ಭಾರತೀಯ ಕ್ರಿಕೆಟ್‌ನಲ್ಲಿ ಕಾರ್ಯಭಾರ ನಿರ್ವಹಣೆ ಮತ್ತು ಆಟಗಾರರ ಫಿಟ್‌ನೆಸ್ ಎಂಬುದು ಸದಾ ಚರ್ಚೆಯಲ್ಲಿರುವ ವಿಷಯ. ಆದರೆ, ಇತ್ತೀಚೆಗೆ ಭಾರತ ತಂಡದ ಮಾಜಿ ನಾಯಕ ಹಾಗೂ ಮಾಜಿ ಮುಖ್ಯ ಆಯ್ಕೆಗಾರ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಅವರ ಲಭ್ಯತೆಯ ಕುರಿತು ನೀಡಿರುವ ಹೇಳಿಕೆ ಈಗ ಹೊಸದೊಂದು ಚರ್ಚೆಗೆ ನಾಂದಿ ಹಾಡಿದೆ.
ಜಸ್‌ಪ್ರೀತ್ ಬುಮ್ರಾ ಅವರನ್ನು “ಅವರು ಮುಂಬೈ ಇಂಡಿಯನ್ಸ್ ಆಟಗಾರ, ಅಪರೂಪಕ್ಕೊಮ್ಮೆ ಭಾರತ ತಂಡದ ಪರ ಆಡುತ್ತಾರೆ” ಎಂದು ಶ್ರೀಕಾಂತ್ ಕಟುವಾಗಿ ಟೀಕಿಸಿದ್ದಾರೆ. ಈ ಹೇಳಿಕೆಯು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಶ್ರೀಕಾಂತ್ ಆಕ್ರೋಶಕ್ಕೆ ಕಾರಣವೇನು?
ಜಸ್‌ಪ್ರೀತ್ ಬುಮ್ರಾ ಅವರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಯಾವುದೇ ದಣಿವಿಲ್ಲದೆ ಇಡೀ ಸೀಸನ್ ಆಡುತ್ತಾರೆ. ಆದರೆ, ಭಾರತ ತಂಡದ ಪ್ರಮುಖ ದ್ವಿಪಕ್ಷೀಯ ಸರಣಿಗಳು ಬಂದಾಗ ಗಾಯ ಅಥವಾ ವಿಶ್ರಾಂತಿಯ ಕಾರಣ ನೀಡಿ ಹೊರಗುಳಿಯುತ್ತಾರೆ ಎಂದು ಶ್ರೀಕಾಂತ್ ಟೀಕಿಸಿದ್ದಾರೆ.
- ಜಸ್‌ಪ್ರೀತ್ ಬುಮ್ರಾ ಫಿಟ್‌ನೆಸ್ ಸಮಸ್ಯೆಯ ಕಾರಣ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯವಾಡಿರಲಿಲ್ಲ.
- ಫಿಟ್‌ನೆಸ್ ಸಮಸ್ಯೆ ಹಿನ್ನಲೆ ಬುಮ್ರಾ ಇದೀಗ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದಲೂ ಹೊರಗುಳಿದಿದ್ದಾರೆ.
ಅಂದಿನ ಕಾಲದಲ್ಲಿ ಕಪಿಲ್ ದೇವ್ ಅವರಂತಹ ದಿಗ್ಗಜರು ಸತತವಾಗಿ ಬೌಲಿಂಗ್ ಮಾಡುವ ಮೂಲಕವೇ ಫಿಟ್‌ನೆಸ್ ಕಾಯ್ದುಕೊಳ್ಳುತ್ತಿದ್ದರು. ಆಧುನಿಕ ಕ್ರಿಕೆಟ್‌ನಲ್ಲಿ ಇಷ್ಟೆಲ್ಲಾ ವೈದ್ಯರು, ಫಿಸಿಯೋಗಳು ಇದ್ದರೂ ದಿನಕ್ಕೆ 20 ಓವರ್ ಬೌಲಿಂಗ್ ಮಾಡಲು ಸಾಧ್ಯವಾಗದಿದ್ದರೆ, ಅವರು ಕೇವಲ ಟಿ20 ಲೀಗ್‌ಗಳಿಗಷ್ಟೇ ಸೀಮಿತವಾಗಲಿ ಎಂದು ಶ್ರೀಕಾಂತ್ ಕಿಡಿಕಾರಿದ್ದಾರೆ.
ಇದೇ ಕಾರಣದಿಂದಾಗಿ ಶ್ರೀಕಾಂತ್, ಜಸ್‌ಪ್ರೀತ್ ಬುಮ್ರಾ ಅವರು ಮುಂಬೈ ಇಂಡಿಯನ್ಸ್ ಆಟಗಾರ. ಆಗೊಮ್ಮೆ ಈಗೊಮ್ಮೆ ಭಾರತದ ಪರ ಆಡುತ್ತಾರೆ ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.
