನಣೆ ನೀಡುತ್ತಾರಾ ಇಲ್ಲ ಪೂರ್ಣಿಮಾ ಶ್ರೀನಿವಾಸ್ ಗೆ ಮಣೆ ಹಾಕುತ್ತಾ ಎನ್ನುವುದ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *