ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಮೊದಲಾರ್ಧದ ಐಪಿಎಲ್ ಮುಗಿದ ಬಳಿಕ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಗಾಯದಿಂದ ಚೇತರಿಸಿಕೊಂಡು ಡೆಲ್ಲಿ ತಂಡವನ್ನು ಕೂಡಿಕೊಂಡಿರುವ ಸ್ಟಾರ್ಕ್ ಆಡಿದ ಮೊದಲ ಪಂದ್ಯದಲ್ಲಿಯೇ ಅಮೋಘ ಪ್ರದರ್ಶನ ನೀಡಿದರು.
ರಾಜಸ್ಥಾನ ರಾಯಲ್ಸ್ ವಿರುದ್ಧ ಈ ಆವೃತ್ತಿಯಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಿದ ಸ್ಟಾರ್ಕ್ ಡೆಲ್ಲಿ ಕ್ಯಾಪಿಟಲ್ಸ್ ಪರ ಮೂರು ವಿಕೆಟ್ಗಳನ್ನು ಕಬಳಿಸಿದರು. ಸ್ಟಾರ್ಕ್ ಈ ಪಂದ್ಯದಲ್ಲಿ ಸ್ವಲ್ಪ ದುಬಾರಿಯಾದರೂ ಕಳೆದ 8 ಪಂದ್ಯಗಳಲ್ಲಿ ಜಸ್ಪ್ರೀತ್ ಬುಮ್ರಾಗೆ ಮಾಡಲು ಸಾಧ್ಯವಾಗದ್ದನ್ನು ಸ್ಟಾರ್ಕ್ ಒಂದೇ ಪಂದ್ಯದಲ್ಲಿ ಮಾಡಿದರು.
ವಾಸ್ತವವಾಗಿ, ಐಪಿಎಲ್ 2026 ರಲ್ಲಿ ಸ್ಟಾರ್ಕ್ ಕೇವಲ ಒಂದು ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾಗಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರ ಕಳಪೆ ಫಾರ್ಮ್ ಇದಕ್ಕೆ ಕಾರಣ. ಈ ಆವೃತ್ತಿಯಲ್ಲಿ ಬುಮ್ರಾ ವಿಕೆಟ್ ಬರ ಎದುರಿಸುತ್ತಿದ್ದಾರೆ. ಬುಮ್ರಾ ರನ್ಗಳಿಗೆ ಕಡಿವಾಣ ಹಾಕುತ್ತಿದ್ದರೂ, ವಿಕೆಟ್ ಪಡೆಯಲು ಹೆಣಗಾಡುತ್ತಿದ್ದಾರೆ.
ಈ ಆವೃತ್ತಿಯಲ್ಲಿ ಬುಮ್ರಾ ಎಂಟು ಪಂದ್ಯಗಳನ್ನು ಆಡಿದ್ದು ಕೇವಲ ಎರಡು ವಿಕೆಟ್ಗಳನ್ನು ಮಾತ್ರ ಪಡೆದಿದ್ದಾರೆ. ಅವರು ತಮ್ಮ ಮೊದಲ ಐದು ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ್ ಪಡೆದಿರಲಿಲ್ಲ. ಒಟ್ಟಾರೆಯಾಗಿ, ಅವರ ಪ್ರದರ್ಶನವು ತುಂಬಾ ನಿರಾಶಾದಾಯಕವಾಗಿದೆ. ಈ ಆವೃತ್ತಿಯಲ್ಲಿ ಬುಮ್ರಾ ಅವರ ಬೌಲಿಂಗ್ ಸರಾಸರಿ 132 ತಲುಪಿದದು, ಇದು ಅವರ ಟಿ20 ವೃತ್ತಿಜೀವನದ ಅತ್ಯಂತ ಕೆಟ್ಟ ಸರಾಸರಿಯಾಗಿದೆ.
ಇನ್ನು ರಾಜಸ್ಥಾನ್ ವಿರುದ್ಧ ಮಾರಕ ಬೌಲಿಂಗ್ ಮಾಡಿದ ಸ್ಟಾರ್ಕ್ ಮೊದಲ ಓವರ್ನಲ್ಲೇ ಯಶಸ್ವಿ ಜೈಸ್ವಾಲ್ ಅವರ ವಿಕೆಟ್ ಉರುಳಿಸಿದರು. ಆ ನಂತರ 90 ರನ್ ಬಾರಿಸಿದ್ದ ನಾಯಕ ರಿಯಾನ್ ಪರಾಗ್ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ಪೆವಿಲಿಯನ್ಗಟ್ಟುವಲ್ಲಿ ಸ್ಟಾರ್ಕ್ ಯಶಸ್ವಿಯಾದರು.