ಪರ-ವಿರೋಧ ಚರ್ಚಗಳು:
ಶ್ರೀಕಾಂತ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು, ಕ್ರಿಕೆಟ್ ವಲಯದಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿದೆ.
ಭಾರತ ತಂಡದ ಪ್ರಮುಖ ದ್ವಿಪಕ್ಷೀಯ ಸರಣಿಗಳಿಂದ ಸ್ಟಾರ್ ಆಟಗಾರರು ಪದೇ ಪದೇ ವಿಶ್ರಾಂತಿ ಪಡೆಯುವುದರಿಂದ ತಂಡದ ಸ್ಥಿರತೆ ಹಾಳಾಗುತ್ತಿದೆ ಎಂದು ಕೆಲವರು ವಾದಿಸಿದರೆ, ಮತ್ತೆ ಕೆಲವರು ದೇಶದ ಪರ ಆಡುವುದಕ್ಕಿಂತ ಫ್ರಾಂಚೈಸಿ ಕ್ರಿಕೆಟ್‌ನಿಂದ ಬರುವ ಭಾರಿ ಮೊತ್ತ ಮತ್ತು ಒಪ್ಪಂದಗಳಿಗಾಗಿ ಅವರು ಶಕ್ತಿಯನ್ನು ಮೀಸರಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.
ಮತ್ತೊಂದೆಡೆ ಬುಮ್ರಾ ಅವರ ಬೌಲಿಂಗ್ ಆಕ್ಷನ್ ಅತ್ಯಂತ ವಿಶಿಷ್ಟವಾಗಿದ್ದು, ಅವರ ಬೆನ್ನಿನ ಮೂಳೆಗೆ ಭಾರಿ ಒತ್ತಡ ಬೀಳುತ್ತದೆ. ಅವರು ಈಗಾಗಲೇ ಬೆನ್ನುನೋವಿನ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ ಅವರ ಶರೀರಕ್ಕೆ ನಿರಂತರ ವಿಶ್ರಾಂತಿಯ ಅಗತ್ಯವಿದೆ ಎಂದು ಕೆಲವರು ತಮ್ಮ ಅನಿಸಿಕೆಗಳನ್ನು ಮುಂದಿಟ್ಟಿದ್ದಾರೆ.
ಇನ್ನೂ ಕೆಲವರು, ಬುಮ್ರಾ ದ್ವಿಪಕ್ಷೀಯ ಸರಣಿಗಳನ್ನು ತಪ್ಪಿಸಿಕೊಂಡರೂ, ಐಸಿಸಿ ಟಿ20 ವಿಶ್ವಕಪ್‌ನಂತಹ ಜಾಗತಿಕ ಟೂರ್ನಿಗಳಲ್ಲಿ ಮತ್ತು ಪ್ರಮುಖ ಟೆಸ್ಟ್ ಸರಣಿಗಳಲ್ಲಿ ಭಾರತಕ್ಕೆ ಐತಿಹಾಸಿಕ ಜಯ ತಂದುಕೊಟ್ಟಿದ್ದಾರೆ. ದೇಶಕ್ಕೆ ಅತ್ಯಂತ ಅಗತ್ಯವಿರುವಾಗ ಅವರು ಶೇ.100 ರಷ್ಟು ಶ್ರಮ ಹಾಕುತ್ತಾರೆ ಎಂಬುದನ್ನು ಮರೆಯುವಂತಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರರಿಗೆ ಗೌತಮ್ ಗಂಭೀರ್ ಖಡಕ್ ವಾರ್ನಿಂಗ್!
ಒಟ್ಟಿನಲ್ಲಿ ಜಸ್‌ಪ್ರೀತ್ ಬುಮ್ರಾ ಅವರ ಫಿಟ್‌ನೆಸ್ ನಿರ್ವಹಣೆ ಕುರಿತು ಕೃಷ್ಣಮಾಚಾರಿ ಶ್ರೀಕಾಂತ್ ಅವರ ಕಟು ಟೀಕೆಗಳು, ದೇಶೀಯ ಕ್ರಿಕೆಟ್ ಮತ್ತು ಐಪಿಎಲ್ ನಡುವಿನ ಆದ್ಯತೆಗಳ ಬಗ್ಗೆ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಈ ವಿವಾದವು, ಆಟಗಾರರ ದೀರ್ಘಾವಧಿ ವೃತ್ತಿಜೀವನಕ್ಕಾಗಿ ವಿಶ್ರಾಂತಿ ಅಗತ್ಯವಿದ್ದರೂ, ಐಪಿಎಲ್ ಮತ್ತು ರಾಷ್ಟ್ರೀಯ ಕರ್ತವ್ಯದ ನಡುವಿನ ವರ್ಕ್‌ಲೋಡ್ ಸಮತೋಲನದ ರಚನಾತ್ಮಕ ಸವಾಲನ್ನು ಎತ್ತಿ ತೋರಿಸುತ್ತದೆ.
