ಬಿರಿಯಾನಿ ಪ್ರಿಯರಿಗೆ ಬಂಪರ್ ಆಫರ್: ಈ ಹೋಟೆಲ್​ಗೆ ಒಂದು ಸಿಲಿಂಡರ್ ತಂದ್ರೆ ಸಾಕು, ತಿಂಗಳು ಪೂರ್ತಿ ಉಚಿತ ಬಿರಿಯಾನಿ ಹಬ್ಬ!

ಬಿರಿಯಾನಿ ಪ್ರಿಯರಿಗೆ ಬಂಪರ್ ಆಫರ್: ಈ ಹೋಟೆಲ್​ಗೆ ಒಂದು ಸಿಲಿಂಡರ್ ತಂದ್ರೆ ಸಾಕು, ತಿಂಗಳು ಪೂರ್ತಿ ಉಚಿತ ಬಿರಿಯಾನಿ ಹಬ್ಬ!

ಬೆಂಗಳೂರು, ಮಾರ್ಚ್ 24: ವಾಣಿಜ್ಯ ಗ್ಯಾಸ್ ಸಿಲಿಂಡರ್ (Commercial LPG) ಕೊರತೆ ಹಿನ್ನೆಲೆ ಹೊಸೂರಿನಲ್ಲಿ ಒಂದು ಹೋಟೆಲ್ ವಿಭಿನ್ನ ಹಾಗೂ ಗಮನಸೆಳೆಯುವ ಆಫರ್ ಘೋಷಿಸಿದೆ. ‘Help Us Cook, We’ll Feed You’ ಎಂಬ ಅಭಿಯಾನವನ್ನು ಆರಂಭಿಸಿರುವ ಈ ಹೋಟೆಲ್, ಗ್ರಾಹಕರ ಸಹಕಾರ ಪಡೆಯಲು ಹೊಸ ರೀತಿಯ ಪ್ರಯತ್ನಕ್ಕೆ ಮುಂದಾಗಿದೆ. ಹೊಸೂರು ರಸ್ತೆಯ ಗ್ರ್ಯಾಂಡ್ ಸಿನೆಮಾಸ್ ಸಮೀಪದಲ್ಲಿರುವ ಈರೋಡ್ ಅಮ್ಮಾಯಿ ಮೆಸ್ ಹೋಟೆಲ್‌ನಲ್ಲಿ ಈ ವಿಶೇಷ ಆಫರ್ ಜಾರಿಗೆ ಬಂದಿದೆ. ಗ್ಯಾಸ್ ಕೊರತೆಯಿಂದ ಅಡುಗೆ ಕಾರ್ಯದಲ್ಲಿ ತೊಂದರೆ ಎದುರಿಸುತ್ತಿರುವ ಹೋಟೆಲ್, ಗ್ರಾಹಕರಿಂದಲೇ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತರಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ.

ಹೊಸೂರಿನ ಹೋಟೆಲ್ ಆಫರ್ ಏನು?

ಹೋಟೆಲ್ ನೀಡಿರುವ ಆಫರ್ ವಿವರ ಹೀಗಿದ;

  • 1 ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತಂದರೆ – ಒಂದು ತಿಂಗಳು ಪ್ರತಿದಿನ 1 ಬಿರಿಯಾನಿ ಉಚಿತ
  • 2 ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತಂದರೆ – ಒಂದು ತಿಂಗಳು ಪ್ರತಿದಿನ 2 ಬಿರಿಯಾನಿ ಉಚಿತ

ಈ ಕುರಿತು ಹೋಟೆಲ್ ಮುಂದೆ ಬೋರ್ಡ್ ಹಾಕಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಈ ಆಫರ್ ವೈರಲ್ ಆಗುತ್ತಿದೆ.

ಹೋಟೆಲ್ ಆಫರ್​ನ ಪೋಸ್ಟರ್

ಗ್ಯಾಸ್ ಕೊರತೆಯಿಂದ ಹೋಟೆಲ್ ಉದ್ಯಮಕ್ಕೆ ಸಂಕಷ್ಟ

ಇಸ್ರೇಲ್, ಇರಾನ್, ಅಮೆರಿಕ ಯುದ್ಧದಿಂದಾಗಿ ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಸರಬರಾಜಿನಲ್ಲಿ ಉಂಟಾದ ವ್ಯತ್ಯಯದಿಂದ ಹಲವು ಹೋಟೆಲ್‌ಗಳು ಸಂಕಷ್ಟಕ್ಕೆ ಸಿಲುಕಿವೆ. ಅಡುಗೆ ಕಾರ್ಯ ನಿರ್ವಹಿಸಲು ಗ್ಯಾಸ್ ಅವಶ್ಯಕವಾಗಿದ್ದು, ಸರಬರಾಜು ಕಡಿಮೆಯಾಗಿರುವುದರಿಂದ ಹೋಟೆಲ್‌ಗಳು ಕಾರ್ಯಾಚರಣೆ ಮುಂದುವರಿಸುವುದು ಕಷ್ಟವಾಗುತ್ತಿದೆ. ಬೆಂಗಳೂರಿನಲ್ಲಂತೂ ಅನೇಕ ಹೋಟೆಲ್​​ಗಳು ಬಂದ್ ಆಗಿವೆ. ಇನ್ನೂ ಅನೇಕ ಹೋಟೆಲ್​ಗಳು ದುಬಾರಿ ದರದಲ್ಲಿ ಕಮರ್ಷಿಯಲ್ ಸಿಲಿಂಡರ್ ಖರೀದಿಸಿ ಗ್ರಾಹಕರಿಗೆ ಹೆಚ್ಚುವರಿ ದರಕ್ಕೆ ತಿಂಡಿ-ತಿನಿಸು ನೀಡುತ್ತಿವೆ. ಹಲವು ಹೋಟೆಲ್​ಗಳಲ್ಲಿ ಬಿಲ್​ನಲ್ಲಿ ‘ಗ್ಯಾಸ್ ಶುಲ್ಕ’ ಸೇರ್ಪಡೆಯಾಗಿವೆ.

ಇದನ್ನೂ ಓದಿ: ಗ್ಯಾಸ್ ಟ್ರಬಲ್: ಹೋಟೆಲ್ ಮಾಲೀಕರು ವಿಲ ವಿಲ; ಸೌದೆ ಒಲೆ ದರ ದುಪ್ಪಟ್ಟು

ಒಟ್ಟಿನಲ್ಲಿ, ಗ್ಯಾಸ್ ಕೊರತೆಯಂತಹ ಸಮಸ್ಯೆಯನ್ನು ಸೃಜನಾತ್ಮಕವಾಗಿ ಎದುರಿಸಲು ಹೊಸೂರು ಹೋಟೆಲ್ ಕೈಗೊಂಡಿರುವ ಈ ಪ್ರಯತ್ನ ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *