‘ಬಿಟ್ಟಿ ಪ್ರಚಾರಕ್ಕಾಗಿ ರಾಮಾಯಣ ಚಿತ್ರದಲ್ಲಿ ಕಳಪೆ ವಿಎಫ್‌ಎಕ್ಸ್’: ಸೆಟ್‌ಗೆ ಭೇಟಿ ನೀಡಿದ ಕ್ರಿಯೇಟರ್ ಆರೋಪ – Kannada News | Ranbir Kapoor Ramayana Movie Bad VFX free marketing claim creator Dhruv Parikshit

ಬಾಲಿವುಡ್‌ನ ಬಹುನಿರೀಕ್ಷಿತ ಪೌರಾಣಿಕ ಚಿತ್ರ ‘ರಾಮಾಯಣ’ (Ramayana) ಸದ್ಯ ದೇಶಾದ್ಯಂತ ಭಾರಿ ಹೈಪ್ ಸೃಷ್ಟಿಸಿದೆ. ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಸೆಟ್‌ಗೆ ಇತ್ತೀಚೆಗೆ ಭೇಟಿ ನೀಡಿದ್ದ ಕಂಟೆಂಟ್ ಕ್ರಿಯೇಟರ್ ಧ್ರುವ್ ಪರೀಕ್ಷಿತ್ ಅವರು ಚಿತ್ರತಂಡದ ವಿರುದ್ಧ ಅತ್ಯಂತ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಚಿತ್ರದ ಮೇಲಿನ ಚರ್ಚೆ ಹಾಗೂ ‘ಬಿಟ್ಟಿ ಪ್ರಚಾರ’ಕ್ಕಾಗಿ ಚಿತ್ರತಂಡ ಉದ್ದೇಶಪೂರ್ವಕವಾಗಿಯೇ ರಣಬೀರ್ ಕಪೂರ್ ಅವರ ‘ರಾಮ ಗ್ಲಿಂಪ್ಸ್’ ವಿಡಿಯೋದಲ್ಲಿ ಕಳಪೆ ವಿಎಫ್‌ಎಕ್ಸ್ (VFX) ಬಳಸಲಾಗಿತ್ತು ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿದ್ದ ರಾಮಾಯಣ ಚಿತ್ರದ ‘ರಾಮ ಗ್ಲಿಂಪ್ಸ್’ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಚಿತ್ರದ ಭವ್ಯತೆ ಮೆಚ್ಚುಗೆ ಗಳಿಸಿದರೂ, ಅದರಲ್ಲಿನ ವಿಎಫ್‌ಎಕ್ಸ್, ಸಿಜಿಐ ಮತ್ತು ರಾಕ್ಷಸರ ಕ್ಯಾರೆಕ್ಟರ್ ಡಿಸೈನ್‌ಗಳು ವಿಡಿಯೋ ಗೇಮ್‌ನಂತೆ ಕಳಪೆಯಾಗಿವೆ ಎಂದು ಭಾರಿ ಟೀಕೆ ವ್ಯಕ್ತವಾಗಿತ್ತು. ಆಗ ಚಿತ್ರತಂಡವು ಸಿನಿಮಾ ಬಿಡುಗಡೆಯ ವೇಳೆಗೆ ಎಲ್ಲವನ್ನೂ ಸರಿಪಡಿಸುವುದಾಗಿ ಭರವಸೆ ನೀಡಿತ್ತು.

‘ಕ್ರಿಯೇಟರ್ಸ್ ಡೇ’ ವೇಳೆ ಬಹಿರಂಗವಾದ ಸತ್ಯ?

ಇತ್ತೀಚೆಗೆ ‘ರಾಮಾಯಣ’ ಚಿತ್ರತಂಡವು ಸಿನಿಮಾದ ಸೆಟ್‌ನಲ್ಲಿ ‘ಕ್ರಿಯೇಟರ್ಸ್ ಡೇ’ ಆಯೋಜಿಸಿತ್ತು. ದೇಶದ ಪ್ರಮುಖ ಕಂಟೆಂಟ್ ಕ್ರಿಯೇಟರ್‌ಗಳು ಸೆಟ್‌ಗೆ ಭೇಟಿ ನೀಡಿ ನಿರ್ದೇಶಕ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ನಟರಾದ ರಣಬೀರ್ ಕಪೂರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರನ್ನು ಭೇಟಿ ಮಾಡಿದ್ದರು. ಇದರಲ್ಲಿ ಭಾಗಿಯಾಗಿದ್ದ ಧ್ರುವ್ ಪರೀಕ್ಷಿತ್, ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೋದ ಕಾಮೆಂಟ್ ಸೆಕ್ಷನ್‌ನಲ್ಲಿ ನೆಟ್ಟಿಗರೊಬ್ಬರು ವಿಎಫ್‌ಎಕ್ಸ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಈ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

‘ಹೌದು, ಆ ಗ್ಲಿಂಪ್ಸ್ ವಿಡಿಯೋದಲ್ಲಿ ವಿಎಫ್‌ಎಕ್ಸ್ ಅಪೂರ್ಣವಾಗಿತ್ತು. ಆದರೆ ಚಿತ್ರತಂಡ ಹೊಂದಿರುವ ವಿಷನ್ ಏನೆಂಬುದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ನಾನು ಸೆಟ್‌ನಲ್ಲಿ ನೋಡಿದ ಕೆಲವು ದೃಶ್ಯಗಳು ಹಾಲಿವುಡ್‌ನ ‘ಅವತಾರ್’ ಸಿನಿಮಾದ ರೇಂಜ್‌ನಲ್ಲಿದ್ದವು. ಕ್ಯಾರೆಕ್ಟರ್ ಡಿಸೈನ್ ಮತ್ತು ರಾಮಾಯಣದ ಜಗತ್ತು ಅದ್ಭುತವಾಗಿ ಮೂಡಿಬಂದಿದೆ’ ಎಂದು ಧ್ರುವ್ ಹೇಳಿದ್ದಾರೆ.

ಉಚಿತ ಪ್ರಚಾರಕ್ಕಾಗಿ ಕಳಪೆ ವರ್ಷನ್ ಬಿಡುಗಡೆ?

‘ನನಗೆ ಅಲ್ಲಿನ ವಿಎಫ್‌ಎಕ್ಸ್ ಆರ್ಟಿಸ್ಟ್ ಒಬ್ಬರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಅವರು ಹೇಳಿದ ಪ್ರಕಾರ, ಚಿತ್ರತಂಡದ ಬಳಿ ಅದಕ್ಕಿಂತಲೂ ಅತ್ಯುತ್ತಮ ಕ್ವಾಲಿಟಿಯ ದೃಶ್ಯಗಳು ಸಿದ್ಧವಿದ್ದವು. ಆದರೂ ಉದ್ದೇಶಪೂರ್ವಕವಾಗಿಯೇ ಕಳಪೆ ವರ್ಷನ್ ಬಿಡುಗಡೆ ಮಾಡಲಾಯಿತು. ಏಕೆಂದರೆ, ಇಂಟರ್ನೆಟ್‌ನಲ್ಲಿ ಈ ಬಗ್ಗೆ ನೆಗೆಟಿವ್ ಚರ್ಚೆಗಳು ಮತ್ತು ಟೀಕೆಗಳು ಆರಂಭವಾದರೆ, ಅದು ಚಿತ್ರಕ್ಕೆ ಉಚಿತವಾಗಿ ದೊಡ್ಡ ಮಟ್ಟದ ಪ್ರಚಾರ ನೀಡುತ್ತದೆ ಎಂಬುದು ಚಿತ್ರತಂಡದ ಪ್ಲಾನ್ ಆಗಿತ್ತು’ ಎಂದು ಧ್ರುವ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಚಿತ್ರಕ್ಕೆ ನಂ.1 ಸ್ಥಾನ; 2026ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಯಶ್ ಅಬ್ಬರ

ವಿವಾದದ ಬೆನ್ನಲ್ಲೇ ಕಾಮೆಂಟ್ ಡಿಲೀಟ್!

ಧ್ರುವ್ ಪರೀಕ್ಷಿತ್ ಅವರ ಈ ಕಾಮೆಂಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಅವರು, ತಕ್ಷಣವೇ ಆ ಕಾಮೆಂಟ್ ಡಿಲೀಟ್ ಮಾಡಿದ್ದಾರೆ. ಅದರ ಬದಲಿಗೆ ಹೊಸದಾಗಿ ಬರೆದುಕೊಂಡಿರುವ ಅವರು, ‘ವಿಎಫ್‌ಎಕ್ಸ್ ಕೆಲಸಗಳು ಸದ್ಯ ಪ್ರಗತಿಯಲ್ಲಿದ್ದು, ಅದ್ಭುತವಾಗಿ ಮೂಡಿಬರುತ್ತಿದೆ. ನಮಗೆ ಕೆಲವು ಅಪೂರ್ಣ ತುಣುಕುಗಳನ್ನು ತೋರಿಸಲಾಗಿತ್ತು. ಕ್ಯಾರೆಕ್ಟರ್ ಡಿಸೈನ್‌ಗಳು ಅದ್ಭುತವಾಗಿವೆ. ಇದೊಂದು ಸುಂದರ ಫ್ಯಾಂಟಸಿ ಪ್ರಪಂಚದಂತೆ ಕಾಣಿಸಲಿದ್ದು, ಥಿಯೇಟರ್‌ನಲ್ಲಿ ದೊಡ್ಡ ಅನುಭವ ನೀಡಲಿದೆ’ ಎಂದು ಬದಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಅವರ ಮೊದಲ ಕಾಮೆಂಟ್‌ನ ಸ್ಕ್ರೀನ್‌ಶಾಟ್‌ಗಳು ಇಡೀ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *