ಪಾಟ್ನಾ, ಜೂನ್ 29: ಬಿಹಾರದ ಪಾಟ್ನಾದಲ್ಲಿರುವ ಏಷ್ಯಾದ ಅತಿ ದೊಡ್ಡ ಚಿತಾಗಾರಗಳಲ್ಲಿ ಒಂದಾದ ‘ಬಾನ್ಸ್ ಘಾಟ್’ ಅನ್ನು ಇಶಾ ಔಟ್‌ರೀಚ್ ಸಂಸ್ಥೆಯು ಆಧುನೀಕರಣಗೊಳಿಸುತ್ತಿದೆ. ಇಶಾ ಫೌಂಡೇಷನ್ (Isha Foundation) ತಮಿಳುನಾಡು ಸರ್ಕಾರದ ಸಹಯೋಗದೊಂದಿಗೆ ಚಿತಾಗಾರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅನುಭವವನ್ನು ಗುರುತಿಸಿ, ಬಿಹಾರ ಸರ್ಕಾರವು ಪಾಟ್ನಾದ ‘ಬಾನ್ಸ್ ಘಾಟ್ ಚಿತಾಗಾರ’ದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ವಹಿಸಿಕೊಳ್ಳಲು ಇಶಾ ಫೌಂಡೇಶನ್‌ನ ಸಾಮಾಜಿಕ ಮತ್ತು ಪರಿಸರ ಕಲ್ಯಾಣ ವಿಭಾಗವಾದ ‘ಇಶಾ ಔಟ್‌ರೀಚ್’ ಅನ್ನು ಆಹ್ವಾನಿಸಿದೆ.
ಸಾಂಪ್ರದಾಯಿಕ ಅಂತ್ಯಸಂಸ್ಕಾರದ ಪವಿತ್ರತೆಯನ್ನು ಕಾಪಾಡಿಕೊಳ್ಳುವ ಜೊತೆಗೆ, ಗೌರವಾನ್ವಿತ, ಸುಲಭ ಮತ್ತು ವೃತ್ತಿಪರ ಅಂತ್ಯಸಂಸ್ಕಾರ ಸೇವೆಗಳನ್ನು ಒದಗಿಸಲು ಬಾನ್ಸ್ ಘಾಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಬಾನ್ಸ್ ಘಾಟ್ ಚಿತಾಗಾರದ ಪ್ರಮುಖ ವೈಶಿಷ್ಟ್ಯಗಳು ಇಲ್ಲಿವೆ:
ಬೃಹತ್ ಮೂಲಸೌಕರ್ಯ:
ಸುಮಾರು 4.5 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಬಾನ್ಸ್ ಘಾಟ್, ಏಷ್ಯಾದ ಅತಿ ದೊಡ್ಡ ಚಿತಾಗಾರಗಳಲ್ಲಿ ಒಂದಾಗಿದೆ ಮತ್ತು ಪೂರ್ವ ಭಾರತದ ಅತ್ಯಂತ ಆಧುನಿಕ ಚಿತಾಗಾರ ಸೌಲಭ್ಯಗಳಲ್ಲಿ ಒಂದಾಗಿದೆ. ಇಲ್ಲಿ ಏಕಕಾಲದಲ್ಲಿ 18 ಅಂತ್ಯಸಂಸ್ಕಾರಗಳನ್ನು ಮಾಡಲು ವ್ಯವಸ್ಥೆ ಕಲ್ಪಿಸಲಾಗಿದ್ದು, ದಿನಕ್ಕೆ ಸುಮಾರು 50 ಅಂತ್ಯಸಂಸ್ಕಾರಗಳನ್ನು ನಿರ್ವಹಿಸಬಹುದಾಗಿದೆ. ಇದು ಮೃತರ ಕುಟುಂಬಸ್ಥರಿಗೆ ದಕ್ಷ ಮತ್ತು ಗೌರವಾನ್ವಿತ ಸೇವೆಗಳನ್ನು ಖಚಿತಪಡಿಸುತ್ತದೆ.
