ಬೆಂಗಳೂರಲ್ಲಿ ಮತ್ತಷ್ಟು ಉಲ್ಬಣಿಸಿದ ಟ್ರಾಫಿಕ್​​ ಸಮಸ್ಯೆ: 1.47 ಕೋಟಿ ಗಡಿ ದಾಟಿದ ವಾಹನಗಳ ಸಂಖ್ಯೆ – Kannada News | Bengaluru’s Vehicle Count Soars to 1.47 Crore, 50 Lakh Added in Just Five Years

ಬೆಂಗಳೂರು, ಜುಲೈ 26: ಸಂಚಾರ ದಟ್ಟಣೆ ಸಮಸ್ಯೆಯಿಂದ ಸಿಲಿಕಾನ್​​ ಸಿಟಿ ಬೆಂಗಳೂರಿನ (Bengaluru) ನಿವಾಸಿಗಳು ಮೊದಲೇ ಹೈರಾಣಾಗಿರುವ ನಡುವೆ ಕಳೆದ ಐದು ವರ್ಷಗಳಲ್ಲಿ ದಾಖಲೆ ಪ್ರಮಾಣದ ಹೊಸ ವಾಹನಗಳು ನಗರದಲ್ಲಿ ರಸ್ತೆಗಿಳಿದಿರುವ ಮಾಹಿತಿಯೀಗ ಬಹಿರಂಗಗೊಂಡಿದೆ.  ನಗರದಲ್ಲಿ ವಾಹನಗಳ ಸಂಖ್ಯೆ ಸುಮಾರು 98 ಲಕ್ಷದಿಂದ 1.47 ಕೋಟಿಗೆ ಏರಿಕೆಯಾಗಿದ್ದು, ಸುಮಾರು 50 ಲಕ್ಷ ಹೊಸ ವಾಹನಗಳು ರಸ್ತೆಗೆ ಇಳಿದಿವೆ. ನಗರದ ಟ್ರಾಫಿಕ್ ಜಾಮ್ ಈಗ ನಿತ್ಯದ ಸಂಕಷ್ಟವಾಗಿ ಪರಿಣಮಿಸಿದ್ದು,  ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳದವರೆಗೆ ಮತ್ತು ಮೆಜೆಸ್ಟಿಕ್‌ನಿಂದ ವೈಟ್‌ಫೀಲ್ಡ್‌ವರೆಗೆ ಪ್ರಮುಖ ಜಂಕ್ಷನ್‌ಗಳಲ್ಲಿ ವಾಹನಗಳು ಕಿಲೋಮೀಟರ್‌ಗಳಷ್ಟು ಸಾಲುಗಟ್ಟಿ ನಿಲ್ಲುತ್ತಿವೆ. ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಪ್ರತಿದಿನ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಗಂಟೆಗಟ್ಟಲೆ ಕಾಲ ಕಳೆಯುವಂತಾಗಿದೆ.

ವರ್ಷವಾರು ಬೆಂಗಳೂರಿನಲ್ಲಿರುವ ವಾಹನಗಳ ಸಂಖ್ಯೆ

ವರ್ಷ ವಾಹನಗಳ ಸಂಖ್ಯೆ
2021 98 ಲಕ್ಷಕ್ಕೂ ಹೆಚ್ಚು
2022 1.07 ಕೋಟಿಗೂ ಹೆಚ್ಚು
2023 1.17 ಕೋಟಿಗೂ ಹೆಚ್ಚು
2024 1.27 ಕೋಟಿಗೂ ಹೆಚ್ಚು
2025 1.38 ಕೋಟಿಗೂ ಹೆಚ್ಚು
2026 1.47 ಕೋಟಿ (ಅಂದಾಜು)

ಇದನ್ನೂ ಓದಿ: ಮುಂದಿನ ತಿಂಗಳಿನಿಂದ ಹೊಸ ಕಾರುಗಳ ಬೆಲೆ ಭಾರೀ ಏರಿಕೆ; ಈ ತಿಂಗಳೇ ಬುಕ್ಕಿಂಗ್ ಮಾಡಲು ಮುಗಿಬಿದ್ದ ಜನ!

ಕೇವಲ 5 ರಿಂದ 10 ಕಿಲೋಮೀಟರ್ ಪ್ರಯಾಣಕ್ಕೂ 30 ರಿಂದ 60 ನಿಮಿಷಗಳಿಗೂ ಹೆಚ್ಚು ಸಮಯ ಬೇಕಾಗುತ್ತಿದ್ದು, ಜನರ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ. ಜೊತೆಗೆ ವಾಹನಗಳು ಒಂದೇ ಸ್ಥಳದಲ್ಲಿ ನಿಂತಿರುವುದರಿಂದ ಇಂಧನದ ಬಳಕೆ ಹೆಚ್ಚಾಗಿ, ವಾಯು ಮಾಲಿನ್ಯವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ಪ್ರಮುಖ ಜಂಕ್ಷನ್‌ಗಳ ವೈಜ್ಞಾನಿಕ ನಿರ್ವಹಣೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ವಿಸ್ತರಣೆ, ಅಕ್ರಮ ಪಾರ್ಕಿಂಗ್ ತೆರವು, ಸ್ಮಾರ್ಟ್ ಟ್ರಾಫಿಕ್ ಸಿಗ್ನಲ್‌ಗಳ ಪರಿಣಾಮಕಾರಿ ಬಳಕೆ ಹಾಗೂ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿ ಅಗತ್ಯವಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಬೆಂಗಳೂರಿನ ಬೆಳವಣಿಗೆಗೆ ತಕ್ಕಂತೆ ರಸ್ತೆ ಮತ್ತು ಸಾರಿಗೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸದಿದ್ದರೆ, ಮುಂದಿನ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ನಟರಾಜ್ ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 8:18 am, Sun, 26 July 26

Source link

Leave a Reply

Your email address will not be published. Required fields are marked *