ಗಾಂಧಿ ಬಜಾರ್‌ನಲ್ಲಿ ಅಕ್ರಮ ಪಾರ್ಕಿಂಗ್ ಕಾಟImage Credit source: tv9
ಬೆಂಗಳೂರು, ಆಗಸ್ಟ್ 4: ಬೆಂಗಳೂರು (Bengaluru) ನಗರದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ, ಪಾದಚಾರಿಗಳ ಸುರಕ್ಷತೆಗೆ ಅಗತ್ಯವಾದ ಮೂಲಸೌಕರ್ಯ ಮಾತ್ರ ಇನ್ನೂ ಸಮರ್ಪಕವಾಗಿಲ್ಲ. ಬೆಂಗಳೂರಿನ ಗಾಂಧಿ ಬಜಾರ್‌ನಲ್ಲಿ ಫುಟ್‌ಪಾತ್‌ಗಳನ್ನೇ ವಾಹನಗಳ ಪಾರ್ಕಿಂಗ್ ಹಾಗೂ ಅತಿಕ್ರಮಣಕ್ಕೆ ಬಳಸುತ್ತಿರುವುದರಿಂದ ಪಾದಚಾರಿಗಳು ರಸ್ತೆಯಲ್ಲೇ ನಡೆದುಕೊಂಡು ಹೋಗುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಂಧಿ ಬಜಾರ್‌ನ ಹಲವು ಕಡೆ ಫುಟ್‌ಪಾತ್‌ಗಳ ಮೇಲೆ ಕಾರು, ಬೈಕ್‌ಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ. ಮತ್ತೊಂದೆಡೆ ಬೀದಿ ಬದಿ ವ್ಯಾಪಾರಿಗಳು ಹಾಗೂ ಇತರ ಅತಿಕ್ರಮಣಗಳಿಂದ ಪಾದಚಾರಿಗಳಿಗೆ ಫುಟ್‌ಪಾತ್ ಬಳಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜನರು ವಾಹನಗಳ ನಡುವೆಯೇ ರಸ್ತೆಯಲ್ಲಿ ಸಂಚರಿಸಬೇಕಾಗಿದ್ದು, ಅಪಘಾತದ ಆತಂಕ ಎದುರಾಗಿದೆ.
ವಿಶೇಷವಾಗಿ ಜನನಿಬಿಡ ಪ್ರದೇಶವಾಗಿರುವ ಗಾಂಧಿ ಬಜಾರ್‌ನಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ಓಡಾಡುತ್ತಾರೆ. ಆದರೆ ಪಾದಚಾರಿಗಳಿಗಾಗಿ ಮೀಸಲಿರುವ ಜಾಗವೇ ವಾಹನಗಳ ಪಾಲಾಗಿರುವುದರಿಂದ ವೃದ್ಧರು, ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ ಎಲ್ಲರೂ ಸಮಸ್ಯೆ ಎದುರಿಸುವಂತಾಗಿದೆ.
ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆದರೂ ಮತ್ತದೇ ಸಮಸ್ಯೆ
ಫುಟ್‌ಪಾತ್ ಅತಿಕ್ರಮಣ ಹಾಗೂ ಅಕ್ರಮ ಪಾರ್ಕಿಂಗ್ ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಆಗಾಗ್ಗೆ ಕಾರ್ಯಾಚರಣೆ ನಡೆಸುತ್ತಾರೆ. ಆದರೆ ಕಾರ್ಯಾಚರಣೆ ಮುಗಿದ ಕೆಲವೇ ದಿನಗಳಲ್ಲಿ ಮತ್ತೆ ಫುಟ್‌ಪಾತ್‌ಗಳಲ್ಲಿ ವಾಹನಗಳ ನಿಲುಗಡೆ ಹಾಗೂ ಅತಿಕ್ರಮಣ ಮುಂದುವರಿಯುತ್ತಿದೆ ಎಂಬುದು ಸಾರ್ವಜನಿಕರ ಆರೋಪ.
ಪಾದಚಾರಿಗಳಿಗಾಗಿ ನಿರ್ಮಿಸಿರುವ ಫುಟ್‌ಪಾತ್‌ಗಳನ್ನು ಅದೇ ಉದ್ದೇಶಕ್ಕೆ ಬಳಸುವಂತೆ ನೋಡಿಕೊಳ್ಳಬೇಕು. ಅಕ್ರಮ ಪಾರ್ಕಿಂಗ್ ಮತ್ತು ಅತಿಕ್ರಮಣದ ವಿರುದ್ಧ ನಿರಂತರ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ 490 ಕಿ.ಮೀ. ಗಡಿ ದಾಟಿದ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ: ಜಿಬಿಎ ಗುರಿ ಎಷ್ಟು ಗೊತ್ತಾ?
ವಾಹನಗಳ ಸಂಚಾರಕ್ಕೆ ನೀಡುವಷ್ಟೇ ಆದ್ಯತೆಯನ್ನು ಪಾದಚಾರಿಗಳ ಸುರಕ್ಷತೆಗೂ ನೀಡಬೇಕು. ಫುಟ್‌ಪಾತ್ ಇದ್ದರೂ ಅದನ್ನು ಬಳಸಲು ಸಾಧ್ಯವಾಗದ ಪರಿಸ್ಥಿತಿ ಮುಂದುವರಿದರೆ, ನಗರದಲ್ಲಿ ಪಾದಚಾರಿಗಳ ಸುರಕ್ಷತೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಎದುರಾಗಿದೆ.
ವರದಿ: ನಟರಾಜ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