ಇದನ್ನೂ ಓದಿ: ಇಶಾ ಫೌಂಡೇಶನ್ ಸ್ಮಶಾನ ನಿರ್ಮಿಸುವುದರ ವಿರುದ್ಧ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ
ಆಧುನಿಕ ಸೌಲಭ್ಯಗಳು:
ಈ ಚಿತಾಗಾರವು ಸ್ವಚ್ಛ, ಶಾಂತಿಯುತ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟ ವಾತಾವರಣದಲ್ಲಿ ವಿದ್ಯುತ್ ಮತ್ತು ಸಾಂಪ್ರದಾಯಿಕ ಕಟ್ಟಿಗೆ ಆಧಾರಿತ ಇವೆರಡೂ ಅಂತ್ಯಸಂಸ್ಕಾರದ ಸೌಲಭ್ಯಗಳನ್ನು ನೀಡುತ್ತದೆ. ಕಷ್ಟದ ಸಮಯದಲ್ಲಿ ಕುಟುಂಬಸ್ಥರಿಗೆ ಸುಲಭ, ಪಾರದರ್ಶಕ ಮತ್ತು ಸಹಾನುಭೂತಿಯ ಬೆಂಬಲ ಸಿಗುವಂತೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ.
ನಿಗದಿತ ದರಗಳು:
ವಿದ್ಯುತ್ ಚಿತಾಗಾರದ ಶುಲ್ಕವನ್ನು 3,500 ರೂ.ಗೆ ನಿಗದಿಪಡಿಸಲಾಗಿದೆ. ಇದು ಪುರಸಭೆಯ ಒಪ್ಪಂದದಡಿಯಲ್ಲಿ ಪ್ರಸ್ತುತ ಅನುಮತಿಸಲಾದ ಅತ್ಯಂತ ಕಡಿಮೆ ದರವಾಗಿದೆ (ಇದು ವಿದ್ಯುತ್ ಮತ್ತು ನಿರ್ವಹಣಾ ವೆಚ್ಚಗಳನ್ನು ಒಳಗೊಂಡಿರುತ್ತದೆ). ಇನ್ನು ಕಟ್ಟಿಗೆ ಆಧಾರಿತ ಅಂತ್ಯಸಂಸ್ಕಾರಕ್ಕೂ ಸೇವಾ ಶುಲ್ಕ 3,500 ರೂ. ಆಗಿರುತ್ತದೆ, ಆದರೆ ಕಟ್ಟಿಗೆಯ ವೆಚ್ಚವನ್ನು ಕುಟುಂಬಸ್ಥರೇ ಪ್ರತ್ಯೇಕವಾಗಿ ಭರಿಸಬೇಕಾಗುತ್ತದೆ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ ಸೇವೆ:
ಇಶಾ ಔಟ್‌ರೀಚ್ ಬಾನ್ಸ್ ಘಾಟ್ ಚಿತಾಗಾರದಲ್ಲಿ ‘ಅಂತ್ಯೋದಯ ಅನ್ನ ಯೋಜನೆ’ (AAY) ಕಾರ್ಡ್ ಹೊಂದಿರುವವರಿಗೆ ಉಚಿತ ಅಂತ್ಯಸಂಸ್ಕಾರ ಸೇವೆಗಳನ್ನು ನೀಡುತ್ತದೆ. ಆರ್ಥಿಕ ಸಂಕಷ್ಟವು ಗೌರವಾನ್ವಿತ ವಿದಾಯಕ್ಕೆ ಅಡ್ಡಿಯಾಗಬಾರದು ಎಂಬುದು ಇದರ ಉದ್ದೇಶವಾಗಿದೆ.
ಇದನ್ನೂ ಓದಿ: ಇಶಾ ಫೌಂಡೇಷನ್ನಲ್ಲಿ ಸದ್ಗುರು ಜೊತೆ ಶಿವರಾತ್ರಿ ಆಚರಿಸಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಪರಿಸರ ಸ್ನೇಹಿ ಕ್ರಮಗಳು:
ಪ್ರಸ್ತುತ ಇರುವ ವಿದ್ಯುತ್ ಚಿತಾಗಾರದ ಕುಲುಮೆಗಳನ್ನು ನಿರ್ವಹಿಸುವುದರ ಜೊತೆಗೆ, ಇಶಾ ಔಟ್‌ರೀಚ್ ಕ್ರಮೇಣ ಕಟ್ಟಿಗೆ ಆಧಾರಿತ ಕುಲುಮೆಗಳನ್ನು ಎಲ್‌ಪಿಜಿ (LPG) ಆಧಾರಿತ ಕುಲುಮೆಗಳಾಗಿ ಪರಿವರ್ತಿಸಲಿದೆ. ಈ ಬದಲಾವಣೆಯು ಸಾಂಪ್ರದಾಯಿಕ ಅಂತ್ಯಸಂಸ್ಕಾರದ ಪವಿತ್ರತೆಯನ್ನು ಕಾಪಾಡುವ ಜೊತೆಗೆ, ಕಟ್ಟಿಗೆ ಬಳಕೆಯನ್ನು ಮತ್ತು ವಾಯು ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
ಇಶಾ ಔಟ್‌ರೀಚ್ ಕಳೆದ 15 ವರ್ಷಗಳಿಗೂ ಹೆಚ್ಚು ಕಾಲ ತಮಿಳುನಾಡು ಸರ್ಕಾರದೊಂದಿಗೆ ಪಾಲುದಾರಿಕೆ ಹೊಂದಿದ್ದು, ರಾಜ್ಯದಾದ್ಯಂತ ಚಿತಾಗಾರಗಳನ್ನು ನಿರ್ವಹಿಸುತ್ತಿದೆ. ಪ್ರಸ್ತುತ ಇದು 33 ಚಿತಾಗಾರಗಳನ್ನು ನಿರ್ವಹಿಸುತ್ತಿದ್ದು, ಪಾರದರ್ಶಕ ಮತ್ತು ವೃತ್ತಿಪರ ವ್ಯವಸ್ಥೆಯ ಮೂಲಕ 1.25 ಲಕ್ಷಕ್ಕೂ ಹೆಚ್ಚು ಅಂತ್ಯಸಂಸ್ಕಾರಗಳನ್ನು ನೆರವೇರಿಸಿದೆ. ತಮಿಳುನಾಡಿನಲ್ಲಿ ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳಿಗೆ ಉಚಿತ ಸೇವೆ ನೀಡುತ್ತಿದ್ದು, ಅದೇ ಸೇವೆಯನ್ನು ಈಗ ಪಾಟ್ನಾದ ಬಾನ್ಸ್ ಘಾಟ್‌ಗೂ ವಿಸ್ತರಿಸಲಾಗಿದೆ.
ಬಾನ್ಸ್ ಘಾಟ್ ಮಾತ್ರವಲ್ಲದೆ, ಬಿಹಾರ ಸರ್ಕಾರವು ಬೇಗುಸರಾಯ್ (ಸಿಮಾರಿಯಾ), ಭಾಗಲ್ಪುರ್, ಗಯಾ ಮತ್ತು ಸಹರ್ಸಾಗಳಲ್ಲಿರುವ ಚಿತಾಗಾರಗಳನ್ನು ಇಶಾ ಔಟ್‌ರೀಚ್‌ಗೆ ವಹಿಸಿಕೊಟ್ಟಿದೆ ಹಾಗೂ ಛಪ್ರಾದಲ್ಲಿ ಸ್ಥಳ ಹಂಚಿಕೆ ಪ್ರಕ್ರಿಯೆ ನಡೆಯುತ್ತಿದೆ. ಸದ್ಯಕ್ಕೆ ಇಶಾ ಔಟ್‌ರೀಚ್ ಕೇವಲ ಬಾನ್ಸ್ ಘಾಟ್ ಚಿತಾಗಾರದ ಕಾರ್ಯಾಚರಣೆಯ ಜವಾಬ್ದಾರಿಯನ್ನು ಮಾತ್ರ ವಹಿಸಿಕೊಂಡಿದೆ. ಈ ಎಲ್ಲಾ ಚಿತಾಗಾರಗಳ ಮಾಲೀಕತ್ವವು ಬಿಹಾರ ಸರ್ಕಾರದ ಬಳಿಯೇ ಇರಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
