ಬಿಹಾರ ವಿದ್ಯಾರ್ಥಿಗಳ ಪ್ರತಿಭಟನೆ; ಎಕೆ-47 ಬಳಸಿದ ಘಟನೆ, ಕಾನ್ಸ್​ಟೆಬಲ್ ಅಮಾನತು ಬಳಿಕ ಎಸ್​ಪಿ ತಲೆದಂಡ – Kannada News | Police using AK 47 during Bihar students protest, Siwan top cop transferred

ಇದು ಅಂದಿನ ಸಿವಾನ್ ಘಟನೆಯ ಚಿತ್ರವಲ್ಲ. ಬಿಹಾರದ ಪಟ್ನಾದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆಯ ಚಿತ್ರ ಇದು…Image Credit source: Getty Images

ಪಾಟ್ನಾ, ಆಗಸ್ಟ್ 18: ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ಬಿಹಾರದ ಸಿವಾನ್ ಜಿಲ್ಲೆಯಲ್ಲಿ (Siwan, Bihar) ಜುಲೈ ತಿಂಗಳಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ (Students Protest on NEET) ವೇಳೆ ಪೊಲೀಸರು ಎಕೆ-47 ರೈಫಲ್ ಬಳಸಿದ ವಿವಾದದ ಹಿನ್ನೆಲೆಯಲ್ಲಿ, ಸಿವಾನ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (SP) ಪುರನ್ ಕುಮಾರ್ ಝಾ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. ಅವರನ್ನು ವರ್ಗಾವಣೆ ಮಾಡಲಾಗಿದೆ. ಸದ್ಯಕ್ಕೆ ಅವರಿಗೆ ಯಾವುದೇ ಹೊಸ ಹುದ್ದೆಯನ್ನು ನೀಡಿಲ್ಲ. ಎಕೆ-47 ರೈಫಲ್ ಬಳಸಿದ್ದ ಕಾನ್ಸ್​ಟೆಬಲ್ ಅಭಿಷೇಕ್ ಕುಮಾರ್ ಅವರನ್ನು ಈ ಹಿಂದೆಯೇ ಅಮಾನತುಗೊಳಿಸಲಾಗಿದೆ. ಈಗ ಉನ್ನತಾಧಿಕಾರಿಯ ಸರದಿಯಾಗಿದೆ.

ಜುಲೈ 25 ರಂದು ಸಿವಾನ್‌ನ ಜೆಪಿ ಚೌಕ್ ಬಳಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಪ್ರತಿಭಟನಾಕಾರರ ಗುಂಪಿನ ನಡುವೆ ಸಿಲುಕಿದ್ದ ಕಾನ್‌ಸ್ಟೆಬಲ್ ಅಭಿಷೇಕ್ ಕುಮಾರ್, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಎಕೆ-47 ನಿಂದ ಗಾಳಿಯಲ್ಲಿ ನಾಲ್ಕು ಸುತ್ತು ಗುಂಡು ಹಾರಿಸಿದ್ದರು ಎನ್ನಲಾಗಿದೆ. ಈ ಘಟನೆಯು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ಪೊಲೀಸರಿಂದ ಸೋಷಿಯಲ್ ಮೀಡಿಯಾದಲ್ಲಿ ಆರೋಪಿಗಳ ಫೋಟೋ ಪ್ರಕಟಣೆ; X, ಮೆಟಾ, ಕೇಂದ್ರಕ್ಕೆ ಸುಪ್ರೀಂಕೋರ್ಟ್ ನೋಟೀಸ್

ಸರ್ಕಾರದ ಸ್ಪಷ್ಟನೆ: ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಬಿಹಾರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ. ಕಾನ್‌ಸ್ಟೆಬಲ್ ಅವರು ಪ್ರತಿಭಟನಾಕಾರರ ಗುಂಪಿನ ನಡುವೆ ಸಿಲುಕಿದ್ದಾಗ, ಪರಿಸ್ಥಿತಿಯನ್ನು ನಿಭಾಯಿಸಲು ಅನಿವಾರ್ಯವಾಗಿ ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

ಆದರೆ, ಅಂದಿನ ಘಟನೆಯ ದಿನದಂದು ಪೊಲೀಸ್ ಕ್ರಮದಿಂದ ಮೂವರು ಪ್ರತಿಭಟನಾಕಾರರಿಗೆ ಗಾಯಗಳಾಗಿದ್ದವು. ಆದರೆ, ಎಕೆ-47 ರೈಫಲ್​ನಿಂದ ಹಾರಿಸಲಾದ ಗುಂಡಿಗೂ ಆ ಗಾಯ ಘಟನೆಗೂ ಸಂಬಂಧ ಇಲ್ಲ ಎಂದೂ ಸರ್ಕಾರ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಜಂತರ್ ಮಂತರ್ ವಿದ್ಯಾರ್ಥಿ ಪ್ರತಿಭಟನೆ: ಬಲಪ್ರಯೋಗದ ಆರೋಪವನ್ನು ತಳ್ಳಿಹಾಕಿದ ದೆಹಲಿ ಪೊಲೀಸ್

ಗುಂಡು ಹಾರಿಸಿದ ಕಾನ್‌ಸ್ಟೆಬಲ್ ಅಭಿಷೇಕ್ ಕುಮಾರ್ ಅವರನ್ನು ಈಗಾಗಲೇ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇದೀಗ ಸಿವಾನ್ ಜಿಲ್ಲೆಯ ಉಸ್ತುವಾರಿ ಹೊಂದಿದ್ದ ಎಸ್‌ಪಿ ಪುರನ್ ಕುಮಾರ್ ಝಾ ಅವರನ್ನೂ ಸ್ಥಾನದಿಂದ ತೆರವುಗೊಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *