ಬೀದಿ ನಾಯಿಗೆ ಅನ್ನ ಹಾಕಿ ಪೇಚೆಗೆ ಸಿಲುಕಿದ ವ್ಯಕ್ತಿ!
ಕಾರವಾರ, ಏಪ್ರಿಲ್ 20: ಹಲವರು ಬೀದಿ ನಾಯಿಗಳಿಗೆ (Street Dog) ಆಹಾರ ಹಾಕುವ ಹವ್ಯಾಸ ಹೊಂದಿರುತ್ತಾರೆ. ದಿನಕ್ಕೆ ಒಮ್ಮೆಯಾಗಲಿ, ಮೂರು ಹೊತ್ತಾಗಲಿ ಮನೆಯಲ್ಲಿ ತಾವು ತಿನ್ನುವ ಆಹಾರದಲ್ಲೇ ಸ್ವಲ್ಪ ಪ್ರಮಾಣವನ್ನು ಬೀದಿ ನಾಯಿಗಳಿಗೂ ಹಾಕುತ್ತಾರೆ. ಅಂತೆಯೇ ಕಾರವಾರದಲ್ಲಿ ಬೀದಿ ನಾಯಿಯೊಂದಕ್ಕೆ ಆಹಾರ ಹಾಕುತ್ತಿದ್ದ ಯುವಕ ಪೇಚೆಗೆ ಸಿಲುಕಿರುವ ಘಟನೆ ನಡೆದಿದೆ. ಆ ನಾಯಿ ಊರಲ್ಲಿ ಕೆಲವರ ಮೇಲೆ ದಾಳಿ ಮಾಡಿದೆ ಎಂದು ಗ್ರಾಮ ಪಂಚಾಯಿತಿ ಪಿಡಿಒ, ಅದರ ತಪ್ಪನ್ನು ಯುವಕನ ಮೇಲೆ ಹೊರಿಸಿದ್ದಾರೆ. ಇದನ್ನು ಪ್ರಶ್ನಿಸಿ ವ್ಯಕ್ತಿ ಜಿಲ್ಲಾಧಿಕಾರಿ ಮೊರೆ ಹೋಗಿದ್ದಾನೆ.
ಹಲವರ ಮೇಲೆ ದಾಳಿ ಮಾಡಿರುವ ನಾಯಿ
ಬೈರಾ ಗ್ರಾಮದ ತುಶಾರ್ ಲೊಳೆಕರ ಅವರು ಬಸ್ ನಿಲ್ದಾಣದ ಬಳಿ ಇದ್ದ ಅನಾರೋಗ್ಯ ಪೀಡಿತ ಬಿದಿ ನಾಯಿಗೆ ಕಳೆದ ಕೆಲ ದಿನಗಳಿಂದ ನಿತ್ಯ ಆಹಾರ ನೀಡುತ್ತಿದ್ದರು. ಮಾನವೀಯತೆ ದೃಷ್ಟಿಯಿಂದ ಮಾಡಿದ ಈ ಕಾರ್ಯ ಇದೀಗ ಅವರಿಗೆ ಸಂಕಷ್ಟ ತಂದೊಡ್ಡಿದೆ. ಇತ್ತೀಚೆಗೆ ಆ ಶ್ವಾನದಲ್ಲಿ ಅಸಹಜ ವರ್ತನೆ ಕಾಣಿಸಿಕೊಂಡಿದ್ದು, ಕೆಲವರ ಮೇಲೆ ದಾಳಿ ಮಾಡಿದ ಘಟನೆಗಳೂ ವರದಿಯಾಗಿವೆ.
ವ್ಯಕ್ತಿ ಹೇಳಿದ್ದೇನು ಕೇಳಿ
ಜಿಲ್ಲಾಧಿಕಾರಿ ಮೊರೆ ಹೋದ ವ್ಯಕ್ತಿ
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಂಚಾಯ್ತಿಗೆ ದೂರು ನೀಡಿದ್ದು, ಪರಿಶೀಲನೆ ನಡೆಸಿದ ಪಂಚಾಯ್ತಿ ಅಧಿಕಾರಿಗಳು, ಶ್ವಾನಕ್ಕೆ ಆಹಾರ ನೀಡುತ್ತಿದ್ದ ತುಶಾರ್ ಅವರನ್ನೇ ಅದರ ನಿರ್ವಹಣೆಗೆ ಹೊಣೆಗಾರರನ್ನಾಗಿ ಮಾಡಿ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ಶ್ವಾನದ ಸಂಪೂರ್ಣ ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಳ್ಳಲಾಗದ ತುಶಾರ್, ತಾವು ಕೇವಲ ಮಾನವೀಯತೆಯಿಂದ ಆಹಾರ ನೀಡಿದ್ದಷ್ಟೇ ಹೊರತು ಶ್ವಾನದ ಮಾಲೀಕರಲ್ಲ ಎಂದು ಹೇಳಿ ಪಂಚಾಯ್ತಿಯ ಕ್ರಮ ಪ್ರಶ್ನಿಸಿ ಜಿಲ್ಲಾಧಿಕಾರಿಯ ಮೊರೆ ಹೋಗಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
