ಬಿಯರ್ ಬಾಟಲಿಗಳನ್ನು ಒಯ್ಯಲು ಮುಗಿಬಿದ್ದ ಸ್ಥಳೀಯರು: ಚಾಲಕನ ಜೀವಕ್ಕಿಂತ ಬಾಟಲಿಯೇ ಮುಖ್ಯವಾಯಿತೇ? – Kannada News | Tyre Burst Causes Massive Beer Truck Accident Near Hassan, Leading to Significant Loss

ಹಾಸನ, ಜು.24: ಜಿಲ್ಲೆಯ ಹೊರ ವಲಯದ ದೊಡ್ಡಪುರ ಗ್ರಾಮದ ಬಳಿ, ತಡರಾತ್ರಿ 1 ಗಂಟೆ ಸುಮಾರಿಗೆ ಭೀಕರ ಅಪಘಾತವೊಂದು ಸಂಭವಿಸಿದೆ. ಹಾಸನದ ವುಡ್ ಪಿಕರ್ ಡಿಸ್ಟಿಲರೀಸ್‌ನಿಂದ ಕೊಪ್ಪಳಕ್ಕೆ ಸುಮಾರು 1100 ಕೇಸ್ ಬಿಯರ್ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಭಾರಿ ನಷ್ಟಕ್ಕೀಡಾಗಿದೆ. ಈ ಘಟನೆ ದೊಡ್ಡಪುರ ಗ್ರಾಮದಿಂದ ಮುಂದೆ ಚೀರನಹಳ್ಳಿ ಹಳ್ಳ ಎಂಬ ಗ್ರಾಮದ ಬಳಿ ನಡೆದಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಲಾರಿಯ ಹಿಂಬದಿಯ ಟಯರ್ ಬ್ಲಾಸ್ಟ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದೆ. ಅಷ್ಟೇ ಅಲ್ಲದೆ, ಅಂದು ಮಳೆಯೂ ಬರುತ್ತಿದ್ದರಿಂದ ಚಾಲಕನಿಗೆ ರಸ್ತೆ ಸರಿಯಾಗಿ ಕಾಣದಿರುವುದು ಕೂಡ ನಿಯಂತ್ರಣ ತಪ್ಪಲು ಕಾರಣವಾಗಿರಬಹುದು ಎಂದು ಊಹಿಸಲಾಗಿದೆ. ಟಯರ್ ಬ್ಲಾಸ್ಟ್ ಆದ ನಂತರ ವಾಹನವು ರಸ್ತೆಯಲ್ಲಿದ್ದ ಡಿವೈಡರ್‌ಗೆ ಅಪ್ಪಳಿಸಿ, ಒಂದು ಪಥದಿಂದ ಮತ್ತೊಂದು ಪಥಕ್ಕೆ ಮಗುಚಿ ಬಿದ್ದಿದೆ. ಇದರ ಪರಿಣಾಮವಾಗಿ, ಲಾರಿಯಲ್ಲಿದ್ದ ಮೂರು ಪ್ರಮುಖ ಬ್ರ್ಯಾಂಡ್‌ಗಳಾದ ಪವರ್ ಕೂಲ್, ಸನ್ನಿ ಬೀಚಸ್, ಮತ್ತು ಲೆಜೆಂಡ್ ಸೇರಿದಂತೆ ಲಕ್ಷಾಂತರ ಮೌಲ್ಯದ ಬಿಯರ್ ಬಾಟಲಿಗಳು ರಸ್ತೆ ಪಾಲಾಗಿವೆ. ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕ ಹಲವು ವರ್ಷಗಳಿಂದ ಈ ಕ್ಷೇತ್ರದಲ್ಲಿ ಅನುಭವ ಹೊಂದಿದ್ದು, ಈ ದುರ್ಘಟನೆಯಲ್ಲಿ ಪ್ರಾಣ ಉಳಿದಿರುವುದು ಸಂತಸ ತಂದಿದೆ ಎಂದು ಲಾರಿ ಮಾಲೀಕರು ಹೇಳಿದ್ದಾರೆ. ಅಪಘಾತದ ನಂತರ ಸ್ಥಳಕ್ಕೆ ಧಾವಿಸಿದ ಕೆಲವು ಸ್ಥಳೀಯ ಗ್ರಾಮಸ್ಥರು ರಸ್ತೆ ಪಾಲಾದ ಬಿಯರ್ ಬಾಟಲಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಲಾರಿ ಕಂಪನಿಯ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಆಗಮಿಸಿ ತೆರವು ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ಅಂದಾಜು 17 ರಿಂದ 20 ಲಕ್ಷ ರೂಪಾಯಿ ಮೌಲ್ಯದ ಬಿಯರ್ ಈ ಅಪಘಾತದಲ್ಲಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅಪಘಾತದಲ್ಲಿ ಹಾಳಾದ ಬಾಟಲಿಗಳನ್ನು ಮರುಪ್ಯಾಕ್ ಮಾಡುವ ಕಾರ್ಯ ಭರದಿಂದ ಸಾಗುತ್ತಿದೆ. ಇದು ಪೂರ್ಣಗೊಂಡ ನಂತರವೇ ನಿಖರ ನಷ್ಟದ ಅಂದಾಜು ಸಿಗಲಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ರಾತ್ರಿಯಿಡೀ ಸುರಿದ ಮಳೆಯ ನಡುವೆಯೂ ತೆರವು ಕಾರ್ಯಾಚರಣೆ ಮುಂದುವರೆದಿದ್ದು, ರಸ್ತೆಯನ್ನು ತೆರವುಗೊಳಿಸಲು ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಲಾರಿ ಪಲ್ಟಿಯಾದ ಪರಿಣಾಮವಾಗಿ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯಾಗಿದ್ದು, ಆದಷ್ಟು ಬೇಗ ರಸ್ತೆ ಕ್ಲಿಯರ್ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಈ ಅಪಘಾತಕ್ಕೆ ಸಂಬಂಧಿಸಿದಂತೆ ಮಾಲೀಕರು ಟಿವಿ9 ಜತೆಗೆ ಮಾತನಾಡಿದ್ದಾರೆ.”ಒಂದು ಜೀವಕ್ಕೆ ಬೆಲೆ ಕೊಡಬೇಕು. ಗಾಡಿಯನ್ನು ಬೇಕಾದರೆ ನಾಳೆ ಇನ್ನೊಂದು ಶೋ ರೂಂನಿಂದ ಬಿಡಿಸಬಹುದು, ಆದರೆ ಜೀವ ಮುಖ್ಯ” ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *